IPL 2024: ಗುಜರಾತ್ ಟೈಟಾನ್ಸ್ ತಂಡಕ್ಕೆ ಸಾಲು ಸಾಲು ಆಘಾತ; ಅಪಘಾತಕ್ಕೀಡಾದ ಯುವ ಕ್ರಿಕೆಟಿಗ
IPL 2024: 17ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ಲೀಗ್ನಲ್ಲಿ ಸತತ ಎರಡು ಬಾರಿ ಫೈನಲ್ ಪ್ರವೇಶಿಸಿದ್ದ ಗುಜರಾತ್ ಟೈಟಾನ್ಸ್ ತಂಡಕ್ಕೆ ಸಾಲು ಸಾಲು ಆಘಾತಗಳು ಎದುರಾಗುತ್ತಿವೆ. ಸ್ಟಾರ್ ಕ್ರಿಕೆಟಿಗರ ಅಲಭ್ಯತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಯುವ ಬ್ಯಾಟರ್ ಅಪಘಾತಕ್ಕೀಡಾಗಿರುವುದು ಮತ್ತೊಂದು ಹಿನ್ನಡೆಯನ್ನುಂಟು ಮಾಡಿದೆ.
17ನೇ ಆವೃತ್ತಿಯ ಐಪಿಎಲ್ (IPL 2024) ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ಲೀಗ್ನಲ್ಲಿ ಸತತ ಎರಡು ಬಾರಿ ಫೈನಲ್ ಪ್ರವೇಶಿಸಿದ್ದ ಗುಜರಾತ್ ಟೈಟಾನ್ಸ್ (Gujarat Titans) ತಂಡಕ್ಕೆ ಸಾಲು ಸಾಲು ಆಘಾತಗಳು ಎದುರಾಗುತ್ತಿವೆ. ಲೀಗ್ ಆರಂಭಕ್ಕೂ ಮುನ್ನ ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಗುಜರಾತ್ ಫ್ರಾಂಚೈಸಿಯನ್ನು ತೊರೆದು ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದರು. ಆ ಬಳಿಕ ತಂಡದ ಬೌಲಿಂಗ್ ಜೀವಾಳ ಮೊಹಮ್ಮದ್ ಶಮಿ (Mohammed Shami) ಇಂಜುರಿಯಿಂದಾಗಿ ಇಡೀ ಲೀಗ್ನಿಂದಲೇ ಹೊರಬಿದ್ದಿದ್ದರು. ಶಮಿ ಹೊರತಾಗಿ ತಂಡದ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಕೂಡ ಇಂಜುರಿಯಿಂದಾಗಿ ಲೀಗ್ ಆಡುವ ಬಗ್ಗೆ ಇನ್ನು ಮಾಹಿತಿ ಸಿಕ್ಕಿಲ್ಲ. ಈ ನಡುವೆ ತಂಡದ ಯುವ ಆಟಗಾರ ಅಪಘಾತಕ್ಕೀಡಾಗಿದ್ದಾನೆ. ಇದು ತಂಡದ ಸಂಯೋಜನೆಗೆ ಸಾಕಷ್ಟು ಹಿನ್ನಡೆಯನ್ನುಂಟು ಮಾಡಿದೆ.
ರಾಬಿನ್ಗೆ ಹೆಚ್ಚು ಗಾಯಗಳಾಗಿಲ್ಲ
ಸಿಕ್ಕಿರುವ ಮಾಹಿತಿ ಪ್ರಕಾರ 21 ವರ್ಷದ ರಾಬಿನ್ ಮಿಂಜ್ ತಮ್ಮ ಕವಾಸಕಿ ಸೂಪರ್ ಬೈಕ್ನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಮತ್ತೊಂದು ಬೈಕ್ಗೆ ಡಿಕ್ಕಿ ಹೊಡೆದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ರಾಬಿನ್ಗೆ ಹೆಚ್ಚಿನ ಗಾಯಗಳಾಗಿಲ್ಲ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬೈಕ್ ಸಂಪೂರ್ಣ ಜಖಂಗೊಂಡಿದೆ. ೀ ಅಪಘಾತದ ಬಗ್ಗೆ ಮಾಹಿತಿ ನೀಡಿರುವ ರಾಬಿನ್ ಅವರ ತಂದೆ, ರಾಬಿನ್ ಸ್ಥಿತಿ ಗಂಭೀರವಾಗಿಲ್ಲ. ಪ್ರಸ್ತುತ ಅವರು ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ. ಬೈಕ್‌ನ ಮುಂಭಾಗಕ್ಕೆ ಹಾನಿಯಾಗಿದ್ದು, ಮಿಂಜ್ ಅವರ ಬಲ ಮೊಣಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದಿದ್ದಾರೆ.
