Akash Deep: ಆಘಾತ ಮತ್ತು ಆನಂದ: ಅನಾರೋಗ್ಯ ಪೀಡಿತ ಅಕ್ಕನ ಸಂತಸ
India vs England Test: ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬರೋಬ್ಬರಿ 336 ರನ್ಗಳ ಅಮೋಘ ಗೆಲುವು ದಾಖಲಿಸಿತು. ಈ ಗೆಲುವಿನ ರೂವಾರಿಗಳಲ್ಲಿ ವೇಗಿ ಆಕಾಶ್ ದೀಪ್ ಕೂಡ ಒಬ್ಬರು. ಈ ಪಂದ್ಯದಲ್ಲಿ 10 ವಿಕೆಟ್ ಕಬಳಿಸಿ ಆಕಾಶ್ ದೀಪ್ ಸಂಚಲನ ಸೃಷ್ಟಿಸಿದ್ದರು.

ಎಲ್ಲಾ ನಗುವಿನ ಹಿಂದೆ ಒಂದು ನೋವಿನ ಕಥೆಯಿರುತ್ತದೆ… ಎಲ್ಲಾ ಸಾಧನೆಗಳ ಹಿಂದೆ ಒಂದು ಕಷ್ಟಕಾರ್ಪಣ್ಯದ ವ್ಯಥೆ ಇರುತ್ತದೆ. ಇಂತಹೊಂದು ವ್ಯಥೆಯ ಕಥೆ ಆಕಾಶ್ ದೀಪ್ ಜೀವನದಲ್ಲೂ ಇದೆ. ಈ ಎಲ್ಲಾ ನೋವುಗಳನ್ನು ನುಂಗಿ ಆಕಾಶ್ ದೀಪ್ ಭಾರತದ ಪಾತಾಕೆಯನ್ನು ಆಕಾಶದತ್ತೆರಕ್ಕೇರಿಸಿದ್ದಾರೆ. ಅದು ಕೂಡ ಆಂಗ್ಲರ ನಾಡಿನಲ್ಲಿ ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಗೆಲುವು ತಂದು ಕೊಡುವ ಮೂಲಕ ಎಂಬುದು ವಿಶೇಷ.
ಎಡ್ಜ್ಬಾಸ್ಟನ್ನಲ್ಲಿ ಟೀಮ್ ಇಂಡಿಯಾ ಪಾಲಿಗೆ ಮರೀಚಿಕೆಯಾಗಿದ್ದ ಗೆಲುವನ್ನು ಆಕಾಶ್ ದೀಪ್ ತಂದುಕೊಟ್ಟಿದ್ದಾರೆ. ಅದು ಕೂಡ ಭರ್ಜರಿ ಬೌಲಿಂಗ್ ಪ್ರದರ್ಶಿಸಿ 10 ವಿಕೆಟ್ ಕಬಳಿಸಿ. ಹೀಗೆ ಭಾರತ ತಂಡದ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ ಆಕಾಶ್ ದೀಪ್ ತನ್ನ ಅದ್ಭುತ ಪ್ರದರ್ಶನವನ್ನು ಅಕ್ಕನಿಗೆ ಸಮರ್ಪಿಸಿದ್ದರು.
ಎಡ್ಜ್ಬಾಸ್ಟನ್ ಟೆಸ್ಟ್ ಪಂದ್ಯದ ಬಳಿಕ ಮಾತನಾಡಿದ ಆಕಾಶ್ ದೀಪ್, ನಾನು ಇದರ ಬಗ್ಗೆ ಯಾರೊಂದಿಗೂ ಮಾತನಾಡಿಲ್ಲ, ಆದರೆ ಎರಡು ತಿಂಗಳ ಹಿಂದೆ ನನ್ನ ಸಹೋದರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅವರು ನನ್ನ ಪ್ರದರ್ಶನದಿಂದ ತುಂಬಾ ಸಂತೋಷಪಡುತ್ತಾರೆ. ಇದು ಅವರ ಮುಖದಲ್ಲಿ ಮತ್ತೆ ನಗು ತರಿಸುತ್ತದೆ.
ನಾನು ಚೆಂಡನ್ನು ಕೈಗೆತ್ತಿಕೊಂಡಾಗಲೆಲ್ಲಾ ಅವಳ ಆಲೋಚನೆಗಳು ಮತ್ತು ಚಿತ್ರಗಳು ನನ್ನ ಮನಸ್ಸಿನಲ್ಲಿ ಹಾದು ಹೋಗುತ್ತಿದ್ದವು. ಈ ಪ್ರದರ್ಶನ ಅವಳಿಗೆ ಸಮರ್ಪಿಸುತ್ತಿದ್ದೇನೆ. ಸಹೋದರಿ, ನಾವೆಲ್ಲರೂ ನಿಮ್ಮೊಂದಿಗಿದ್ದೇವೆ ಎಂದು ಆಕಾಶ್ ದೀಪ್ ತನ್ನ ಅಕ್ಕನಿಗೆ ಧೈರ್ಯ ತುಂಬಿದ್ದರು.
