ಸೇಂಟ್ ವಿನ್ಸೆಂಟ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನ (T20 World Cup) ಸೂಪರ್ 8 ಹಂತದ ಕೊನೆಯ ಹಾಗೂ ರೋಚಕ ಪಂದ್ಯದಲ್ಲಿ ನಾಯಕ, ಸ್ಪಿನ್ನರ್ ರಶೀದ್ ಖಾನ್ ಕೈಚಳಕ ಹಾಗೂ ವೇಗಿ ನವೀನ್ ಉಲ್ ಹಕ್ ಕರಾರುವಕ್ಕು ದಾಳಿಯಿಂದ ಬಾಂಗ್ಲಾದೇಶದ ವಿರುದ್ಧ 9 ರನ್ ಅಂತರದ ಗೆಲುವು ಸಾಧಿಸುವ ಮೂಲಕ ಅಫ್ಘಾನಿಸ್ತಾನ ಸೆಮಿ ಫೈನಲ್ ಪ್ರವೇಶಿಸಿದೆ. ಇದರೊಂದಿಗೆ, ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ. ಅಫ್ಘಾನಿಸ್ತಾನ ತಂಡವು ಇದೇ ಮೊದಲ ಬಾರಿಗೆ ವಿಶ್ವಕಪ್ ಸೆಮಿ ಫೈನಲ್ ಪ್ರವೇಶಿಸಿ ದಾಖಲೆ ಬರೆದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 115 ರನ್ ಗಳಿಸಿತು. ಗೆಲ್ಲಲು ಬಾಂಗ್ಲಾದೇಶಕ್ಕೆ 116 ರನ್ಗಳ ಗುರಿ ನಿಗದಿಯಾಗಿದ್ದರೂ ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆಯಾಗಿ ಓವರ್ಗಳನ್ನು 19ಕ್ಕೆ ಕಡಿತಗೊಳಿಸಲಾಯಿತು. ಗೆಲುವಿನ ಗುರಿ ಕೂಡ 114ಕ್ಕೆ ಪರಿಷ್ಕರಿಸಲಾಯಿತು. ಬಾಂಗ್ಲಾದೇಶ 17.5 ಓವರ್‌ಗಳಲ್ಲಿ 105 ರನ್ಗಳಿಗೆ ಸರ್ವ ಪತನ ಕಂಡಿತು.
ಟಿ20 ವಿಶ್ವಕಪ್‌ನಲ್ಲಿ ಸೆಮಿ ಫೈನಲ್ ಪ್ರವೇಶಿಸುವ ಮೂಲಕ ಅಫ್ಘಾನಿಸ್ತಾನ ಇತಿಹಾಸವನ್ನೇ ನಿರ್ಮಿಸಿದೆ. ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ, ಅವರು ಮೊದಲ ಬಾರಿಗೆ ಸೆಮಿಫೈನಲ್‌ಗೆ ಟಿಕೆಟ್ ಪಡೆದಿದ್ದಾರೆ. ಇದರೊಂದಿಗೆ, 2024 ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಡುವ ಆಸ್ಟ್ರೇಲಿಯಾದ ಆಸೆ ಕೊನೆಗೊಂಡಿದೆ. ಈ ಮೂಲಕ ಈ ಹಿಂದಿನ ಟಿ20 ಚಾಂಪಿಯನ್ ಆಸ್ಟ್ರೇಲಿಯಾ ಈ ಬಾರಿ ಸೂಪರ್-8ರಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದೆ. ಅಫ್ಘಾನಿಸ್ತಾನ ಕ್ರಿಕೆಟ್‌ಗೆ ಈ ಗೆಲುವು ಐತಿಹಾಸಿಕವಾಗಿದೆ. ಏಕೆಂದರೆ ಈ ಗೆಲುವು ಅಫ್ಘಾನಿಸ್ತಾನವನ್ನು ವಿಶ್ವ ಚಾಂಪಿಯನ್ ಆಗುವ ಕನಸಿನತ್ತ ಒಂದು ಹೆಜ್ಜೆ ಮುಂದೆ ಇರಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡಕ್ಕೆ ಆರಂಭಿಕ ಜೋಡಿಯು ಭದ್ರ ಬುನಾದಿ ಹಾಕಿಕೊಟ್ಟಿತು. ಆರಂಭಿಕ ಜೋಡಿ ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜದ್ರಾನ್ ಆರಂಭಿಕ ವಿಕೆಟ್‌ಗೆ 59 ರನ್ ಸೇರಿಸಿದರು. ಇದರ ನೆರವಿನಿಂದ ತಂಡವು 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 115 ರನ್ ಗಳಿಸಿತು.
