ಅಹಮದಾಬಾದ್ ವಿಮಾನ ದುರಂತ; ಮಹತ್ವದ ನಿರ್ಧಾರ ತೆಗೆದುಕೊಂಡ ಡೇವಿಡ್ ವಾರ್ನರ್
David Warner's Air India Boycott: ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದಿಂದ ಆಘಾತಗೊಂಡ ಡೇವಿಡ್ ವಾರ್ನರ್, ಭವಿಷ್ಯದಲ್ಲಿ ಏರ್ ಇಂಡಿಯಾದಲ್ಲಿ ಪ್ರಯಾಣಿಸದಿರಲು ನಿರ್ಧರಿಸಿದ್ದಾರೆ. ಏರ್ ಇಂಡಿಯಾದ ಹಳೆಯ ವಿಮಾನಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ನಿರ್ಧಾರವನ್ನು ಘೋಷಿಸಿದ್ದಾರೆ. ಈ ಘಟನೆಯು ಅವರನ್ನು ಮತ್ತು ಅವರ ಕುಟುಂಬವನ್ನು ಆಘಾತಕ್ಕೀಡುಮಾಡಿದೆ ಎಂದೂ ಅವರು ತಿಳಿಸಿದ್ದಾರೆ. ವಾರ್ನರ್ ಅವರ ಈ ನಿರ್ಧಾರವು ಏರ್ ಇಂಡಿಯಾ ಮತ್ತು ವಿಮಾನ ಸುರಕ್ಷತೆ ಕುರಿತು ಚರ್ಚೆಗೆ ಕಾರಣವಾಗಿದೆ.

ಅಹಮದಾಬಾದ್ ವಿಮಾನ ದುರಂತ (Ahmedabad plane crash) ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ದೇಶ ಮಾತ್ರವಲ್ಲ ಇಡೀ ವಿಶ್ವವೇ ಈ ಅವಘಡಕ್ಕೆ ಮರುಕ ಪಡುತ್ತಿದೆ. ಈ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ಇಡೀ ವಿಶ್ವವೇ ಕಂಬನಿ ಮಿಡಿಯುತ್ತಿದ್ದು, ವಿಶ್ವ ಕ್ರಿಕೆಟ್ ಕೂಡ ಮೌನಾಚರಣೆಯೊಂದಿಗೆ ಗೌರವ ಸಲ್ಲಿಸಿದೆ. ಇದೆಲ್ಲದರ ನಡುವೆ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David Warner) ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ. ಐಪಿಎಲ್ ಮೂಲಕ ಇಡೀ ಭಾರತದಲ್ಲೇ ಮನೆ ಮಾತಾಗಿದ್ದ ವಾರ್ನರ್ ಅವರನ್ನು ಅಪಾರವಾಗಿ ಪ್ರೀತಿಸುವ ಬಳಗ ಭಾರತದಲ್ಲಿದೆ. ಇದಕ್ಕೆ ಪೂರಕವಾಗಿ ವಾರ್ನರ್ ಕೂಡ ಅವಕಾಶ ಸಿಕ್ಕಾಗಲೆಲ್ಲ ಭಾರತದ ಮೇಲೆ ತನಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಅದೇ ವಾರ್ನರ್, ಈ ವಿಮಾನ ದುರಂತದಿಂದ ಆಘಾತಕ್ಕೊಳಗಾಗಿದ್ದು, ಇನ್ನು ಮುಂದೆ ಏರ್ ಇಂಡಿಯಾ ವಿಮಾನದಲ್ಲಿ (Air India boycott) ಪ್ರಯಾಣ ಬೆಳೆಸದಿರಲು ನಿರ್ಧಾರಿಸಿದ್ದಾರೆ.