ಹೀಗೆ ಬಹಿರಂಗವಾಗಿ ಆಕಾಶ್ ದೀಪ್, ಅಕ್ಕನ ಆತ್ಮಸ್ಥೈರ್ಯವನ್ನು ಹೆಚ್ಚಿಸುವಂತಹ ಹೇಳಿಕೆ ನೀಡಲು ಮುಖ್ಯ ಕಾರಣ, ಅವರ ಸಹೋದರಿ ಜ್ಯೋತಿ ಮಾರಕ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವುದು. ಇದೀಗ ಇಂಗ್ಲೆಂಡ್ ವಿರುದ್ಧ ಭರ್ಜರಿ ಪ್ರದರ್ಶನ ನೀಡುವ ಮೂಲಕ ಆಕಾಶ್ ದೀಪ್ ಅಕ್ಕನ ಮುಖದಲ್ಲಿ ಸಂತಸ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂದಹಾಗೆ ಜ್ಯೋತಿ ಅವರಿಗೆ ಮಾರಕ ಕೊಲೊನ್ ಕ್ಯಾನ್ಸರ್ ರೋಗ ಇರುವುದು ಗೊತ್ತಾಗಿದ್ದು 2025 ರಲ್ಲಿ. ಈ ವೇಳೆ ಆಕಾಶ್ ದೀಪ್ ಅವರು ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿಯುತ್ತಿದ್ದರು. ಇತ್ತ ಕರುಳಿನಲ್ಲಿ ಗಂಟು ಇದ್ದಿದ್ದರಿಂದ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಅಗತ್ಯವಾಗಿತ್ತು. ಹೀಗಾಗಿ ಜ್ಯೋತಿ ಅವರು ಸರ್ಜರಿಗೆ ಒಳಗಾಗಿದ್ದರು.
ಇದೇ ವೇಳೆ ಆಕಾಶ್ ದೀಪ್ ಐಪಿಎಲ್ನಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ ತನ್ನ ಅಭ್ಯಾಸ ಮುಗಿಸಿದ ನಂತರ ಪ್ರತಿದಿನ ಆಸ್ಪತ್ರೆಗೆ ಭೇಟಿ ನೀಡಿ ಆಕ್ಕನ ಆರೋಗ್ಯವನ್ನು ವಿಚಾರಿಸಿಕೊಳ್ಳುತ್ತಿದ್ದರು. ಇದರ ನಡುವೆ ಆಕಾಶ್ ದೀಪ್ ತುಂಬಾ ಕುಗ್ಗಿ ಹೋಗಿದ್ದರು.
ಏಕೆಂದರೆ ಕೆಲ ವರ್ಷಗಳ ಹಿಂದೆಯಷ್ಟೇ ಆಕಾಶ್ ದೀಪ್ ತನ್ನ ತಂದೆ ಹಾಗೂ ಅಣ್ಣನನ್ನು ಕಳೆದುಕೊಂಡಿದ್ದರು. ಈ ನೋವಿನಿಂದ ಹೊರಬರುವ ಮುನ್ನವೇ ಅಕ್ಕನ ಕ್ಯಾನ್ಸರ್ ಸುದ್ದಿಯು ಆಕಾಶ್ ದೀಪ್ ಅವರನ್ನು ಮತ್ತಷ್ಟು ಹೈರಾಣರನ್ನಾಗಿಸಿತು. ಹೀಗಾಗಿಯೇ ಟೀಮ್ ಇಂಡಿಯಾ ವೇಗಿ ಅಕ್ಕನ ಆರೋಗ್ಯದ ಬಗ್ಗೆ ತುಂಬಾ ಚಿಂತತರಾಗಿದ್ದರು.
ಈ ಚಿಂತೆಯೊಂದಿಗೆ ಇಂಗ್ಲೆಂಡ್ ಪ್ರವಾಸ ಮಾಡಿರುವ ಆಕಾಶ್ ದೀಪ್ ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಅಲ್ಲದೆ ತನ್ನ ಅಮೋಘ ಪ್ರದರ್ಶನವನ್ನು ಅಕ್ಕ ಜ್ಯೋತಿಗೆ ಸಮರ್ಪಿಸಿದ್ದಾರೆ.