ಇದನ್ನೂ ಓದಿ: ಸೇಡಿನ ಸಮರದಲ್ಲಿ ಆಸೀಸ್ಗೆ ಮಣ್ಣು ಮುಕ್ಕಿಸಿದ ಟೀಂ ಇಂಡಿಯಾ..!
ಗುರಿ ಬೆನ್ನತ್ತಿದ ಬಾಂಗ್ಲಾದೇಶ ಪರ ಇಬ್ಬರು ದೊಡ್ಡ ಬ್ಯಾಟ್ಸ್‌ಮನ್‌ಗಳು (ಶಕೀಬ್ ಅಲ್ ಹಸನ್ ಮತ್ತು ತಂಜೀದ್ ಹಸನ್) ಖಾತೆ ತೆರೆಯಲು ವಿಫಲರಾದರು. ಇವುಗಳ ಹೊರತಾಗಿ ಕ್ಯಾಪ್ಟನ್ ಶಾಂಟೊ ಕೂಡ ಅಫ್ಘಾನಿಸ್ತಾನ ವಿರುದ್ಧ ವಿಶೇಷ ಸಾಧನೆ ಮಾಡಲಾಗಲಿಲ್ಲ. ಕೇವಲ 5 ಎಸೆತಗಳನ್ನು ಎದುರಿಸಿದ ಅವರು ಕೇವಲ 5 ರನ್ ಗಳಿಸಿದರು.
ಅತ್ತ ಅಫ್ಘಾನಿಸ್ತಾನದ ಪರ ನಾಯಕ ರಶೀದ್ ಖಾನ್ 4 ಓವರ್‌ಗಳಲ್ಲಿ ಕೇವಲ 23 ರನ್ ನೀಡಿ 4 ವಿಕೆಟ್ ಕಬಳಿಸಿದರು. ನವೀನ್ ಉಲ್ ಹಕ್ 4 ಓವರ್‌ಗಳಲ್ಲಿ 26 ರನ್ ನೀಡಿ 4 ವಿಕೆಟ್ ಕಬಳಿಸಿದರು. ಪರಿಣಾಮವಾಗಿ ಬಾಂಗ್ಲಾದೇಶ 17.5 ಓವರ್‌ಗಳಲ್ಲಿ 105 ರನ್ಗಳಿಗೆ ಪತನವಾಯಿತು. ಬಾಂಗ್ಲಾದೇಶ ಪರ ಆರಂಭಿಕ ಆಟಗಾರ ಔಟ್ ಆಗದೆ 54 ರನ್ ಗಳಿಸಿದರು. ಅವರ ಹೋರಾಟ ವ್ಯರ್ಥವಾಯಿತು.
ಪಾಯಿಂಟ್ ಟೇಬಲ್ ಲೆಕ್ಕಾಚಾರ ಪ್ರಕಾರ ಸೂಪರ್ 8 ಹಂತದ ಗ್ರೂಪ್ 1ರಲ್ಲಿ ಭಾರತ ಆಡಿರುವ ಮೂರೂ ಪಂದ್ಯಗಳನ್ನು ಗೆದ್ದು 6 ಅಂಕಗಳೊಂದಿಗೆ ಸೆಮಿ ಫೈನಲ್ ಪ್ರವೇಶಿಸಿತ್ತು. ಇದೀಗ ಅಫ್ಘಾನಿಸ್ತಾನ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮಿ ಫೈನಲ್ ಪ್ರವೇಶಿಸಿದೆ. ಒಂದು ವೇಳೆ ಈ ಪಂದ್ಯವನ್ನು ಬಾಂಗ್ಲಾದೇಶ ಗೆದ್ದಿದ್ದರೆ ರನ್ರೇಟ್ ಲೆಕ್ಕಾಚಾರ ಪ್ರಕಾರ ಆಸ್ಟ್ರೇಲಿಯಾ ಸೆಮಿ ಫೈನಲ್ಗೆ ಪ್ರವೇಶಿಸುತ್ತಿತ್ತು. ಹಾಗಾಗಿ ಸೆಮಿ ಫೈನಲ್ ಪ್ರವೇಶಿಸಲು ಈ ಪಂದ್ಯವನ್ನು 12.1 ಓವರ್‌ಗಳಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಬಾಂಗ್ಲಾದೇಶಕ್ಕಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:39 am, Tue, 25 June 24