
ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ ಅಲೆಕ್ಸ್ ಕ್ಯಾರಿ ಆಸ್ಟ್ರೇಲಿಯಾ ಪರ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಗಾಲೆ ಇಂಟರ್ನ್ಯಾಷನಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಶ್ರೀಲಂಕಾ ಪರ ಕುಸಾಲ್ ಮೆಂಡಿಸ್ (85) ಹಾಗೂ ದಿನೇಶ್ ಚಂಡಿಮಲ್ (74) ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಅರ್ಧಶತಕಗಳ ನೆರವಿನಿಂದ ಶ್ರೀಲಂಕಾ ತಂಡವು ಮೊದಲ ಇನಿಂಗ್ಸ್ನಲ್ಲಿ 257 ರನ್ ಕಲೆಹಾಕಿತು.
ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಶುರು ಮಾಡಿದ ಆಸ್ಟ್ರೇಲಿಯಾ ಪರ ನಾಯಕ ಸ್ಟೀವ್ ಸ್ಮಿತ್ ಹಾಗೂ ಅಲೆಕ್ಸ್ ಕ್ಯಾರಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಸ್ಮಿತ್ 131 ರನ್ಗಳ ಭರ್ಜರಿ ಶತಕ ಸಿಡಿಸಿದರೆ, ಇತ್ತ ಅಲೆಕ್ಸ್ ಕ್ಯಾರಿ 156 ರನ್ ಚಚ್ಚಿದರು.
ಈ ಇನಿಂಗ್ಸ್ನಲ್ಲಿ 188 ಎಸೆತಗಳನ್ನು ಎದುರಿಸಿದ ಅಲೆಕ್ಸ್ ಕ್ಯಾರಿ 2 ಸಿಕ್ಸ್ ಹಾಗೂ 15 ಫೋರ್ಗಳೊಂದಿಗೆ 156 ರನ್ ಕಲೆಹಾಕಿದರು. ಇದರೊಂದಿಗೆ ಏಷ್ಯಾದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ 150+ ರನ್ಗಳಿಸಿದ ಆಸ್ಟ್ರೇಲಿಯಾದ ಮೊದಲ ವಿಕೆಟ್ ಕೀಪರ್ ಬ್ಯಾಟರ್ ಎನಿಸಿಕೊಂಡರು.
ಇದಕ್ಕೂ ಮುನ್ನ ಏಷ್ಯಾದಲ್ಲಿ ಟೆಸ್ಟ್ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ದಾಖಲೆ ಆ್ಯಡಂ ಗಿಲ್ಕ್ರಿಸ್ಟ್ ಹೆಸರಿನಲ್ಲಿತ್ತು. 2004 ರಲ್ಲಿ ಕ್ಯಾಂಡಿಯಲ್ಲಿ ನಡೆದ ಟೆಸ್ಟ್ನಲ್ಲಿ ಗಿಲ್ಕ್ರಿಸ್ಟ್ 144 ರನ್ ಬಾರಿಸಿದ್ದು ಶ್ರೇಷ್ಠ ಸಾಧನೆಯಾಗಿತ್ತು.
ಇದೀಗ 156 ರನ್ಗಳೊಂದಿಗೆ ಏಷ್ಯಾದಲ್ಲಿ ಗರಿಷ್ಠ ರನ್ ಕಲೆಹಾಕಿದ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಅಲೆಕ್ಸ್ ಕ್ಯಾರಿ ತಮ್ಮದಾಗಿಸಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ ಶ್ರೀಲಂಕಾ ತಂಡ 257 ರನ್ ಕಲೆಹಾಕಿದರೆ, ಆಸ್ಟ್ರೇಲಿಯಾ ತಂಡ 414 ರನ್ಗಳಿಸಿದೆ. ಈ ಮೂಲಕ ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡವು 157 ರನ್ ಕಲೆಹಾಕಿದೆ.
ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ , ದಿಮುತ್ ಕರುಣಾರತ್ನೆ , ದಿನೇಶ್ ಚಾಂಡಿಮಲ್ , ಏಂಜೆಲೊ ಮ್ಯಾಥ್ಯೂಸ್ , ಕಮಿಂದು ಮೆಂಡಿಸ್ , ಧನಂಜಯ ಡಿ ಸಿಲ್ವಾ (ನಾಯಕ) , ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್) , ರಮೇಶ್ ಮೆಂಡಿಸ್ , ಪ್ರಭಾತ್ ಜಯಸೂರ್ಯ , ನಿಶಾನ್ ಪೀರಿಸ್ , ಲಹಿರು ಕುಮಾರ.
ಇದನ್ನೂ ಓದಿ: ಭಾರತದಲ್ಲಿ ಇತಿಹಾಸ ನಿರ್ಮಿಸಿದ ಜೇಕಬ್ ಬೆಥೆಲ್
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಉಸ್ಮಾನ್ ಖವಾಜಾ , ಟ್ರಾವಿಸ್ ಹೆಡ್ , ಮಾರ್ನಸ್ ಲ್ಯಾಬುಸ್ಚಾಗ್ನೆ , ಸ್ಟೀವನ್ ಸ್ಮಿತ್ (ನಾಯಕ) , ಜೋಶ್ ಇಂಗ್ಲಿಸ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಬ್ಯೂ ವೆಬ್‌ಸ್ಟರ್ , ಕೂಪರ್ ಕಾನೊಲಿ , ಮಿಚೆಲ್ ಸ್ಟಾರ್ಕ್ , ಮ್ಯಾಥ್ಯೂ ಕುಹ್ನೆಮನ್ , ನಾಥನ್ ಲಿಯಾನ್.