AFG vs IRE: ಅಫ್ಘಾನ್ ಮಣಿಸಿ ಇತಿಹಾಸ ನಿರ್ಮಿಸಿದ ಐರ್ಲೆಂಡ್‌..!

|

Updated on: Mar 01, 2024 | 7:50 PM

AFG vs IRE: ಅಫ್ಘಾನಿಸ್ತಾನ ಹಾಗೂ ಐರ್ಲೆಂಡ್ ನಡುವೆ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಬಲಿಷ್ಠ ಅಫ್ಘಾನ್ ತಂಡವನ್ನು ಮಣಿಸಿದ ಕ್ರಿಕೆಟ್ ಶಿಶು ಐರ್ಲೆಂಡ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದೆ. ಅಬುಧಾಬಿಯಲ್ಲಿ ಅಫ್ಘಾನಿಸ್ತಾನ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದ ಐರ್ಲೆಂಡ್‌ಗೆ ಇದು ಮೊದಲ ಟೆಸ್ಟ್ ಸರಣಿ ಗೆಲುವಾಗಿದೆ.

AFG vs IRE: ಅಫ್ಘಾನ್ ಮಣಿಸಿ ಇತಿಹಾಸ ನಿರ್ಮಿಸಿದ ಐರ್ಲೆಂಡ್‌..!
ಐರ್ಲೆಂಡ್ ತಂಡ
Follow us on

ಅಫ್ಘಾನಿಸ್ತಾನ ಹಾಗೂ ಐರ್ಲೆಂಡ್ (Afghanistan vs Ireland) ನಡುವೆ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಬಲಿಷ್ಠ ಅಫ್ಘಾನ್ ತಂಡವನ್ನು ಮಣಿಸಿದ ಕ್ರಿಕೆಟ್ ಶಿಶು ಐರ್ಲೆಂಡ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದೆ. ಅಬುಧಾಬಿಯಲ್ಲಿ ಅಫ್ಘಾನಿಸ್ತಾನ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದ ಐರ್ಲೆಂಡ್‌ಗೆ ಇದು ಮೊದಲ ಟೆಸ್ಟ್ ಸರಣಿ ಗೆಲುವಾಗಿದೆ. ಇದಕ್ಕೂ ಮೊದಲು ತಂಡವು 7 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಎಲ್ಲದರಲ್ಲೂ ಸೋಲನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಗೆಲುವಿಗೆ 111 ರನ್​ಗಳ ಗುರಿ ಪಡೆದ ಐರ್ಲೆಂಡ್, ನಾಯಕ ಆಂಡ್ರ್ಯೂ ಬಾಲ್ಬಿರ್ನಿ (Andrew Balbirnie) ಅವರ ಅಜೇಯ ಅರ್ಧಶತಕದ ನೆರವಿನಿಂದ 4 ವಿಕೆಟ್​ ಕಳೆದುಕೊಂಡು ಜಯದ ನಗೆಬೀರಿತು.

