ಅಹಮದಾಬಾದ್ ವಿಮಾನ ದುರಂತ: ಸಂತಾಪ ಸೂಚಿಸಿದ ಟೀಂ ಇಂಡಿಯಾ; ಡಬ್ಲ್ಯುಟಿಸಿ ಫೈನಲ್​ನಲ್ಲಿ 1 ನಿಮಿಷ ಮೌನಾಚರಣೆ

Ahmedabad Plane Crash: ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಮೂರನೇ ದಿನದಾಟ ಆರಂಭಕ್ಕೂ ಮೊದಲು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡದ ಆಟಗಾರರು ಅಹಮದಾಬಾದ್ ವಿಮಾನ ಅಪಘಾತದಲ್ಲಿ ಮೃತಪಟ್ಟವರಿಗೆ ಒಂದು ನಿಮಿಷ ಮೌನಾಚರಣೆ ಮಾಡಿದವು. ಹಾಗೆಯೇ ಟೀಂ ಇಂಡಿಯಾ ಕೂಡ ಮಡಿದವರಿಗೆ ಸಂತಾಪ ಸೂಚಿಸಿದೆ.

ಅಹಮದಾಬಾದ್ ವಿಮಾನ ದುರಂತ: ಸಂತಾಪ ಸೂಚಿಸಿದ ಟೀಂ ಇಂಡಿಯಾ; ಡಬ್ಲ್ಯುಟಿಸಿ ಫೈನಲ್​ನಲ್ಲಿ 1 ನಿಮಿಷ ಮೌನಾಚರಣೆ
Team India

Updated on: Jun 13, 2025 | 4:27 PM

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025 ರ ಫೈನಲ್ (World Test Championship Final) ಪಂದ್ಯದ ಮೂರನೇ ದಿನ ಆರಂಭವಾಗಿದೆ. ಮೂರನೇ ದಿನದ ಆಟ ಪ್ರಾರಂಭವಾಗುವ ಮೊದಲು, ಎರಡೂ ತಂಡಗಳ ಆಟಗಾರರು ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದು 1 ನಿಮಿಷ ಮೌನ ಆಚರಿಸಿದರು. ವಾಸ್ತವವಾಗಿ, ಜೂನ್ 12 ರಂದು ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ 265 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಈ ದುರಂತದಲ್ಲಿ ಮಡಿದ ಎಲ್ಲರಿಗೂ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ (Australia vs South Africa) ಆಟಗಾರರು ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಇತ್ತ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕೂಡ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದೆ.

ಶೋಕ ವ್ಯಕ್ತಪಡಿಸಿದ ಟೀಂ ಇಂಡಿಯಾ

ಪ್ರಸ್ತುತ ಟೀಂ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ಪ್ರವಾಸ ಆರಂಭಕ್ಕೂ ಮುನ್ನ ಭಾರತ ತಂಡದ ನಡುವೆಯೇ ಇಂಟ್ರಾ-ಸ್ಕ್ವಾಡ್ ಪಂದ್ಯವನ್ನು ಆಡಲಾಗುತ್ತಿದೆ. ಆದಾಗ್ಯೂ, ಈ ಪಂದ್ಯ ಆರಂಭಕ್ಕೂ ಮೊದಲು, ತಂಡದ ಆಟಗಾರರು ಕೈಗೆ ಕಪ್ಪು ಪಟ್ಟಿ ಧರಿಸಿ ಒಂದು ನಿಮಿಷ ಮೌನ ಆಚರಿಸಿ ಮಡಿದವರಿಗೆ ಗೌರವ ವಂದನೆ ಸಲ್ಲಿಸಿದರು.

ಆಸ್ಟ್ರೇಲಿಯಾ- ಆಫ್ರಿಕಾ ಆಟಗಾರರ ಮೌನಾಚರಣೆ

ಲಾರ್ಡ್ಸ್‌ನಲ್ಲಿ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್ ಪಂದ್ಯದ ಮೂರನೇ ದಿನದ ಆಟ ಆರಂಭವಾಗುವ ಮುನ್ನ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ ಆಟಗಾರರು ಅಹಮದಾಬಾದ್ ವಿಮಾನ ಅಪಘಾತದಲ್ಲಿ ಮೃತಪಟ್ಟವರಿಗೆ ಒಂದು ನಿಮಿಷ ಮೌನ ಆಚರಿಸಿದರು. ಹಾಗೆಯೇ ಉಭಯ ತಂಡಗಳ ಆಟಗಾರರು ತಮ್ಮ ತೋಳುಗಳ ಮೇಲೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದಿದ್ದಾರೆ.

ಪಂದ್ಯದ ಬಗ್ಗೆ ಹೇಳುವುದಾದರೆ, ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾಕ್ಕೆ 250 ಕ್ಕೂ ಹೆಚ್ಚು ರನ್‌ಗಳ ಗುರಿ ನೀಡುವ ಸಾಧ್ಯತೆ ಇದೆ. ಲಾರ್ಡ್ಸ್‌ನ ಇತಿಹಾಸದ ಬಗ್ಗೆ ಹೇಳುವುದಾದರೆ, ಈ ಮೈದಾನದಲ್ಲಿ ಇಲ್ಲಿಯವರೆಗೆ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 200 ಕ್ಕೂ ಹೆಚ್ಚು ರನ್‌ಗಳ ರನ್ ಚೇಸ್ ಕೇವಲ 4 ಬಾರಿ ಮಾತ್ರ ನಡೆದಿದೆ. ಇದನ್ನು ನೋಡಿದರೆ, ಡಬ್ಲ್ಯುಟಿಸಿ 2025 ರ ಫೈನಲ್​ನಲ್ಲಿ ಯಾವ ತಂಡ ಗೆಲ್ಲಲಿದೆ ಎಂದು ಹೇಳುವುದು ಸಧ್ಯಕ್ಕೆ ಅಸಾಧ್ಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:20 pm, Fri, 13 June 25