ಮಾರ್ಚ್ 7 ರಿಂದ 11 ರವರೆಗೆ ಧರ್ಮಶಾಲಾದಲ್ಲಿ ನಡೆಯಲ್ಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಒಂದು ವಾರಕ್ಕೂ ಅಧಿಕ ಸಮಯ ಉಳಿದಿದೆ. ಅದಾಗ್ಯೂ ಟೀಂ ಇಂಡಿಯಾ ಪಾಳದಿಂದ ಆಘಾತಕ್ಕಾರಿ ಸುದ್ದಿಯೊಂದು ಹೊರಬಿದ್ದಿದೆ.
ಅದರಂತೆ ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಇಂಜುರಿಗೊಂಡು ಟೀಂ ಇಂಡಿಯಾದಿಂದ ಹೊರಗಿರುವ ಕನ್ನಡಿಗ ಕೆಎಲ್ ರಾಹುಲ್, ಐದನೇ ಟೆಸ್ಟ್ ಪಂದ್ಯದಿಂದಲೂ ಹೊರಬಿದ್ದಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.
ವಾಸ್ತವವಾಗಿ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ರಾಹುಲ್, ಮೂರನೇ ಟೆಸ್ಟ್ ವೇಳೆಗೆ ಚೇತರಿಸಿಕೊಂಡು ತಂಡಕ್ಕೆ ಮರಳುತ್ತಾರೆ ಎಂದು ಹೇಳಲಾಗಿತ್ತು. ಅದರಂತೆ ರಾಹುಲ್ ಅಭ್ಯಾಸ ಕೂಡ ಆರಂಭಿಸಿದ್ದರು. ಆದರೆ ಅವರನ್ನು ಮೂರನೇ ಟೆಸ್ಟ್ನಿಂದ, ಆ ನಂತರ 4ನೇ ಟೆಸ್ಟ್‌ನಿಂದಲೂ ಹೊರಗಿಡಲಾಗಿತ್ತು.
ಪ್ರಸ್ತುತ ಕೆಎಲ್ ರಾಹುಲ್ ಐದನೇ ಟೆಸ್ಟ್‌ನಿಂದಲೂ ಹೊರಗುಳಿದಿದ್ದಾರೆ ಎಂದು ಮಾಹಿತಿ ನೀಡಿರುವ ಬಿಸಿಸಿಐ, ರಾಹುಲ್ ಇನ್ನೂ ಫಿಟ್ ಆಗಿಲ್ಲ. ಸದ್ಯ ಈ ಆಟಗಾರ ಲಂಡನ್ನಲ್ಲಿದ್ದು, ವೈದ್ಯಕೀಯ ತಂಡ ಅವರ ಫಿಟ್ನೆಸ್ ಮೇಲೆ ಕಣ್ಣಿಟ್ಟಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.
ರಾಹುಲ್ ಜೊತೆಗೆ ಯುವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಸಹ ಅಂತಿಮ ಟೆಸ್ಟ್ನಿಂದ ಹೊರಗಿಡಲಾಗಿದೆ. ಹಲವು ಆಟಗಾರರ ಇಂಜುರಿಯಿಂದಾಗಿ ಎರಡನೇ ಟೆಸ್ಟ್ ಪಂದ್ಯದ ವೇಳೆ ತಂಡ ಸೇರಿಕೊಂಡಿದ್ದ ಸುಂದರ್ಗೆ ತಂಡದಲ್ಲಿ ಆಡುವ ಅವಕಾಶ ಸಿಗಲಿಲ್ಲ.
ಇದೀಗ ಟೀಂ ಇಂಡಿಯಾದಿಂದ ಹೊರಬಿದ್ದಿರುವ ಸುಂದರ್, ರಣಜಿ ಟ್ರೋಫಿಯಲ್ಲಿ ಸೆಮಿಫೈನಲ್ ತಲುಪಿರುವ ತಮಿಳುನಾಡು ತಂಡದ ಪರ ಪಂದ್ಯವನ್ನು ಆಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ. ಆದಾಗ್ಯೂ, ರಣಜಿಯಲ್ಲಿ ಸೆಮಿಫೈನಲ್ ಪಂದ್ಯದ ನಂತರ ಅವರು ಟೀಂ ಇಂಡಿಯಾದ ತಂಡವನ್ನು ಮತ್ತೆ ಸೇರಿಕೊಳ್ಳುತ್ತಾರೆ ಎಂದು ಬಿಸಿಸಿಐ ತಿಳಿಸಿದೆ.
ಈ ಇಬ್ಬರನ್ನು ಹೊರಗಿಡುವುದರ ಜೊತೆಗೆ ತಂಡಕ್ಕೆ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಆಗಮನವಾಗಿದೆ. ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಬುಮ್ರಾಗೆ ವಿಶ್ರಾಂತಿ ನೀಡಲಾಗಿತ್ತು. ಆದರೆ ಈಗ ಅವರು ಧರ್ಮಶಾಲಾದಲ್ಲಿ ಮತ್ತೊಮ್ಮೆ ತಂಡದಲ್ಲಿ ಕಾಣಿಸಿಕೊಳ್ಳಬಹುದು.
ಐದನೇ ಟೆಸ್ಟ್‌ಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್ ಕುಲ್ದೀಪ್ ಯಾದವ್ , ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.
Published On - 3:00 pm, Thu, 29 February 24