ಗೆಲುವಿನ ಇನ್ನಿಂಗ್ಸ್ ಆಡಿದ ನಾಯಕ

111 ರನ್​ಗಳ ಗುರಿ ಬೆನ್ನಟ್ಟಿದ ಐರ್ಲೆಂಡ್ ತಂಡ ಒಂದು ಹಂತದಲ್ಲಿ 13ರನ್​ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಲ್ಲಿಂದ ತಂಡದ ಇನ್ನಿಂಗ್ಸ್ ಜವಬ್ದಾರಿ ಹೊತ್ತ ನಾಯಕ ಆಂಡ್ರ್ಯೂ ಬಲ್ಬಿರ್ನಿ, ಮೊದಲು ಪಾಲ್ ಸ್ಟಿರ್ಲಿಂಗ್ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 26 ರನ್‌ಗಳ ಜೊತೆಯಾಟವನ್ನು ಹಂಚಿಕಕೊಂಡರು. ನಂತರ ಲೋರ್ಕನ್ ಟಕರ್ ಅವರೊಂದಿಗೆ ಐದನೇ ವಿಕೆಟ್‌ಗೆ 72 ರನ್‌ಗಳ ಮ್ಯಾಚ್ ವಿನ್ನಿಂಗ್ ಜೊತೆಯಾಟ ನಡೆಸಿದರು. ಈ ಇನ್ನಿಂಗ್ಸ್‌ನಲ್ಲಿ ಐರಿಶ್ ನಾಯಕ 96 ಎಸೆತಗಳಲ್ಲಿ ಅಜೇಯ 58 ರನ್ ಗಳಿಸಿದರು. ಐರ್ಲೆಂಡ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿಲ್ಲದ ಕಾರಣ ಹೆಚ್ಚಿನ ಸಂದರ್ಭಗಳಲ್ಲಿ ಕೇವಲ 1ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತದೆ. ಇದುವರೆಗೆ ತಂಡವು ಶ್ರೀಲಂಕಾ ವಿರುದ್ಧ ಒಮ್ಮೆ ಮಾತ್ರ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿದೆ.

AUS vs NZ: 12 ವರ್ಷಗಳ ನಂತರ ಹೀಗೊಂದು ಬೇಡದ ದಾಖಲೆ ಬರೆದ ಕೇನ್ ವಿಲಿಯಮ್ಸನ್

ಬೌಲಿಂಗ್​ನಲ್ಲಿ ಮಿಂಚಿದ ಮಾರ್ಕ್ ಆಡೈರ್

ಈ ಪಂದ್ಯದಲ್ಲಿ, ಐರ್ಲೆಂಡ್ ತಂಡದ ಬೌಲರ್‌ಗಳಿಂದ ಅದ್ಭುತ ಪ್ರದರ್ಶನ ಕಂಡುಬಂದಿತು. ಇದರಲ್ಲಿ ವೇಗದ ಬೌಲರ್ ಮಾರ್ಕ್ ಆಡೈರ್ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದರೆ, ಎರಡನೇ ಇನ್ನಿಂಗ್ಸ್‌ನಲ್ಲಿಯೂ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ಸೋಲಿಗೆ ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳ ಕಳಪೆ ಪ್ರದರ್ಶನವೇ ದೊಡ್ಡ ಕಾರಣವಾಗಿತ್ತು. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 155 ರನ್ ಗಳಿಸಲಷ್ಟೇ ಶಕ್ತವಾಗಿದ್ದರೆ, ಎರಡನೇ ಇನಿಂಗ್ಸ್‌ನಲ್ಲಿ 218 ರನ್ ಗಳಿಸಿತ್ತು. ಇತ್ತ ಐರ್ಲೆಂಡ್ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 263 ರನ್ ಕಲೆಹಾಕಿ 108 ರನ್​ಗಳ ಮುನ್ನಡೆ ಕಾಯ್ದುಕೊಂಡಿತ್ತು.

ಉಭಯ ತಂಡಗಳು

ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಆಂಡ್ರ್ಯೂ ಬಾಲ್ಬಿರ್ನಿ(ನಾಯಕ), ಪೀಟರ್ ಮೂರ್, ಕರ್ಟಿಸ್ ಕ್ಯಾಂಫರ್, ಆಂಡಿ ಮೆಕ್‌ಬ್ರೈನ್, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಕ್ರೇಗ್ ಯಂಗ್, ಥಿಯೋ ವ್ಯಾನ್ ವೋರ್‌ಕಾಮ್

ಅಫ್ಘಾನಿಸ್ತಾನ ತಂಡ: ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ಹಶ್ಮತುಲ್ಲಾ ಶಾಹಿದಿ(ನಾಯಕ), ರಹಮತ್ ಶಾ, ನೂರ್ ಅಲಿ ಝದ್ರಾನ್, ನಾಸಿರ್ ಜಮಾಲ್, ಕರೀಂ ಜನತ್, ಜಿಯಾ-ಉರ್-ರೆಹಮಾನ್, ನಿಜತ್ ಮಸೂದ್, ನವೀದ್ ಝದ್ರಾನ್, ಜಹೀರ್ ಖಾನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