ಟಿ20 ಬಳಿಕ ರಣಜಿಯಲ್ಲೂ ಮುಗ್ಗರಿಸಿದ ಸೂರ್ಯಕುಮಾರ್ ಯಾದವ್
Haryana vs Mumbai, Quarter Final: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹರ್ಯಾಣ ತಂಡವು ಭರ್ಜರಿ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುತ್ತಿರುವ ಮುಂಬೈ ವಿರುದ್ಧ ಹರ್ಯಾಣ ಬೌಲರ್ಗಳು ಕರಾರುವಾಕ್ ದಾಳಿ ಸಂಘಟಿಸಿದ್ದು, ಈ ಮೂಲಕ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಇಕ್ಕಟಿಗೆ ಸಿಲುಕಿದೆ.

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸೂರ್ಯಕುಮಾರ್ ಯಾದವ್ ಇದೀಗ ರಣಜಿ ಪಂದ್ಯದಲ್ಲೂ ವಿಫಲರಾಗಿದ್ದಾರೆ. ರಣಜಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ಪರ ಕಣಕ್ಕಿಳಿದ ಸೂರ್ಯ ಕೇವಲ 9 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಹರ್ಯಾಣ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಬ್ಯಾಟಿಂಗ್ ಆಯ್ದುಕೊಂಡಿತು.
ಅದರಂತೆ ಇನಿಂಗ್ಸ್ ಆರಂಭಿಸಿದ ಮುಂಬೈ ತಂಡವು ಆರಂಭಿಕ ಆಘಾತಕ್ಕೆ ಒಳಗಾಯಿತು. ಆರಂಭಿಕ ಆಟಗಾರ ಆಯುಷ್ (0) ಮೊದಲ ಓವರ್ನ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು. ಇನ್ನು ಆಕಾಶ್ ಆನಂದ್ ಕೇವಲ 10 ರನ್ ಮಾತ್ರ ಗಳಿಸಿದರು.
ಸಿದ್ದೇಶ್ ಲಾಡ್ 4 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದರೆ, ನಾಯಕ ಅಜಿಂಕ್ಯ ರಹಾನೆ 31 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ 2 ಫೋರ್ ಬಾರಿಸಿದರೂ 9 ರನ್ಗಳಿಸಿ ಸುಮಿತ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಸೂರ್ಯ ಸತತ ವೈಫಲ್ಯ:
ಸೂರ್ಯಕುಮಾರ್ ಯಾದವ್ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಈ ಸರಣಿಯಲ್ಲಿ 5 ಇನಿಂಗ್ಸ್ ಆಡಿದ್ದ ಸೂರ್ಯ ಕಲೆಹಾಕಿದ್ದು ಕೇವಲ 28 ರನ್ಗಳು ಮಾತ್ರ. ಇದು 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತೀಯ ಟಾಪ್ ಆರ್ಡರ್ ಬ್ಯಾಟರ್ರೊಬ್ಬರು ಕಲೆಹಾಕಿದ ಅತ್ಯಂತ ಕನಿಷ್ಠ ಮೊತ್ತ ಎಂಬುದು ವಿಶೇಷ.
ಈ ಕಳಪೆ ಪ್ರದರ್ಶನದ ಹೊರತಾಗಿಯೂ ರಣಜಿ ಟೂರ್ನಿಯಲ್ಲಿ ಮುಂಬೈ ಪರ ಅವಕಾಶ ಪಡೆದ ಸೂರ್ಯಕುಮಾರ್ ಯಾದವ್ ಇದೀಗ ಮೊದಲ ಇನಿಂಗ್ಸ್ನಲ್ಲಿ ಕೇವಲ 9 ರನ್ಗಳಿಸಿ ನಿರಾಸೆ ಮೂಡಿಸಿದ್ದಾರೆ.
7 ವಿಕೆಟ್ ಕಳೆದುಕೊಂಡ ಮುಂಬೈ:
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿರುವ ಮುಂಬೈ ತಂಡವು ಕೇವಲ 113 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇದೀಗ ಶಾರ್ದೂಲ್ ಠಾಕೂರ್ ಹಾಗೂ ತನುಷ್ ಕೋಟ್ಯಾನ್ ಬ್ಯಾಟ್ ಬೀಸುತ್ತಿದ್ದು, 38 ಓವರ್ಗಳ ಮುಕ್ತಾಯದ ವೇಳೆಗೆ ಮುಂಬೈ 7 ವಿಕೆಟ್ ಕಳೆದುಕೊಂಡು 137 ರನ್ ಕಲೆಹಾಕಿದೆ.
ಹರ್ಯಾಣ ಪ್ಲೇಯಿಂಗ್ 11: ಲಕ್ಷ್ಯ ದಲಾಲ್ , ಯಶ್ ವರ್ಧನ್ ದಲಾಲ್ , ಅಂಕಿತ್ ಕುಮಾರ್ (ನಾಯಕ) , ಹಿಮಾಂಶು ರಾಣಾ , ನಿಶಾಂತ್ ಸಿಂಧು , ರೋಹಿತ್ ಪರ್ಮೋದ್ ಶರ್ಮಾ ( ವಿಕೆಟ್ ಕೀಪರ್ ) , ಜಯಂತ್ ಯಾದವ್ , ಸುