ಶ್ರೀಲಂಕಾ ವಿರುದ್ಧ ಜಯ: ಸೆಮಿಫೈನಲ್ ರೇಸ್​ನಲ್ಲಿ ಅಫ್ಘಾನಿಸ್ತಾನ್

| Updated By: ಝಾಹಿರ್ ಯೂಸುಫ್

Updated on: Oct 30, 2023 | 10:06 PM

Afghanistan vs Sri Lanka: ಈ ಹಂತದಲ್ಲಿ ಉತ್ತಮ ಜೊತೆಯಾಟ ಪ್ರದರ್ಶಿಸುವ ಮೂಲಕ ಅಝ್ಮತ್ ಒಮರ್​ಝಾಹಿ (73) ಹಾಗೂ ಹಶ್ಮತ್ ಶಾಹಿದಿ (58) 45.2 ಓವರ್​ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಅಫ್ಘಾನಿಸ್ತಾನ್ ತಂಡ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಶ್ರೀಲಂಕಾ ವಿರುದ್ಧ ಜಯ: ಸೆಮಿಫೈನಲ್ ರೇಸ್​ನಲ್ಲಿ ಅಫ್ಘಾನಿಸ್ತಾನ್
Afghanistan
Follow us on

ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್​ನ 30ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ಮೊದಲು ಬೌಲಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ದಿಮುತ್ ಕರುಣರತ್ನೆ ಕೇವಲ 15 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದರು. ಆ ಬಳಿಕ ಜೊತೆಯಾದ ಪಾತುಮ್ ನಿಸ್ಸಂಕಾ (46) ಹಾಗೂ ಕುಸಾಲ್ ಮೆಂಡಿಸ್ (39) ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಇನ್ನು ಸದೀರ ಸಮರವಿಕ್ರಮ 36 ರನ್ ಬಾರಿಸಿದರೆ, ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಮಹೀಶ್ ತೀಕ್ಷಣ 29 ರನ್​ಗಳ ಕೊಡುಗೆ ನೀಡಿದರು. ಪರಿಣಾಮ ಶ್ರೀಲಂಕಾ ತಂಡವು 49.3 ಓವರ್​ಗಳಲ್ಲಿ 241 ರನ್​ಗಳಿಸಿ ಆಲೌಟ್ ಆಯಿತು.

242 ರನ್​ಗಳ ಸುಲಭ ಗುರಿ ಪಡೆದ ಅಫ್ಘಾನಿಸ್ತಾನ್ ತಂಡ ಕೂಡ ಆರಂಭಿಕ ಆಘಾತಕ್ಕೊಳಗಾಗಿತ್ತು. ದಿಲ್ಶನ್ ಮಧುಶಂಕ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ರಹಮಾನುಲ್ಲಾ ಗುರ್ಬಾಝ್ ಶೂನ್ಯಕ್ಕೆ ಔಟಾಗಿದ್ದರು.

ಆದರೆ ಮತ್ತೋರ್ವ ಆರಂಭಿಕ ಆಟಗಾರ ಇಬ್ರಾಹಿಂ ಝದ್ರಾನ್ 39 ರನ್ ಬಾರಿಸಿದರೆ, 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಹಮತ್ ಶಾ 62 ರನ್​ಗಳಿಸಿದರು ಇದಾದ ಬಳಿಕ ಕಣಕ್ಕಿಳಿದ ನಾಯಕ ಹಶ್ಮತ್ ಶಾಹಿದಿ ಹಾಗೂ ಅಝ್ಮತ್ ಒಮರ್​ಝಾಹಿ ಅರ್ಧಶತಕ ಬಾರಿಸಿ ಮಿಂಚಿದರು. ಪರಿಣಾಮ ಕೊನೆಯ 8 ಓವರ್​ಗಳಲ್ಲಿ ಅಫ್ಘಾನಿಸ್ತಾನ್ ತಂಡಕ್ಕೆ ಕೇವಲ 28 ರನ್​ಗಳ ಅವಶ್ಯಕತೆಯಿತ್ತು.

ಈ ಹಂತದಲ್ಲಿ ಉತ್ತಮ ಜೊತೆಯಾಟ ಪ್ರದರ್ಶಿಸುವ ಮೂಲಕ ಅಝ್ಮತ್ ಒಮರ್​ಝಾಹಿ (73) ಹಾಗೂ ಹಶ್ಮತ್ ಶಾಹಿದಿ (58) 45.2 ಓವರ್​ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಅಫ್ಘಾನಿಸ್ತಾನ್ ತಂಡ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಸೆಮಿಫೈನಲ್ ರೇಸ್​ನಲ್ಲಿ ಅಫ್ಘಾನ್:

ಶ್ರೀಲಂಕಾ ವಿರುದ್ಧದ ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ್ ತಂಡವು ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಆಡಿರುವ 6 ಪಂದ್ಯಗಳಲ್ಲಿ 3 ಗೆಲುವು ದಾಖಲಿಸಿರುವ ಅಫ್ಘಾನ್ ತಂಡಕ್ಕೆ ಇನ್ನೂ 3 ಪಂದ್ಯಗಳು ಬಾಕಿಯಿದ್ದು, ಈ ಮ್ಯಾಚ್​ಗಳನ್ನು ಗೆಲ್ಲುವ ಮೂಲಕ ಸೆಮಿಫೈನಲ್​ಗೇರಲು ಉತ್ತಮ ಅವಕಾಶವಿದೆ.

ಇಲ್ಲಿ ಅಫ್ಘಾನಿಸ್ತಾನ್ ತಂಡದ ಮುಂದಿನ ಎದುರಾಳಿಗಳೆಂದರೆ ನೆದರ್​ಲೆಂಡ್ಸ್​, ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ. ಈಗಾಗಲೇ ಬಲಿಷ್ಠ ಇಂಗ್ಲೆಂಡ್ ಮತ್ತು ಪಾಕಿಸ್ತಾನ್ ತಂಡಗಳಿಗೆ ಸೋಲುಣಿಸಿರುವ ಅಫ್ಘಾನ್ ಪಡೆ ಮುಂದಿನ ಪಂದ್ಯಗಳಲ್ಲೂ ಗೆಲ್ಲುವ ಮೂಲಕ ಸೆಮಿಫೈನಲ್​ಗೇರಲಿದೆಯಾ ಕಾದು ನೋಡಬೇಕಿದೆ.

ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಜ್ಮತುಲ್ಲಾ ಒಮರ್ಜಾಯ್, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫಝಲ್ಹಕ್ ಫಾರೂಖಿ.

ಇದನ್ನೂ ಓದಿ: Virat Kohli: ಕಿಂಗ್ ಕೊಹ್ಲಿಯ ಅಬ್ಬರಕ್ಕೆ ಸಚಿನ್ ವಿಶ್ವ ದಾಖಲೆ ಉಡೀಸ್

ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಾಲ್ ಮೆಂಡಿಸ್ (ನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಏಂಜೆಲೊ ಮ್ಯಾಥ್ಯೂಸ್, ಮಹೀಶ್ ತೀಕ್ಷಣ, ಕಸುನ್ ರಜಿತ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ.