ಅಫ್ಘಾನ್ ವಿರುದ್ಧ ಸರಣಿ ಗೆದ್ದ ಪಾಕಿಸ್ತಾನ; ಏಕದಿನ ರ‍್ಯಾಂಕಿಂಗ್‌ನಲ್ಲಿ ನಂ.1 ಪಟ್ಟಕ್ಕೇರಿದ ಬಾಬರ್ ಪಡೆ..!
AFG vs PAK: ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಪಾಕಿಸ್ತಾನ ಏಷ್ಯಾಕಪ್ಗೂ ಮುನ್ನ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿದೆ. ಕೊನೆಯ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ ಅಫ್ಘಾನಿಸ್ತಾನವನ್ನು 59 ರನ್‌ಗಳಿಂದ ಸೋಲಿಸಿದಲ್ಲದೆ ಸರಣಿಗೆ ಮುತ್ತಿಕ್ಕಿತು
ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಪಾಕಿಸ್ತಾನ (Pakistan vs Afghanistan) ಏಷ್ಯಾಕಪ್ಗೂ ಮುನ್ನ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ (ICC ODI Ranking) ಮೊದಲ ಸ್ಥಾನಕ್ಕೇರಿದೆ. ಕೊನೆಯ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ, ಅಫ್ಘಾನಿಸ್ತಾನವನ್ನು 59 ರನ್‌ಗಳಿಂದ ಸೋಲಿಸಿದಲ್ಲದೆ ಸರಣಿಗೆ ಮುತ್ತಿಕ್ಕಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 268 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ, ಪಾಕ್ ಬೌಲರ್ಗಳ ಎದುರು ಮಂಕಾಗಿ 209 ರನ್ ಗಳಿಸಲಷ್ಟೇ ಶಕ್ತವಾಗಿ 59 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ಶ್ರೀಲಂಕಾದ ಹಂಬಂಟೋಟಾದಲ್ಲಿ ನಡೆದ ಮೊದಲೆರಡು ಪಂದ್ಯಗಳಲ್ಲಿ ಪಾಕ್ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಒಟ್ಟಾಗಿ ಬಲ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಮೊದಲ ಪಂದ್ಯದಲ್ಲಿ ಪಾಕ್ ತಂಡದ ಬ್ಯಾಟಿಂಗ್ ಕಳಪೆಯಾಗಿದ್ದರೆ, ಎರಡನೇ ಪಂದ್ಯದಲ್ಲಿ ತಂಡ ಎರಡೂ ರಂಗಗಳಲ್ಲಿ ಹೋರಾಟ ನಡೆಸಬೇಕಾಯಿತು. ಇದರ ಹೊರತಾಗಿಯೂ, ಅಫ್ಘಾನಿಸ್ತಾನವನ್ನು ಮಣಿಸಿದ ಬಾಬರ್ ಪಡೆ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಕೈವಶ ಮಾಡಿಕೊಂಡಿತ್ತು.
PAK vs AFG: ಕೊನೆಯ ಓವರ್ ಡ್ರಾಮಾ; ಅಫ್ಘಾನ್ ವಿರುದ್ಧ ಪಾಕಿಸ್ತಾನಕ್ಕೆ ರೋಚಕ ಜಯ
ಫಖರ್ ಜಮಾನ್ ಮತ್ತೊಮ್ಮೆ ವಿಫಲ
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 268 ರನ್ ಗಳಿಸಿತು. ತಂಡದ ಅಗ್ರ ಕ್ರಮಾಂಕ ನಿಧಾನಗತಿಯ ಆರಂಭ ನೀಡಿತ್ತಾದರೂ, ಮಧ್ಯಮ ಕ್ರಮಾಂಕ ಪಾಕ್ ತಂಡದ ಇನ್ನಿಂಗ್ಸ್ ನಿಭಾಯಿಸಿತು. ಹೀಗಾಗಿ ಬಾಬರ್ ಪಡೆ ಕೊನೆಯ 10 ಓವರ್‌ಗಳಲ್ಲಿ 80 ರನ್‌ಗಳನ್ನು ಸೇರಿಸಿತು. ಆದರೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಫಖರ್ ಜಮಾನ್ ಮತ್ತೆ ಬೇಗನೆ ಪೆವಿಲಿಯನ್ ಸೇರಿಕೊಂಡರು. ಅದೇ ಸಮಯದಲ್ಲಿ, ಇಮಾಮ್-ಉಲ್-ಹಕ್ ಕೂಡ ಹೆಚ್ಚು ಕಾಲ ಮೈದಾನದಲ್ಲಿ ಉಳಿಯಲು ಸಾಧ್ಯವಾಗಲಿಲ್ಲ.
