504 ರನ್ ಬಾರಿಸಿದ ಝಿಂಬಾಬ್ವೆ, 514 ರನ್​ ಚಚ್ಚಿದ ಅಫ್ಘಾನಿಸ್ತಾನ್!

ಟೆಸ್ಟ್ ಕ್ರಿಕೆಟ್‌ನಲ್ಲಿ ಬೌಲರ್‌ಗಳ ದರ್ಬಾರ್ ಮತ್ತು ವಿಕೆಟ್‌ಗಳ ಪತನ ಸಾಮಾನ್ಯ. ಆದರೆ, ಪಿಚ್ ಸಂಪೂರ್ಣವಾಗಿ ಬ್ಯಾಟರ್‌ಗಳ ಸ್ವರ್ಗವಾಗಿ ಮಾರ್ಪಟ್ಟಾಗ ಹೊಸ ಇತಿಹಾಸವೇ ಸೃಷ್ಟಿಯಾಗುತ್ತದೆ! ಕ್ರಿಕೆಟ್ ಇತಿಹಾಸದಲ್ಲಿ ಉಭಯ ತಂಡಗಳು ತಮ್ಮ ಮೊದಲ ಇನ್ನಿಂಗ್ಸ್‌ನಲ್ಲೇ ಜಂಟಿಯಾಗಿ 1,000ಕ್ಕೂ ಅಧಿಕ ರನ್ ಕಲೆಹಾಕಿದ ಅಪರೂಪದ ಕ್ಷಣಗಳು ತೀರಾ ವಿರಳ. ಇದೀಗ ಅಫ್ಘಾನಿಸ್ತಾನ್ ಮತ್ತು ಝಿಂಬಾಬ್ವೆ ನಡುವಣ ಶಾರ್ಜಾ ಟೆಸ್ಟ್ ಪಂದ್ಯವು ಅಂತಹದ್ದೇ ಒಂದು ಐತಿಹಾಸಿಕ ರನ್ ಹಬ್ಬಕ್ಕೆ ಸಾಕ್ಷಿಯಾಗಿದೆ.

504 ರನ್ ಬಾರಿಸಿದ ಝಿಂಬಾಬ್ವೆ, 514 ರನ್​ ಚಚ್ಚಿದ ಅಫ್ಘಾನಿಸ್ತಾನ್!
Afg Vs Zim
Image Credit source: GettyImages

Updated on: Nov 09, 2026 | 11:45 AM

ಯುಎಇಯ ಐತಿಹಾಸಿಕ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ್ ಮತ್ತು ಝಿಂಬಾಬ್ವೆ ನಡುವಿನ ಮೊದಲ ಟೆಸ್ಟ್ ಪಂದ್ಯವು ಸಂಪೂರ್ಣವಾಗಿ ಬ್ಯಾಟರ್‌ಗಳ ದರ್ಬಾರ್‌ಗೆ ಸಾಕ್ಷಿಯಾಗಿದೆ. ಉಭಯ ತಂಡಗಳು ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 500ಕ್ಕೂ ಅಧಿಕ ರನ್ ಚಚ್ಚುವ ಮೂಲಕ ಟೆಸ್ಟ್ ಕ್ರಿಕೆಟ್‌ನ ರೋಚಕತೆಯನ್ನು ಹೆಚ್ಕಿಸಿವೆ.

ಬೃಹತ್ ಮೊತ್ತ ಪೇರಿಸಿದ ಝಿಂಬಾಬ್ವೆ:

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಝಿಂಬಾಬ್ವೆ ತಂಡ, ಆರಂಭಿಕ ಆಘಾತದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಅದ್ಭುತ ಬ್ಯಾಟಿಂಗ್ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 504 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಝಿಂಬಾಬ್ವೆ ಪರ ಬ್ರೆಂಡನ್ ಟೇಲರ್ (131 ರನ್) ಮತ್ತು ಯುವ ಬ್ಯಾಟರ್ ಬ್ರಯಾನ್ ಬೆನೆಟ್ ಆಕರ್ಷಕ ಶತಕ ಬಾರಿಸಿ ಬೃಹತ್ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

Loading...

ಅಫ್ಘಾನಿಸ್ತಾನ್ ಪ್ರತ್ಯುತ್ತರ!

