Nathan Lyon: ಬ್ಯಾಟಿಂಗ್ನಲ್ಲಿ ವಿಶ್ವ ದಾಖಲೆ ಬರೆದ ನಾಥನ್ ಲಿಯಾನ್
Nathan Lyon: ನ್ಯೂಝಿಲೆಂಡ್ ವಿರುದ್ಧದ ಪಂದ್ಯದ ಮೂಲಕ ಆಸ್ಟ್ರೇಲಿಯಾ ಆಟಗಾರ ನಾಥನ್ ಲಿಯಾನ್ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ 46 ರನ್ ಬಾರಿಸುವ ಮೂಲಕ ಲಿಯಾನ್ ಟೆಸ್ಟ್ ಕ್ರಿಕೆಟ್ನಲ್ಲಿ 1500 ರನ್ ಪೂರೈಸಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಯಾರೂ ಬರೆಯದ ಹೊಸ ವಿಶ್ವ ದಾಖಲೆ ನಾಥನ್ ಲಿಯಾನ್ ಪಾಲಾಯಿತು.
Updated on: Mar 03, 2024 | 12:53 PM

ವೆಲ್ಲಿಂಗ್ಟನ್ನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಪಂದ್ಯದ ಮೂಲಕ ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ (Nathan Lyon) ವಿಶೇಷ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ಬ್ಯಾಟಿಂಗ್ ಮೂಲಕ ಎಂಬುದು ವಿಶೇಷ. ಈ ಪಂದ್ಯದಲ್ಲಿ ಲಿಯಾನ್ ಒಟ್ಟು 46 ರನ್ ಬಾರಿಸಿ ಮಿಂಚಿದ್ದರು.

ಈ 46 ರನ್ಗಳೊಂದಿಗೆ ನಾಥನ್ ಲಿಯಾನ್ ಟೆಸ್ಟ್ ಕ್ರಿಕೆಟ್ನಲ್ಲಿ 1501 ರನ್ ಕಲೆಹಾಕಿದ್ದಾರೆ. ಇದರೊಂದಿಗೆ ಟೆಸ್ಟ್ ಇತಿಹಾಸದಲ್ಲೇ ಅರ್ಧಶತಕ ಬಾರಿಸದೇ 1500+ ರನ್ ಕಲೆಹಾಕಿದ ವಿಶ್ವದ ಮೊದಲ ಆಟಗಾರ ಎಂಬ ವಿಶ್ವ ದಾಖಲೆ ಲಿಯಾನ್ ಪಾಲಾಗಿದೆ.

ಆಸ್ಟ್ರೇಲಿಯಾ ಪರ 162 ಟೆಸ್ಟ್ ಇನಿಂಗ್ಸ್ ಆಡಿರುವ ನಾಥನ್ ಲಿಯಾನ್ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. ಇನಿಂಗ್ಸ್ವೊಂದರಲ್ಲಿ 47 ರನ್ ಬಾರಿಸಿದ್ದು ಅವರ ಗರಿಸ್ಠ ಟೆಸ್ಟ್ ಸ್ಕೋರ್. ಇದಾಗ್ಯೂ ಅವರು 1501 ರನ್ ಕಲೆಹಾಕಿದ್ದಾರೆ. ಇದೀಗ ಇದುವೇ ವಿಶ್ವ ದಾಖಲೆಯಾಗಿರುವುದು ವಿಶೇಷ.

ಟೆಸ್ಟ್ ಕ್ರಿಕೆಟ್ನಲ್ಲಿ ನಾಥನ್ ಲಿಯಾನ್ ಅಲ್ಲದೆ, ವೆಸ್ಟ್ ಇಂಡೀಸ್ನ ಕೆಮರ್ ರೋಚ್ (1174) ಮತ್ತು ಪಾಕಿಸ್ತಾನದ ವಾಖರ್ ಯೂನಿಸ್ (1010) ಮಾತ್ರ ಟೆಸ್ಟ್ ಕ್ರಿಕೆಟ್ನಲ್ಲಿ ಅರ್ಧಶತಕ ಬಾರಿಸದೇ ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ.

ಈಗಾಗಲೇ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಹಲವು ದಾಖಲೆ ಬರೆದಿರುವ ಲಿಯಾನ್ ಟೆಸ್ಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವಿಶ್ವದ 7ನೇ ಬೌಲರ್ ಎನಿಸಿಕೊಂಡಿದ್ದಾರೆ. ಇದೀಗ ಅರ್ಧಶತಕವಿಲ್ಲದೇ 1500 ರನ್ ಕಲೆಹಾಕುವ ಮೂಲಕ ನಾಥನ್ ಲಿಯಾನ್ ಬ್ಯಾಟಿಂಗ್ನಲ್ಲೂ ವಿಶ್ವ ದಾಖಲೆ ನಿರ್ಮಿಸಿರುವುದು ವಿಶೇಷ.