ಬ್ರಿಸ್ಬೇನ್ ಹೀಟ್ ತಂಡಕ್ಕೆ ಬಿಗ್ ಬ್ಯಾಷ್ ಲೀಗ್ ಕಿರೀಟ; ಫೈನಲ್ನಲ್ಲಿ ಮಿಂಚಿದ ಗುಜರಾತ್ ಟೈಟಾನ್ಸ್ ವೇಗಿ
3.6 ಕೋಟಿಗೆ ಖರೀದಿಸಿದ್ದ ಗುಜರಾತ್
ಕೆಲವು ತಿಂಗಳ ಹಿಂದೆ ದುಬೈನಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಈ ವಿಕೆಟ್‌ಕೀಪರ್ ಬ್ಯಾಟ್ಸ್ಮನ್ರನ್ನು ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಬರೋಬ್ಬರಿ 3.6 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು. ಕೆಲವು ದಿನಗಳ ಹಿಂದೆ ನಡೆದ ಸಿಕೆ ನಾಯುಡು ಟ್ರೋಫಿಯಲ್ಲಿ ಜಾರ್ಖಂಡ್ ತಂಡವನ್ನು ಪ್ರತಿನಿಧಿಸಿದ್ದ ರಾಬಿನ್, ಕರ್ನಾಟಕ ವಿರುದ್ಧದ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ 137 ರನ್ಗಳ ಇನ್ನಿಂಗ್ಸ್ ಆಡಿದ್ದರು. ಆ ನಂತರ ಮನೆಗೆ ಮರಳಿದ್ದ ರಾಬಿನ್, ಐಪಿಎಲ್ ಆರಂಭಕ್ಕೂ ಮುನ್ನ ಗುಜರಾತ್ ಫ್ರಾಂಚೈಸಿ ಆಯೋಜಿಸಿರುವ ಅಭ್ಯಾಸ ಶಿಬಿರದಲ್ಲಿ ಭಾಗಿಯಾಗಬೇಕಿತ್ತು. ಆದರೀಗ ಅಪಘಾತಕ್ಕೀಡಾಗಿರುವ ಅವರು ಈ ಶಿಬಿರದಲ್ಲಿ ಭಾಗವಹಿಸುವುದು ವಿಳಂಬವಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.
Shubman Gill surprises Gujarat Titans team-mate Robin Minz’s father at the airport. 👏
– A great gesture by the Captain. pic.twitter.com/seTDRrKWVT
— Johns. (@CricCrazyJohns) February 28, 2024
ರಾಬಿನ್ ತಂದೆಯನ್ನು ಭೇಟಿಯಾಗಿದ್ದ ಗಿಲ್
ವಾಸ್ತವವಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್‌ನ ನಂತರ ರಾಂಚಿಯಿಂದ ಫ್ಲೈಟ್ ಹತ್ತುವಾಗ ಗುಜರಾತ್ ತಂಡದ ಕ್ಯಾಪ್ಟನ್ ಶುಭ್ಮನ್ ಗಿಲ್, ರಾಬಿನ್ ತಂದೆ ಫ್ರಾನ್ಸಿಸ್ ಮಿಂಜ್ ಅವರನ್ನು ಭೇಟಿಯಾಗಿದ್ದರು. ರಾಂಚಿ ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಫ್ರಾನ್ಸಿಸ್ ಮಿಂಜ್ ಅವರು ಎಲ್ಲಾ ಭಾರತೀಯ ಕ್ರಿಕೆಟಿಗರೊಂದಿಗೆ ಸಂವಾದ ನಡೆಸಿದರು. ಐಪಿಎಲ್‌ನಲ್ಲಿ ನಾಯಕ ಗಿಲ್ ಅವರನ್ನು ಅವರ ಮಗ ಭೇಟಿಯಾದ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದವು. ರಾಬಿನ್ ಅವರ ತಂದೆ ಫ್ರಾನ್ಸಿಸ್ ಕ್ಸೇವಿಯರ್ ಮಿಂಜ್ ಅವರು ಸುಮಾರು ಎರಡು ದಶಕಗಳ ಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದರು, ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:48 pm, Sun, 3 March 24