ಶ್ರೇಯಸ್ ಅಯ್ಯರ್ ಯಾಕಿಲ್ಲ? ಇದು ಅವರ ತಪ್ಪಲ್ಲ, ನಮ್ಮ ತಪ್ಪೂ ಅಲ್ಲ..!
Asia Cup 2025: ಏಷ್ಯಾಕಪ್ ಟಿ20 ಟೂರ್ನಿಯು ಸೆಪ್ಟೆಂಬರ್ 9 ರಿಂದ ಶುರುವಾಗಲಿದೆ. ಯುಎಇನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ್, ಶ್ರೀಲಂಕಾ, ಅಫ್ಘಾನಿಸ್ತಾನ್, ಹಾಂಗ್ಕಾಂಗ್, ಬಾಂಗ್ಲಾದೇಶ್ ಒಮಾನ್ ಹಾಗೂ ಯುಇಎ ತಂಡಗಳು ಕಣಕ್ಕಿಳಿಯಲಿವೆ. ಟೀಮ್ ಇಂಡಿಯಾ ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ಕಣಕ್ಕಿಳಿಯುವ ಮೂಲಕ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ.

ಏಷ್ಯಾಕಪ್ಗಾಗಿ ಆಯ್ಕೆ ಮಾಡಲಾದ ಭಾರತ ತಂಡದಲ್ಲಿ ಶ್ರೇಯಸ್ ಅಯ್ಯರ್ಗೆ (Shreyas Iyer) ಸ್ಥಾನ ನೀಡಲಾಗಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರೂ ಅಯ್ಯರ್ ಅವರನ್ನು ಆಯ್ಕೆಗೆ ಪರಿಗಣಿಸದಿರುವ ಬಗ್ಗೆ ಪ್ರಶ್ನೆಗಳೆದ್ದಿವೆ. ಇದೇ ಪ್ರಶ್ನೆಯನ್ನು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರ ಮುಂದಿಡಲಾಗಿದೆ.
ಏಷ್ಯಾಕಪ್ಗೆ ಭಾರತ ತಂಡದ ಘೋಷಣೆಯಾದ ಬೆನ್ನಲ್ಲೇ, ಶ್ರೇಯಸ್ ಅಯ್ಯರ್ ಅವರನ್ನು ಯಾಕೆ ಆಯ್ಕೆ ಮಾಡಲಾಗಿಲ್ಲ? ಎಂಬ ಪ್ರಶ್ನಿಸಲಾಗಿತ್ತು. ಸುದ್ದಿಗೋಷ್ಠಿಯಲ್ಲಿ ತೂರಿಬಂದ ಈ ಪ್ರಶ್ನೆಗೆ ಉತ್ತರಿಸಿದ ಅಜಿತ್ ಅಗರ್ಕರ್, ಇದು ಅವರ ತಪ್ಪಲ್ಲ, ನಮ್ಮ ತಪ್ಪೂ ಅಲ್ಲ. ಅವರಿಗೆ ಅವಕಾಶ ಸಿಗದಿರುವುದು ದುರಾದೃಷ್ಟ ಅಷ್ಟೇ ಎಂದರು.
ಏಕೆಂದರೆ ಶ್ರೇಯಸ್ ಅಯ್ಯರ್ಗಾಗಿ ಯಾರನ್ನು ಕೈ ಬಿಡಬೇಕು? ಯಾರ ಸ್ಥಾನದಲ್ಲಿ ಆಯ್ಕೆ ಮಾಡಬೇಕು ಎಂಬ ಪ್ರಶ್ನೆ ಮೂಡುತ್ತದೆ. ನಾವು 15 ಸದಸ್ಯರುಗಳನ್ನು ಮಾತ್ರ ಆಯ್ಕೆ ಮಾಡಬಹುದು. ಇದರಿಂದಾಗಿ ಶ್ರೇಯಸ್ ಅಯ್ಯರ್ಗೆ ಅವಕಾಶ ಸಿಕ್ಕಿಲ್ಲ. ಇದರಲ್ಲಿ ಅವರ ತಪ್ಪು ಏನೂ ಇಲ್ಲ. ಈ ಸಮಯದಲ್ಲಿ ಅವರು ತಮ್ಮ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ.
