ಹಾರ್ದಿಕ್ ಬದಲಿಗೆ ಸೂರ್ಯಕುಮಾರ್​ಗೆ ನಾಯಕನ ಪಟ್ಟ ಕಟ್ಟಿದ್ಯಾಕೆ? ಸ್ಪಷ್ಟನೆ ನೀಡಿದ ಅಗರ್ಕರ್

|

Updated on: Jul 22, 2024 | 2:54 PM

Team India: ಹಾರ್ದಿಕ್ ಪಾಂಡ್ಯ ಬದಲು ಸೂರ್ಯಕುಮಾರ್ ಯಾದವ್​ಗೆ ಟಿ20 ತಂಡದ ನಾಯಕತ್ವ ಪಟ್ಟ ಕಟ್ಟಿದ್ದು ಏಕೆ ಎಂಬ ಪ್ರಶ್ನೆ ಸುದ್ದಿಗೋಷ್ಠಿಯ ಪ್ರಮುಖ ಹೈಲೈಟ್ಸ್ ಆಗಿತ್ತು. ನಿರೀಕ್ಷೆಯಂತೆ ಈ ಪ್ರಶ್ನೆಯನ್ನು ಸಹ ಸುದ್ದಿಗೋಷ್ಠಿಯಲ್ಲಿ ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಅಜಿತ್ ಅಗರ್ಕರ್, ‘ನಾಯಕತ್ವಕ್ಕೆ ಸೂರ್ಯ ಉತ್ತಮ ಅಭ್ಯರ್ಥಿ ಎಂದಿದ್ದಾರೆ.

ಹಾರ್ದಿಕ್ ಬದಲಿಗೆ ಸೂರ್ಯಕುಮಾರ್​ಗೆ ನಾಯಕನ ಪಟ್ಟ ಕಟ್ಟಿದ್ಯಾಕೆ? ಸ್ಪಷ್ಟನೆ ನೀಡಿದ ಅಗರ್ಕರ್
ಹಾರ್ದಿಕ್, ಸೂರ್ಯ, ಅಜಿತ್ ಅಗರ್ಕರ್
Follow us on

ಶ್ರೀಲಂಕಾ ಪ್ರವಾಸಕ್ಕೆ ತೆರಳುವ ಮುನ್ನ ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಇಂದು ತಮ್ಮ ಮೊದಲ ಪತ್ರಿಕಾಗೋಷ್ಠಿ ನಡೆಸಿದರು. ಈ ಸುದ್ದಿಗೋಷ್ಠಿಯಲ್ಲಿ ಗಂಭೀರ್ ಜೊತೆಗೆ ಟೀಂ ಇಂಡಿಯಾದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಕೂಡ ಉಪಸ್ಥಿತರಿದ್ದರು. ಈ ಸುದ್ದಿಗೋಷ್ಠಿಯಲ್ಲಿ ನಿರೀಕ್ಷೆಯಂತೆ ತಂಡದ ಆಯ್ಕೆ, ಕೇಲವು ಆಟಗಾರರನ್ನು ಕೈಬಿಟ್ಟಿರುವ ಬಗ್ಗೆ ಹಾಗೂ ಫಾರ್ಮ್​ನಲ್ಲಿರದ ಆಟಗಾರರ ಆಯ್ಕೆಯ ಬಗ್ಗೆಯೂ ಹಲವು ಪ್ರಶ್ನೆಗಳನ್ನು ಕೇಳಲಾಯಿತು. ಇದೆಲ್ಲದರ ನಡುವೆ ಹಾರ್ದಿಕ್ ಪಾಂಡ್ಯ ಬದಲು ಸೂರ್ಯಕುಮಾರ್ ಯಾದವ್​ಗೆ ಟಿ20 ತಂಡದ ನಾಯಕತ್ವ ಪಟ್ಟ ಕಟ್ಟಿದ್ದು ಏಕೆ ಎಂಬ ಪ್ರಶ್ನೆ ಸುದ್ದಿಗೋಷ್ಠಿಯ ಪ್ರಮುಖ ಹೈಲೈಟ್ಸ್ ಆಗಿತ್ತು. ನಿರೀಕ್ಷೆಯಂತೆ ಈ ಪ್ರಶ್ನೆಯನ್ನು ಸಹ ಸುದ್ದಿಗೋಷ್ಠಿಯಲ್ಲಿ ಕೇಳಲಾಯಿತು.

ಸೂರ್ಯನಿಗೆ ನಾಯಕತ್ವ ನೀಡಿದ್ಯಾಕೆ?

ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾವನ್ನು ಪ್ರಕಟಿಸಿದ ನಂತರ ಹಲವು ಪ್ರಶ್ನೆಗಳು ಎದ್ದಿದ್ದವು. ಇದರಲ್ಲಿ ಪ್ರಮುಖವಾದದ್ದು, ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ತಂಡದ ನಾಯಕನನ್ನಾಗಿ ಮಾಡಿದ್ದು ಏಕೆ ಎಂಬುದು. ಇದಕ್ಕೆ ಪ್ರಮುಖ ಕಾರಣವೂ ಇದ್ದು, ರೋಹಿತ್ ಶರ್ಮಾ ಟಿ20 ಮಾದರಿಗೆ ನಿವೃತ್ತಿ ಘೋಷಿಸುವ ಮುನ್ನವೆ ಹಾರ್ದಿಕ್ ಪಾಂಡ್ಯರನ್ನು ಟಿ20 ತಂಡದ ನಾಯಕನಾಗಿ ಮಾಡಲಾಗಿತ್ತು. ಹೀಗಾಗಿ ರೋಹಿತ್ ಶರ್ಮಾ ಬಳಿಕ ಅವರೇ ಟಿ20 ತಂಡದ ಖಾಯಂ ನಾಯಕರಾಗುವುದು ಖಚಿತ ಎನ್ನಲಾಗಿತ್ತು. ಆದರೆ ಬೇರೆಯದ್ದೇ ಯೋಜನೆ ಹಾಕಿಕೊಂಡಿದ್ದ ಬಿಸಿಸಿಐ, ಸೂರ್ಯಕುಮಾರ್​ರನ್ನು ನಾಯಕನಾಗಿ ಆಯ್ಕೆ ಮಾಡಿದೆ. ಇದೀಗ ಈ ಆಯ್ಕೆಯ ಹಿಂದಿರುವ ಕಾರಣ ಏನು ಎಂಬುದನ್ನು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಸ್ಪಷ್ಟಪಡಿಸಿದ್ದಾರೆ.

ಈ ಪ್ರಶ್ನೆಗೆ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿರುವ ಅಜಿತ್ ಅಗರ್ಕರ್, ‘ನಾಯಕತ್ವಕ್ಕೆ ಸೂರ್ಯ ಉತ್ತಮ ಅಭ್ಯರ್ಥಿ. ಅವರು ಅತ್ಯುತ್ತಮ ಟಿ20 ಆಟಗಾರರೂ ಆಗಿದ್ದು, ಡ್ರೆಸ್ಸಿಂಗ್ ರೂಮ್‌ನಲ್ಲಿ ಉತ್ತಮ ವಾತಾವರಣ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಲ್ಲದೆ ನಮಗೆ ಎಲ್ಲ ಪಂದ್ಯಗಳನ್ನು ಆಡುವ ನಾಯಕ ಬೇಕಿತ್ತು. ಹಾರ್ದಿಕ್ ಯಾವಾಗಲೂ ನಮಗೆ ಪ್ರಮುಖ ಆಟಗಾರ. ಆದರೆ ಫಿಟ್ನೆಸ್ ಅವರಿಗೆ ಸವಾಲಾಗಿದೆ. ನಮಗೆ ಹೆಚ್ಚಿನ ಸಮಯ ಲಭ್ಯವಿರುವ ನಾಯಕ ಬೇಕು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸೂರ್ಯ ಅವರನ್ನು ನಾಯಕನನ್ನಾಗಿ ಮಾಡಲಾಗಿದೆ ಎಂದಿದ್ದಾರೆ.

ಉಪನಾಯಕತ್ವವೂ ಸಿಗಲಿಲ್ಲ

ವಾಸ್ತವವಾಗಿ ಹಾರ್ದಿಕ್ ಪಾಂಡ್ಯ 2024 ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಉಪನಾಯಕರಾಗಿದ್ದರು. ಈ ಅವಧಿಯಲ್ಲಿ ಅವರ ಪ್ರದರ್ಶನವೂ ಉತ್ತಮವಾಗಿತ್ತು. ಹೀಗಾಗಿ ಶ್ರೀಲಂಕಾ ಪ್ರವಾಸದಲ್ಲಿ ಟಿ20 ತಂಡದ ನಾಯಕರಾಗಿ ಹಾರ್ದಿಕ್ ಅವರನ್ನು ನೇಮಕ ಮಾಡಲಾಗುವುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ನಾಯಕತ್ವ ಇರಲಿ, ಇತ್ತ ಉಪನಾಯಕತ್ವವೂ ಹಾರ್ದಿಕ್ ಪಾಲಿಗೆ ಇಲ್ಲದಂತ್ತಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:49 pm, Mon, 22 July 24