ಬಾಬರ್-ರಿಜ್ವಾನ್ ಜೊತೆಯಾಟ
ಆರಂಭಿಕರಾಗಿ ವೈಫಲ್ಯದಿಂದಾಗಿ ಪಾಕಿಸ್ತಾನ 13ನೇ ಓವರ್‌ಗೆ 52 ರನ್ ಕಲೆಹಾಕಿ ಎರಡು ವಿಕೆಟ್ ಕಳೆದುಕೊಂಡಿತ್ತು. ಇಲ್ಲಿಂದ ನಾಯಕ ಬಾಬರ್ ಅಜಮ್ (60) ಮತ್ತು ಮೊಹಮ್ಮದ್ ರಿಜ್ವಾನ್ (67) ಇನಿಂಗ್ಸ್ ಸ್ಥಿರಗೊಳಿಸಿದರು. ಸ್ಪಿನ್ನರ್‌ಗಳ ಮುಂದೆ ದೊಡ್ಡ ಹೊಡೆತಗಳನ್ನು ಹೊಡೆಯುವುದು ಕಷ್ಟಕರವಾದ ಕಾರಣ ಇಬ್ಬರೂ ಬಹಿರಂಗವಾಗಿ ರನ್ ಗಳಿಸಲು ಹರಸಾಹಸ ಪಡಬೇಕಾಯಿತು. ಇದರ ಹೊರತಾಗಿಯೂ, ಇಬ್ಬರೂ ನಿಧಾನವಾಗಿ ಇನ್ನಿಂಗ್ಸ್ ಅನ್ನು ಮುಂದುವರೆಸಿ, 110 ರನ್ ಜೊತೆಯಾಟವನ್ನು ಹಂಚಿಕೊಂಡರು. ಇಬ್ಬರೂ ಪರ್ಯಾಯವಾಗಿ ಅರ್ಧಶತಕ ಕೂಡ ಸಿಡಿಸಿದರು.
ಆದರೆ 22 ರನ್ಗಳ ಅಂತರದಲ್ಲಿ ಪಾಕಿಸ್ತಾನ ಬಾಬರ್, ರಿಜ್ವಾನ್ ಸೇರಿದಂತೆ 3 ವಿಕೆಟ್ ಕಳೆದುಕೊಂಡಿತು. ಕೊನೆಯಲ್ಲಿ ಅಘಾ ಸಲ್ಮಾನ್ (ಔಟಾಗದೆ 38) ಮತ್ತು ಮೊಹಮ್ಮದ್ ನವಾಜ್ (30) ಚುರುಕಿನ ಇನ್ನಿಂಗ್ಸ್‌ನೊಂದಿಗೆ ತಂಡವನ್ನು 268 ರನ್‌ಗಳಿಗೆ ಕೊಂಡೊಯ್ದರು. ಅಫ್ಘಾನಿಸ್ತಾನ ಪರ ಫರೀದ್ ಅಹ್ಮದ್ ಮತ್ತು ಗುಲ್ಬದಿನ್ ನೈಬ್ ತಲಾ 2 ವಿಕೆಟ್ ಪಡೆದರು.
