
ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದ ಟೀಮ್ ಇಂಡಿಯಾದ ಮಾಜಿ ಆಟಗಾರ ಅಜಿಂಕ್ಯ ರಹಾನೆ, ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೇರಿದಂತೆ ಭಾರತೀಯ ಕ್ರಿಕೆಟ್‌ನ ಎಲ್ಲಾ ಫಾರ್ಮ್ಯಾಟ್‌ಗಳಿಗೂ ಅಧಿಕೃತವಾಗಿ ಗುಡ್ ಬೈ ಹೇಳಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ರಹಾನೆ ಯುಗಕ್ಕೆ ತೆರೆ ಬಿದ್ದಿದೆ.
ಕೆಲ ದಿನಗಳ ಹಿಂದೆಯಷ್ಟೇ 38 ವರ್ಷದ ಹಿರಿಯ ಆಟಗಾರ ರಹಾನೆ, ಸಾಮಾಜಿಕ ಜಾಲತಾಣದಲ್ಲಿ ಭಾವುಕ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ನಿರ್ಧಾರವನ್ನು ಜಗತ್ತಿಗೆ ತಿಳಿಸಿದ್ದರು. ಈ ವಿಡಿಯೋಗೆ “ಕ್ಯಾಪ್ ನಂಬರ್ 278, ಸೈನಿಂಗ್ ಆಫ್” ಎಂಬ ಶೀರ್ಷಿಕೆ ನೀಡುವ ಮೂಲಕ ಅಭಿಮಾನಿಗಳಿಗೆ ಮತ್ತು ಬಿಸಿಸಿಐಗೆ ಧನ್ಯವಾದ ಅರ್ಪಿಸಿದ್ದರು. ಇದೀಗ ಐಪಿಎಲ್ಗೂ ಗುಡ್ ಬೈ ಹೇಳಿ ವಿದೇಶಿ ಲೀಗ್‌ನತ್ತ ಮುಖ ಮಾಡಿದ್ದಾರೆ.
ಅಜಿಂಕ್ಯ ರಹಾನೆ ತಮ್ಮ ಕೊನೆಯ ಐಪಿಎಲ್ ಸೀಸನ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡವನ್ನು ಮುನ್ನಡೆಸಿದ್ದರು. ಇದೀಗ ಅವರು ದಿಢೀರ್ ಆಗಿ ಎಲ್ಲಾ ಮಾದರಿಯ ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವುದರಿಂದ, ಮುಂಬರುವ ಐಪಿಎಲ್ ಸೀಸನ್‌ಗಾಗಿ ಹೊಸ ನಾಯಕನನ್ನು ಹುಡುಕಬೇಕಾದ ದೊಡ್ಡ ಜವಾಬ್ದಾರಿ ಕೆಕೆಆರ್ ಫ್ರಾಂಚೈಸಿ ಹೆಗಲಿಗೇರಿದೆ. ಹೀಗಾಗಿ ಮುಂದಿನ ಸೀಸನ್‌ನಲ್ಲಿ ಕೆಕೆಆರ್ ತಂಡವನ್ನು ಹೊಸ ನಾಯಕ ಮುನ್ನಡೆಸಲಿದ್ದಾರೆ.
ಅಜಿಂಕ್ಯ ರಹಾನೆ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಒಟ್ಟು 6 ತಂಡಗಳ ಪರ ಕಣಕ್ಕಿಳಿದಿದ್ದಾರೆ. ಅದರಲ್ಲಿ ಎರಡು ತಂಡಗಳ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದರು.
ರಹಾನೆ ರಾಜಸ್ಥಾನ್ ರಾಯಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಾಯಕನಾಗಿ ಕಣಕ್ಕಿಳಿದಿದ್ದರು. ಅದರಲ್ಲೂ ಕೆಕೆಆರ್ ತಂಡದ ನಾಯಕನಾಗಿಯೇ ಕೊನೆಯ ಐಪಿಎಲ್ ಪಂದ್ಯವಾಡಿ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಗುಡ್ ಬೈ ಹೇಳಿದ್ದಾರೆ.
ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದಂತೆಯೇ ಅಜಿಂಕ್ಯ ರಹಾನೆ ಅವರಿಗೆ ವಿದೇಶಿ ಲೀಗ್‌ಗಳಿಂದ ಭರ್ಜರಿ ಆಫರ್‌ಗಳು ಬರಲು ಆರಂಭಿಸಿವೆ. ಬಿಸಿಸಿಐ ನಿಯಮಾವಳಿಗಳ ಪ್ರಕಾರ ನಿವೃತ್ತರಾದ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡಲು ಮುಕ್ತಾವಕಾಶವಿರುತ್ತದೆ. ಅದರಂತೆ, ಆಗಸ್ಟ್ 26 ರಿಂದ ಆರಂಭವಾಗಲಿರುವ ಚೊಚ್ಚಲ ಆವೃತ್ತಿಯ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ (ETPL) ಟೂರ್ನಿಯಲ್ಲಿ ರಹಾನೆ ಅವರು ‘ಆಮ್‌ಸ್ಟರ್ಡ್ಯಾಮ್ ಫ್ಲೇಮ್ಸ್’ ತಂಡದ ಪರ ಪ್ರಮುಖ (ಮಾರ್ಕ್ಯೂ) ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರರಿಗೆ ಬಿಗ್ ಶಾಕ್: ಹೊಸ ‘ಫಿಟ್ನೆಸ್ ಟೆಸ್ಟ್’ ಜಾರಿ!
ಆಸ್ಟ್ರೇಲಿಯಾದ ಮಾಜಿ ದಿಗ್ಗಜ ಸ್ಟೀವ್ ವಾ ಈ ತಂಡದ ಸಹ-ಮಾಲೀಕರಾಗಿದ್ದು, ಅಜಿಂಕ್ಯ ರಹಾನೆ ಅವರ ಲೀಡರ್‌ಶಿಪ್ ಗುಣವನ್ನು ಕೊಂಡಾಡಿದ್ದಾರೆ. ಅದರಂತೆ ರಹಾನೆ ಮುಂಬರುವ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ನಲ್ಲಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.