ಟೀಮ್ ಇಂಡಿಯಾದಿಂದ ಆಕಾಶ್ ದೀಪ್ ಔಟ್: ಕನ್ನಡಿಗನಿಗೆ ಸಿಗುತ್ತಾ ಚಾನ್ಸ್?

|

Updated on: Jan 02, 2025 | 1:00 PM

India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 3ನೇ ಮತ್ತು 4ನೇ ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ವೇಗಿ ಆಕಾಶ್ ದೀಪ್ ಕೊನೆಯ ಮ್ಯಾಚ್​ಗೆ ಅಲಭ್ಯರಾಗಿದ್ದಾರೆ. ಬೆನ್ನು ನೋವಿನ ಕಾರಣ ಆಕಾಶ್ ಸಿಡ್ನಿ ಟೆಸ್ಟ್​ನಿಂದ ಹೊರಗುಳಿದಿದ್ದಾರೆ. ಕಳೆದ 2 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಆಕಾಶ್ ದೀಪ್ ಕೇವಲ 4 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದರು.

ಟೀಮ್ ಇಂಡಿಯಾದಿಂದ ಆಕಾಶ್ ದೀಪ್ ಔಟ್: ಕನ್ನಡಿಗನಿಗೆ ಸಿಗುತ್ತಾ ಚಾನ್ಸ್?
Akash Deep
Follow us on

ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ವೇಗಿ ಆಕಾಶ್ ದೀಪ್ ಅಲಭ್ಯರಾಗಿದ್ದಾರೆ. ಬೆನ್ನು ನೋವಿನ ಕಾರಣ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಕಾಶ್ ದೀಪ್ ಕಣಕ್ಕಿಳಿಯುತ್ತಿಲ್ಲ ಎಂದು ಖುದ್ದು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಮಾಹಿತಿ ನೀಡಿದ್ದಾರೆ.

ಇತ್ತ ಆಕಾಶ್ ದೀಪ್ ಹೊರಗುಳಿದರೆ ಅವರ ಸ್ಥಾನದಲ್ಲಿ ಕಣಕ್ಕಿಳಿಯುವ ವೇಗಿ ಯಾರು ಎಂಬುದೇ ಈಗ ಕುತೂಹಲ. ಏಕೆಂದರೆ ತಂಡದಲ್ಲಿ ಇಬ್ಬರು ವೇಗದ ಬೌಲರ್​​ಗಳಿದ್ದು, ಇವರಲ್ಲಿ ಒಬ್ಬರಿಗೆ ಚಾನ್ಸ್ ಸಿಗುವುದು ಖಚಿತ. ಹೀಗೆ ಟೀಮ್ ಇಂಡಿಯಾದಲ್ಲಿ ಅವಕಾಶವನ್ನು ಎದುರು ನೋಡುತ್ತಿರುವ ವೇಗಿಗಳೆಂದರೆ ಹರ್ಷಿತ್ ರಾಣಾ ಹಾಗೂ ಪ್ರಸಿದ್ಧ್ ಕೃಷ್ಣ.

ಇಲ್ಲಿ ಹರ್ಷಿತ್ ರಾಣಾ ಈಗಾಗಲೇ ಎರಡು ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಪರ್ತ್ ಮತ್ತು ಅಡಿಲೇಡ್​​ ಟೆಸ್ಟ್​ ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದ ಹರ್ಷಿತ್ ಒಟ್ಟು 4 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಬ್ರಿಸ್ಬೇನ್ ಮತ್ತು ಮೆಲ್ಬೋರ್ನ್ ಟೆಸ್ಟ್​ನಲ್ಲಿ ಅವರನ್ನು ಕೈ ಬಿಟ್ಟು, ಆಕಾಶ್ ದೀಪ್ ಅವರನ್ನು ಕಣಕ್ಕಿಳಿಸಲಾಗಿತ್ತು.

ಇದೀಗ ಆಕಾಶ್ ದೀಪ್ ಹೊರಗುಳಿದಿರುವ ಕಾರಣ ಮತ್ತೆ ಅನಾನುಭವಿ ವೇಗಿಯನ್ನು ಕಣಕ್ಕಿಳಿಸಬೇಕಾದ ಅನಿವಾರ್ಯತೆ ಟೀಮ್ ಇಂಡಿಯಾ ಮುಂದಿದೆ. ಇತ್ತ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಚೊಚ್ಚಲ ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ.

ಅತ್ತ ಹರ್ಷಿತ್ ರಾಣಾಗೆ ಈಗಾಗಲೇ ಎರಡು ಚಾನ್ಸ್ ಸಿಕ್ಕಿದ್ದರೂ ನಿರೀಕ್ಷಿತ ಪ್ರಭಾವ ಬೀರುವಲ್ಲಿ ವಿಫಲರಾಗಿದ್ದಾರೆ. ಇದೇ ಕಾರಣದಿಂದ ಇದೀಗ ಪ್ರಸಿದ್ಧ್ ಕೃಷ್ಣ ಪಾದಾರ್ಪಣೆ ಅವಕಾಶವನ್ನು ಎದುರು ನೋಡುತ್ತಿದ್ದಾರೆ.  ಅದರಂತೆ ಸಿಡ್ನಿ ಟೆಸ್ಟ್ ಪಂದ್ಯದ ಮೂಲಕ ಕನ್ನಡಿಗ ಭಾರತ ಪರ ಚೊಚ್ಚಲ ಟೆಸ್ಟ್​ ಪಂದ್ಯವನ್ನಾಡಲಿದ್ದಾರಾ ಕಾದು ನೋಡಬೇಕಿದೆ.

ಕೊನೆಯ ಟೆಸ್ಟ್ ಪಂದ್ಯ ಯಾವಾಗ ಶುರು?

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಕೊನೆಯ ಟೆಸ್ಟ್ ಪಂದ್ಯವು ಶುಕ್ರವಾರದಿಂದ (ಜ.3) ಶುರುವಾಗಲಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯಲಿರುವ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್​ನಲ್ಲಿ ಭಾರತ ತಂಡ ಗೆದ್ದರೆ ಸರಣಿಯನ್ನು ಸಮಬಲದಲ್ಲಿ ಕೊನೆಗೊಳಿಸಬಹುದು. ಹೀಗಾಗಿ ಅಂತಿಮ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: IPL ನಲ್ಲಿಲ್ಲ ಚಾನ್ಸ್… PSL ನತ್ತ ಮುಖ ಮಾಡಿದ ಡೇವಿಡ್ ವಾರ್ನರ್

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಜಸ್​ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್​ಮನ್ ಗಿಲ್ , ವಿರಾಟ್ ಕೊಹ್ಲಿ , ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸರ್ಫರಾಝ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ , ಮೊಹಮ್ಮದ್ ಸಿರಾಜ್ , ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ದೇವದತ್ ಪಡಿಕ್ಕಲ್, ತನುಷ್ ಕೋಟ್ಯಾನ್.