Clinical bowling display to seal the series 3️⃣-0️⃣ 💪
Pakistan reclaim the top spot in the ODI rankings 🥇#AFGvPAK | #BackTheBoysInGreen pic.twitter.com/JNSnvtl0rA
— Pakistan Cricket (@TheRealPCB) August 26, 2023
ಆರಂಭದಲ್ಲೇ ಕುಸಿದ ಅಫ್ಘಾನಿಸ್ತಾನ
ಎರಡನೇ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತನ್ನ ಬ್ಯಾಟಿಂಗ್ ಪರಾಕ್ರಮ ತೋರಿ 300 ಕ್ಕೂ ಅಧಿಕ ರನ್ ಕಲೆಹಾಕಿತ್ತು. ಹೀಗಾಗಿ ಈ ಬಾರಿಯೂ ಅದೇ ಆಟವನ್ನು ಅಫ್ಘಾನಿಸ್ತಾನ ತಂಡದಿಂದ ನಿರೀಕ್ಷಿಸಲಾಗಿತ್ತು. ಆದರೆ ಅದು ಆಗಲಿಲ್ಲ. ಆರಂಭಿಕ ಜೋಡಿಯಾದ ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜದ್ರಾನ್ ಬೇಗನೇ ಪೆವಿಲಿಯನ್ ಸೇರಿಕೊಂಡರು. ಆರಂಭಿಕ ಗುರ್ಬಾಜ್ ಆರನೇ ಓವರ್‌ನಲ್ಲಿಯೇ ವಿಕೆಟ್ ಒಪ್ಪಿಸಿದರೆ, ತಂಡದ 10ನೇ ಓವರ್ವರೆಗೆ ಕೇವಲ 30 ರನ್ಗಳಿದ್ದಾಗ ಝದ್ರಾನ್ ವಿಕೆಟ್ ಕೂಡ ಪತನವಾಯಿತು. ಪಾಕ್ ವೇಗಿಗಳ ಮುಂದೆ ಸರಾಗವಾಗಿ ರನ್ ಕಲೆಹಾಕಲು ಅಫ್ಘಾನಿಸ್ತಾನಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿ ತಂಡ 20 ಓವರ್ ಮುಗಿಯುವುದರೊಳಗೆ ಕೇವಲ 60 ರನ್ ಮಾತ್ರ ಕಲೆಹಾಕಿತ್ತು.
ಮುಜೀಬ್ ಸ್ಫೋಟಕ ಬ್ಯಾಟಿಂಗ್
ಇಲ್ಲಿ ಶಾದಾಬ್ ಖಾನ್ (3/42) ಒಂದೇ ಓವರ್‌ನಲ್ಲಿ ರಿಯಾಜ್ ಹಸನ್ ಮತ್ತು ನಾಯಕ ಹಶ್ಮತುಲ್ಲಾ ಶಾಹಿದಿ ಅವರ ವಿಕೆಟ್‌ಗಳನ್ನು ಕಬಳಿಸಿದರು. ಬಳಿಕ ಮುಂದಿನ ಓವರ್‌ನಲ್ಲಿ ಗುಲ್ಬಾದಿನ್ ನೈಬ್ ಕೂಡ ವಿಕೆಟ್ ಒಪ್ಪಿಸಿದರು. ಹೀಗಾಗಿ ಕೇವಲ 97 ರನ್‌ಗಳಿಗೆ ಅಫ್ಘಾನಿಸ್ತಾನ ತಂಡದ 7 ವಿಕೆಟ್‌ಗಳು ಪತನಗೊಂಡು ತಂಡ ಸೋಲಿನ ಸುಳಿಗೆ ಸಿಲುಕಿತು. ಆದರೆ, 9ನೇ ಕ್ರಮಾಂಕದಲ್ಲಿ ಬಂದ ಮುಜೀಬ್ ಉರ್ ರೆಹಮಾನ್ (64) ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 26 ಎಸೆತಗಳಲ್ಲಿ ಅಫ್ಘಾನಿಸ್ತಾನ ಪರ ಅತಿವೇಗದ ಅರ್ಧಶತಕ ದಾಖಲಿಸಿ ದಾಖಲೆ ಬರೆದರು. ಮುಜೀಬ್ ಮತ್ತು ಶಾಹಿದುಲ್ಲಾ (37) ಅವರ ಇನ್ನಿಂಗ್ಸ್ ಆಧಾರದ ಮೇಲೆ ಅಫ್ಘಾನಿಸ್ತಾನ 200 ರ ಸಮೀಪಕ್ಕೆ ತಲುಪಲು ಸಾಧ್ಯವಾಯಿತು. ಅಂತಿಮವಾಗಿ ಇಡೀ ಇನಿಂಗ್ಸ್ 209 ರನ್‌ಗಳಿಗೆ ಕುಸಿಯಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:14 am, Sun, 27 August 23