ದುಡ್ಡು ನೀಡುತ್ತಿದ್ದ ಅಕ್ಕ:
ಆಕಾಶ್ ದೀಪ್ ಇಂದು ಕ್ರಿಕೆಟ್ ಅಂಗಳದಲ್ಲಿ ಏನೇ ಸಾಧಿಸಿದ್ದರೂ, ಅದಕ್ಕೆ ಒಂದು ಕಾರಣ ಅಕ್ಕ ಜ್ಯೋತಿ. ಏಕೆಂದರೆ ಆಕಾಶ್ ಓದಿ ಉತ್ತಮ ಸಾಧನೆ ಮಾಡಬೇಕೆಂದು ಶಿಕ್ಷಕರಾಗಿದ್ದ ಅವರ ತಂದೆ ಬಯಸಿದ್ದರು. ಆದರೆ ಆಕಾಶ್ ದೀಪ್ ಓದು ತಲೆಗೆ ಹತ್ತುತ್ತಿರಲಿಲ್ಲ. ಬದಲಾಗಿ ಕ್ರಿಕೆಟ್ ಆಡುವುದನ್ನು ಇಷ್ಟಪಡುತ್ತಿದ್ದರು.
ನನ್ನ ತಮ್ಮನನ್ನು ಚೆನ್ನಾಗಿ ಓದಿಸಬೇಕೆಂದು ತಂದೆ ಬಯಸಿದ್ದರು. ಆದರೆ ಅವನಿಗೆ ಕ್ರಿಕೆಟ್ ಮಾತ್ರ ಆಸಕ್ತಿಯಿತ್ತು. ಅವನು ಟೂರ್ನಮೆಂಟ್ಗಳಿಗೆ ಹೊರಡುವ ಮೊದಲು ನಮಗೆ ಮಾಹಿತಿ ನೀಡಿ, ನಮ್ಮಿಂದ ಹಣವನ್ನು ಎರವಲು ಪಡೆಯುತ್ತಿದ್ದ. ಗೆದ್ದ ಬಳಿಕ ಅದನ್ನು ಹಿಂತಿರುಗಿಸುತ್ತಿದ್ದ. ಹೀಗೆ ಆಡಿ ಬೆಳೆದು ಈ ಸಾಧನೆ ಮಾಡಿದ್ದಾನೆ ಎಂದು ಹೇಳುವಾಗ ಜ್ಯೋತಿ ಅವರ ಕಣ್ಣುಗಳಲ್ಲಿ ಆನಂದಭಾಷ್ಪ ಚಿಮುತ್ತಿತ್ತು.
ಬಿಹಾರ ಮೂಲದವರಾಗಿರುವ ಆಕಾಶ್ ದೀಪ್, ರಣಜಿ ತಂಡವನ್ನು ಪ್ರತಿನಿಧಿಸುತ್ತಿರುವುದು ಬಂಗಾಳ ಪರ ಎಂಬುದು ವಿಶೇಷ. ಇದಕ್ಕೇನು ಕಾರಣ ಎಂಬುದನ್ನು ಜ್ಯೋತಿ ಬಹಿರಂಗಪಡಿಸಿದ್ದಾರೆ. ಆಕಾಶ್ ದೀಪ್ ಕ್ರಿಕೆಟ್ ಆಡಲು ಶುರುವಾದಾಗ ಬಿಹಾರ ಕ್ರಿಕೆಟ್ ಮಂಡಳಿಯನ್ನು ರಣಜಿ ಟ್ರೋಫಿಯಿಂದ ನಿಷೇಧಿಸಲಾಗಿತ್ತು. ಹೀಗಾಗಿ ಅವನು ಬಂಗಾಳಕ್ಕೆ ತೆರಳಿದ್ದ. ಅಲ್ಲಿ ಸ್ಥಳೀಯ ಪಂದ್ಯಗಳನ್ನು ಆಡುವ ಮೂಲಕ ತಮ್ಮ ಖರ್ಚುಗಳನ್ನು ಸ್ವಂತವಾಗಿ ನಿರ್ವಹಿಸುತ್ತಿದ್ದ. ಹೀಗೆ ಯಾರಿಗೂ ಹೊರೆಯಾಗದೇ ಎಲ್ಲವೂ ನೋಡಿಕೊಳ್ಳುತ್ತಿದ್ದ ಎಂದು ಜ್ಯೋತಿ ತಮ್ಮ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಒಂದೇ ತಂಡದ ಪರ ಕಣಕ್ಕಿಳಿಯಲಿದ್ದಾರೆ ಸ್ಯಾಮ್ಸನ್ ಬ್ರದರ್ಸ್
ಒಟ್ಟಿನಲ್ಲಿ ಕಷ್ಟಕಾರ್ಪಣ್ಯಗಳನ್ನು ಮೆಟ್ಟಿ ನಿಂತು ಆಕಾಶ್ ದೀಪ್ ಹೊಸ ಭರವಸೆ ಮೂಡಿಸಿದ್ದಾರೆ. ಅದು ಕೂಡ ಟೀಮ್ ಇಂಡಿಯಾಗೆ ಎಡ್ಜ್ಬಾಸ್ಟನ್ ಟೆಸ್ಟ್ನಲ್ಲಿ ಐತಿಹಾಸಿಕ ಗೆಲುವು ತಂದುಕೊಡುವ ಮೂಲಕ ಎಂಬುದು.