ಅಂದರೆ ಶ್ರೇಯಸ್ ಅಯ್ಯರ್ ಟಾಪ್-5 ನಲ್ಲಿ ಕಣಕ್ಕಿಳಿಯುವ ದಾಂಡಿಗ. ಇತ್ತ ಟೀಮ್ ಇಂಡಿಯಾದಲ್ಲಿ ಮೂರನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಕಾಣಿಸಿಕೊಂಡಿದ್ದಾರೆ. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟ್ ಬೀಸಲಿದ್ದಾರೆ. ಇದಾದ ಬಳಿಕ ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ಕಣಕ್ಕಿಳಿಯಲಿದ್ದಾರೆ.
ಇನ್ನು ಫಿನಿಶರ್ ಪಾತ್ರದಲ್ಲಿ ಕಣಕ್ಕಿಳಿಯಲು ರಿಂಕು ಸಿಂಗ್ ಹಾಗೂ ಶಿವಂ ದುಬೆ ನಡುವೆ ಪೈಪೋಟಿ ಇದೆ. ಅಂದರೆ 7 ಸ್ಥಾನಗಳು ಆಲ್ ರೆಡಿ ಫಿಕ್ಸ್ ಆಗಿರುವ ಕಾರಣ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ ಎಂಬ ಸಮಾಜಾಯಿಷಿಯನ್ನು ಅಜಿತ್ ಅಗರ್ಕರ್ ಮುಂದಿಟ್ಟಿದ್ದಾರೆ.
ಇದರ ನಡುವೆ ತಿಲಕ್ ವರ್ಮಾ ಅವರ ಬದಲಿಗೆ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಬಹುದಿತ್ತಲ್ವಾ ಎಂಬ ಪ್ರಶ್ನೆಯನ್ನು ಕೆಲವರು ಮುಂದಿಟ್ಟಿದ್ದಾರೆ. ಆದರೆ ಈ ಪ್ರಶ್ನೆಗೆ ಸೌತ್ ಆಫ್ರಿಕಾ ವಿರುದ್ಧ ತಿಲಕ್ ವರ್ಮಾ ಆಡಿದ ಇನಿಂಗ್ಸ್ಗಳೇ ಉತ್ತರ.
ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತಿಲಕ್ ಬ್ಯಾಕ್ ಟು ಬ್ಯಾಕ್ 2 ಸೆಂಚುರಿ ಸಿಡಿಸಿ ಒಟ್ಟು 280 ರನ್ಗಳನ್ನು ಕಲೆಹಾಕಿದ್ದರು. ಹೀಗಾಗಿಯೇ ಶ್ರೇಯಸ್ ಅಯ್ಯರ್ ಅವರ ಬದಲಿಗೆ ತಿಲಕ್ ವರ್ಮಾ ಅವರನ್ನು ಮೂರನೇ ಕ್ರಮಾಂಕಕ್ಕೆ ಪರಿಗಣಿಸಲಾಗಿದೆ. ಇತ್ತ ಸ್ಲಾಟ್ಗಳು ಫುಲ್ ಫಿಲ್ ಆದ ಕಾರಣ ಶ್ರೇಯಸ್ ಅಯ್ಯರ್ ಅವಕಾಶವಂಚಿತರಾಗಿದ್ದಾರೆ.
ಏಷ್ಯಾ ಕಪ್ಗೆ ಭಾರತ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್.
ಇದನ್ನೂ ಓದಿ: ಆಸ್ಟ್ರೇಲಿಯಾ ಪಡೆಯ ಗರ್ವಭಂಗ: 34 ವರ್ಷಗಳ ಬಳಿಕ ಅತ್ಯಂತ ಹೀನಾಯ ಸೋಲು
ಮೀಸಲು ಆಟಗಾರರು: ಧ್ರುವ್ ಜುರೇಲ್, ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್.