ಝಿಂಬಾಬ್ವೆಯ ಬೃಹತ್ ಮೊತ್ತಕ್ಕೆ ಅಷ್ಟೇ ಬಲವಾಗಿ ಪ್ರತ್ಯುತ್ತರ ನೀಡಿದ ಅಫ್ಘಾನಿಸ್ತಾನ್ ತಂಡ, ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 514 ರನ್ ಬಾರಿಸಿ ಆಲೌಟ್ ಆಯಿತು. ಅಫ್ಘಾನ್ ತಂಡಕ್ಕೆ ಆಸರೆಯಾಗಿದ್ದು ನಾಯಕ ರಹಮತ್ ಶಾ ಅವರ ಅಮೋಘ 173 ರನ್‌ಗಳ ಜವಾಬ್ದಾರಿಯುತ ಇನ್ನಿಂಗ್ಸ್. ಇವರಿಗೆ ಸಾಥ್ ನೀಡಿದ ಆರಂಭಿಕ ಆಟಗಾರ ಸಿದಿಕುಲ್ಲಾ ಅತಲ್ (105 ರನ್) ಮತ್ತು ರಹಮಾನುಲ್ಲಾ ಝದ್ರಾನ್ (113 ರನ್) ಭರ್ಜರಿ ಶತಕ ಸಿಡಿಸಿದರು. ಒಂದೇ ಇನ್ನಿಂಗ್ಸ್‌ನಲ್ಲಿ ಮೂರು ಶತಕಗಳು ಮೂಡಿಬಂದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ್ ಮೊದಲ ಇನ್ನಿಂಗ್ಸ್‌ನಲ್ಲಿ 10 ರನ್‌ಗಳ ಅಲ್ಪ ಮುನ್ನಡೆ ಕಾಯ್ದುಕೊಳ್ಳಲು ಯಶಸ್ವಿಯಾಯಿತು.

ನ್ಯೂಮನ್ ನ್ಯಾಮೂರಿಗೆ 5 ವಿಕೆಟ್:

ಅಫ್ಘಾನಿಸ್ತಾನ್ ಬ್ಯಾಟರ್‌ಗಳು ರನ್ ಹೊಳೆ ಹರಿಸುತ್ತಿದ್ದರೂ, ಝಿಂಬಾಬ್ವೆಯ ಯುವ ಬೌಲರ್ ನ್ಯೂಮನ್ ನ್ಯಾಮೂರಿ ತಮಗೆ ಸಿಕ್ಕ ಚೊಚ್ಚಲ ಟೆಸ್ಟ್ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡರು. ಅಫ್ಘಾನ್ ಬ್ಯಾಟಿಂಗ್ ಲೈನ್‌ಅಪ್‌ಗೆ ತಡೆಯೊಡ್ಡಿದ ನ್ಯಾಮೂರಿ, 82 ರನ್ ನೀಡಿ 5 ಪ್ರಮುಖ ವಿಕೆಟ್ ಕಬಳಿಸುವ ಮೂಲಕ ಚೊಚ್ಚಲ ಪಂದ್ಯದಲ್ಲೇ ಐದು ವಿಕೆಟ್‌ಗಳ ಸಾಧನೆ ಮಾಡಿದರು.

ಇದನ್ನೂ ಓದಿ: ಅಫ್ಘಾನಿಸ್ತಾನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಮೂವರು ಭಾರತೀಯರು ಅನ್​ಸೋಲ್ಡ್​!

ಕೊನೆಯ ದಿನದಾಟದತ್ತ ಪಂದ್ಯ:

ಮೊದಲ ಇನ್ನಿಂಗ್ಸ್ ಮುಗಿದ ಬಳಿಕ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಝಿಂಬಾಬ್ವೆ ತಂಡ, ನಾಲ್ಕನೇ ದಿನದ ಆಟದ ಮುಕ್ತಾಯಕ್ಕೆ 3 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದೆ. ಮೊದಲ ಇನ್ನಿಂಗ್ಸ್‌ನ ಹಿನ್ನಡೆಯನ್ನು ಕಳೆದು ಸದ್ಯ ಝಿಂಬಾಬ್ವೆ 154 ರನ್‌ಗಳ ಒಟ್ಟಾರೆ ಮುನ್ನಡೆಯಲ್ಲಿದೆ. ಕ್ರೀಸ್‌ನಲ್ಲಿ ಬ್ರಯಾನ್ ಬೆನೆಟ್ (49*) ಮತ್ತು ಕ್ರೇಗ್ ಇರ್ವಿನ್ (20*) ಇದ್ದಾರೆ. ಐದನೇ ಹಾಗೂ ಕೊನೆಯ ದಿನದಂದು ಝಿಂಬಾಬ್ವೆ ಎಷ್ಟು ರನ್‌ಗಳ ಗುರಿ ನೀಡಲಿದೆ ಮತ್ತು ಅಫ್ಘಾನ್ ಅದನ್ನು ಹೇಗೆ ಬೆನ್ನಟ್ಟಲಿದೆ ಎಂಬುದರ ಮೇಲೆ ಪಂದ್ಯದ ಫಲಿತಾಂಶ ನಿರ್ಧಾರವಾಗಲಿದೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us