ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಆಕಾಶ್ ದೀಪ್ ಮಾರಕ ಬೌಲಿಂಗ್ ಪ್ರದರ್ಶಿಸಿದ್ದಾರೆ. ಭಾರತ ಎ ತಂಡದ ಪರ ಕಣಕ್ಕಿಳಿದಿರುವ ಆಕಾಶ್ ದೀಪ್ ಎರಡು ಇನಿಂಗ್ಸ್ಗಳಿಂದ ಒಟ್ಟು 9 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಎ ತಂಡದ ನಾಯಕ ಶುಭ್ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲ ಇನಿಂಗ್ಸ್ ಆಡಿದ ಭಾರತ ಬಿ ತಂಡವನ್ನು 321 ರನ್ಗಳಿಗೆ ಆಲೌಟ್ ಮಾಡುವಲ್ಲಿ ಭಾರತ ಎ ತಂಡದ ಬೌಲರ್ಗಳು ಯಶಸ್ವಿಯಾಗಿದ್ದರು. ಈ ವೇಳೆ 27 ಓವರ್ ಎಸೆದಿದ್ದ ಆಕಾಶ್ ದೀಪ್ 60 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದ್ದರು.
ಇದಾದ ಬಳಿಕ ಪ್ರಥಮ ಇನಿಂಗ್ಸ್ ಆಡಿದ ಭಾರತ ಎ ತಂಡವು 231 ರನ್ಗಳಿಗೆ ಆಲೌಟ್ ಆಗಿದೆ. ಇದರ ಬೆನ್ನಲ್ಲೇ 90 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಭಾರತ ಬಿ ತಂಡವನ್ನು 184 ರನ್ಗಳಿಗೆ ಆಲೌಟ್ ಮಾಡುವಲ್ಲಿ ಆಕಾಶ್ ದೀಪ್ ಯಶಸ್ವಿಯಾದರು. ದ್ವಿತೀಯ ಇನಿಂಗ್ಸ್ನಲ್ಲೂ ಕರಾರುವಾಕ್ ದಾಳಿ ಸಂಘಟಿಸಿದ ಆಕಾಶ್ ದೀಪ್ 14 ಓವರ್ಗಳಲ್ಲಿ 56 ರನ್ ನೀಡಿ 5 ವಿಕೆಟ್ ಉರುಳಿಸಿದರು. ಈ ಮೂಲಕ ದುಲೀಪ್ ಟ್ರೋಫಿಯ ಮೊದಲ ಪಂದ್ಯದಲ್ಲೇ 9 ವಿಕೆಟ್ ಕಬಳಿಸಿ ಆಯ್ಕೆಗಾರರ ಗಮನ ಸೆಳೆದಿದ್ದಾರೆ.
ಈ ಬಾರಿಯ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವಕಾಶ ಸಿಗಲಿದೆ. ಅದರಂತೆ ಇದೀಗ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಮುಶೀರ್ ಖಾನ್ 181 ರನ್ ಬಾರಿಸಿ ಮಿಂಚಿದರೆ, ಆಕಾಶ್ ದೀಪ್ 9 ವಿಕೆಟ್ ಕಬಳಿಸಿದ್ದಾರೆ. ಈ ಅದ್ಭುತ ಪ್ರದರ್ಶನವನ್ನು ಮುಂದಿನ ಪಂದ್ಯಗಳಲ್ಲೂ ಮುಂದುವರೆಸಿದ ಆರ್ಸಿಬಿ ವೇಗಿ ಭಾರತ ತಂಡದಲ್ಲಿ ಸ್ಥಾನ ಪಡೆಯುವುದನ್ನು ನಿರೀಕ್ಷಿಸಬಹುದು.