T20 ಕ್ರಿಕೆಟ್ನಲ್ಲಿ ಅದ್ಭುತಗಳು..ಅತ್ಯಾದ್ಭುತಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಇದೀಗ ಕೆರಿಬಿಯನ್ ಪ್ರೀಮಿಯರ್ ಲೀಗ್ (CPL 2021) ಸರದಿ. ಸಿಪಿಎಲ್ನ 8ನೇ ಸೀಸನ್ ಆರಂಭದಿಂದಲೂ ಒಂದಲ್ಲ ಒಂದು ಕಾರಣದಿಂದ ಕ್ರಿಕೆಟ್ ಪ್ರೇಮಿಗಳನ್ನು ಸೆಳೆಯುತ್ತಿದೆ. ಈ ಹಿಂದೆ ಆ್ಯಂಡ್ರೆ ರಸೆಲ್ (Andre Russel) ಬಿರುಗಾಳಿ ಬ್ಯಾಟಿಂಗ್ ಮೂಲಕ ಸದ್ದು ಮಾಡಿದ್ದ ಸಿಪಿಎಲ್-8, ಈ ಬಾರಿ ಅಕಿಲ್ ಹುಸೈನ್ (Akeal Hosein) ಅವರ ಅತ್ಯಾದ್ಭುತ ಫೀಲ್ಡಿಂಗ್ ಎಲ್ಲರ ಗಮನ ಸೆಳೆದಿದೆ. CPLನ 11 ನೇ ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ (Guyana Amazon Warriors) ಹಾಗೂ ಟ್ರಿನ್ಬಾಗೊ ನೈಟ್ ರೈಡರ್ಸ್ (Trinbago Knight Riders) ತಂಡಗಳು ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ಕೀರನ್ ಪೊಲಾರ್ಡ್ ನಾಯಕತ್ವದ ನೈಟ್ ರೈಡರ್ಸ್ ತಂಡವು ನಿಗದಿತ 20 ಓವರ್ನಲ್ಲಿ 9 ವಿಕೆಟ್ ಕಳೆದುಕೊಂಡು 138 ರನ್ ಕಲೆಹಾಕಿತು.
ಈ ಸಧಾರಣ ಗುರಿ ಬೆನ್ನತ್ತಿದ ಅಮೆಜಾನ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಟಿಕೆಆರ್ ತಂಡ ಯಶಸ್ವಿಯಾಗಿತ್ತು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಚೇತರಿಸಿಕೊಂಡ ಅಮೆಜಾನ್ ಸುಲಭ ಜಯ ಸಾಧಿಸಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ರವಿ ರಾಂಪಾಲ್ ಎಸೆದ 18ನೇ ಓವರ್ನಲ್ಲಿ ಅಮೆಜಾನ್ ವಾರಿಯರ್ಸ್ ನಾಯಕ ನಿಕೋಲಸ್ ಪೂರನ್ ವಿಕೆಟ್ ಬೀಳುವುದರೊಂದಿಗೆ ಪಂದ್ಯವು ರೋಚಕತೆಗೆ ತಿರುಗಿತು.
ರಾಂಪಾಲ್ ಎಸೆದ ಆಫ್ ಸ್ಟಂಪ್ ಹೊರಗಿನ ಎಸೆತವನ್ನು ಪೂರನ್ ಕವರ್‌ನತ್ತ ಸಿಕ್ಸರ್ ಬಾರಿಸಲು ಯತ್ನಿಸಿದ್ದರು. ಇನ್ನೇನು ಚೆಂಡು ಗಾಳಿಯಲ್ಲಿ ಬೌಂಡರಿ ಗೆರೆ ದಾಟಲಿದೆ ಅನ್ನುವಷ್ಟರಲ್ಲಿ ಅಲ್ಲೇ ಫೀಲ್ಡಿಂಗ್ನಲ್ಲಿ ಅಕಿಲ್ ಹುಸೈನ್ ಅದ್ಭುತವಾಗಿ ಜಿಗಿದು ಚೆಂಡನ್ನು ಕೈಯಲ್ಲಿ ಬಂಧಿಸಿದರು. ಅಷ್ಟೇ ಅಲ್ಲದೆ ಕ್ಯಾಚ್ ಹಿಡಿದ ಬಳಿಕ, ದೇಹವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದ ಅಕಿಲ್ ನಿಕೋಲಸ್ ಪೂರನ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು.
AMAZING!!! What a catch by Akeal Hosein our @fun88eng magic moment from match11. #CPL21 #TKRvGAW #CricketPlayedLouder #FUN88 pic.twitter.com/f2khmxAssy
— CPL T20 (@CPL) September 1, 2021
ಈ ಅದ್ಭುತ ಕ್ಯಾಚ್ನಿಂದಾಗಿ ಅಮೆಜಾನ್ ವಾರಿಯರ್ಸ್ ತಂಡ ದಿಢೀರಣೆ ಕುಸಿತಕ್ಕೊಳಗಾಯಿತು. ಸುಲಭವಾಗಿ ಗೆಲ್ಲಬೇಕಿದ್ದ ಪಂದ್ಯದಲ್ಲಿ 138 ರನ್ ಬಾರಿಸಿ ಅಮೆಜಾನ್ ಟೈ ಮಾಡಿಕೊಂಡಿತು. ಇದಾಗ್ಯೂ ಸೂಪರ್ ಓವರ್ನಲ್ಲಿ ಟಿನ್ಬಾಗೊ ನೈಟ್ ರೈಡರ್ಸ್ ನೀಡಿದ 6 ರನ್ಗಳ ಗುರಿಯನ್ನು ಬೆನ್ನತ್ತುವ ಮೂಲಕ ಅಮೆಜಾನ್ ವಾರಿಯರ್ಸ್ ಈ ಪಂದ್ಯವನ್ನು ಗೆದ್ದುಕೊಂಡಿತು. ಇದೀಗ ಅಕಿಲ್ ಹುಸೈನ್ ಹಿಡಿದ ಅದ್ಭುತ ಕ್ಯಾಚ್ ಪ್ರಸ್ತುತ ಕೆರಿಬಿಯನ್ ಲೀಗ್ನ ಬೆಸ್ಟ್ ಕ್ಯಾಚ್ ಎನಿಸಿಕೊಂಡಿದೆ. ಅಲ್ಲದೆ ಸಿಪಿಎಲ್ನ ಅತ್ಯುತ್ತಮ ಕ್ಯಾಚ್ಗಳಲ್ಲಿ ಇದು ಕೂಡ ಒಂದು ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: ರಾಹುಲ್ ದ್ರಾವಿಡ್ ಗರಡಿ ಹುಡುಗನ ಆರ್ಭಟ: ಎದುರಾಳಿ ತಂಡ 69 ರನ್ಗೆ ಆಲೌಟ್
ಇದನ್ನೂ ಓದಿ: Shane Warne: ಸಾರ್ವಕಾಲಿಕ ಟಾಪ್ 10 ವೇಗಿಗಳನ್ನು ಹೆಸರಿಸಿದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್
ಇದನ್ನೂ ಓದಿ: Crime News: ಬಾಲಕನನ್ನು ಮದುವೆಯಾಗಿ ಜೈಲು ಸೇರಿದ ಯುವತಿ
(Akeal Hosein takes brilliant catch in cpl 2021)