ಡೇವಿಡ್ ವಾರ್ನರ್ ನಿರ್ಧಾರ
ಜೂನ್ 12 ರಂದು ಅಹಮದಾಬಾದ್‌ನಲ್ಲಿ ನಡೆದ ಹೃದಯವಿದ್ರಾವಕ ಘಟನೆಯ ನಂತರ ಡೇವಿಡ್ ವಾರ್ನರ್ ಸ್ವತಃ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಹಲವು ವಿಚಾರಗಳ ಬಗ್ಗೆ ಬರೆದುಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಹಮದಾಬಾದ್ ವಿಮಾನ ಅಪಘಾತದ ಬಗ್ಗೆ ಪ್ರತಿಕ್ರಿಯಿಸಿರುವ ವಾರ್ನರ್, ಮೊದಲನೆಯದಾಗಿ, ಅವರು ಇಡೀ ಘಟನೆಯನ್ನು ದುಃಖಕರ ಎಂದು ಕರೆದಿದ್ದಾರೆ. ಮುಂದುವರೆದು, ನಾನು ನನ್ನ ಇಡೀ ಕುಟುಂಬದೊಂದಿಗೆ ಏರ್ ಇಂಡಿಯಾದಲ್ಲಿ ಪ್ರಯಾಣಿಸಲು ಉದ್ದೇಶಿಸಿದ್ದೆ, ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲ. ನಾನು ಮತ್ತೆ ಎಂದಿಗೂ ಏರ್ ಇಂಡಿಯಾದಲ್ಲಿ ಪ್ರಯಾಣಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಡೇವಿಡ್ ವಾರ್ನರ್ ಅವರ ಈ ಹೇಳಿಕೆಗೆ ಕಾರಣ ಏರ್ ಇಂಡಿಯಾದ ಮಾಜಿ ಸಿಬ್ಬಂದಿಯೊಬ್ಬರು ದೋಷಪೂರಿತ ವಿಮಾನಗಳ ನಿರಂತರ ಬಳಕೆಯ ಬಗ್ಗೆ ಮಾಡಿದ ಆರೋಪ. ವಾರ್ನರ್ ಮತ್ತೊಂದು ಬೋಯಿಂಗ್ ವಿಮಾನ ಅಪಘಾತಕ್ಕೀಡಾಗಿದೆ ಎಂದು ತಿಳಿಸಿದ ಮತ್ತೊಂದು ಸುದ್ದಿಯನ್ನು ಪೋಸ್ಟ್ ಮಾಡಿದ್ದಾರೆ. ಈ ರೀತಿ ಮುಗ್ಧ ಜನರ ಜೀವದ ಜೊತೆ ಆಟವಾಡುವ ಮೂಲಕ ಲಾಭ ಗಳಿಸುವುದು ತುಂಬಾ ನಾಚಿಕೆಗೇಡಿನ ಸಂಗತಿ ಎಂದು ವಾರ್ನರ್ ಬರೆದುಕೊಂಡಿದ್ದಾರೆ.

ವಾರ್ನರ್ ವೃತ್ತಿಜೀವನ
ಡೇವಿಡ್ ವಾರ್ನರ್ 15 ವರ್ಷಗಳ ಕಾಲ ಆಸ್ಟ್ರೇಲಿಯಾ ಪರ ಕ್ರಿಕೆಟ್ ಆಡಿದ್ದಾರೆ. ಈ ಸಮಯದಲ್ಲಿ ಅವರು 112 ಏಕದಿನ, 162 ಟೆಸ್ಟ್ ಮತ್ತು 110 ಟಿ20 ಪಂದ್ಯಗಳನ್ನು ಆಡಿದ್ದಾರೆ. ಡೇವಿಡ್ ವಾರ್ನರ್ ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ 18000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ 49 ಶತಕಗಳು ಸೇರಿದ್ದು, ಟೆಸ್ಟ್ ಕ್ರಿಕೆಟ್ನಲ್ಲಿ 26, ಏಕದಿನದಲ್ಲಿ 22 ಮತ್ತು ಟಿ20ಯಲ್ಲಿ 1 ಶತಕ ಸೇರಿದೆ.
ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಡೇವಿಡ್ ವಾರ್ನರ್ ಅವರ ಹೆಸರೂ ಸೇರಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿದೇಶಿ ಆಟಗಾರನಾಗಿರುವ ವಾರ್ನರ್, 184 ಐಪಿಎಲ್ ಪಂದ್ಯಗಳಲ್ಲಿ 6565 ರನ್ ಬಾರಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:16 pm, Fri, 13 June 25
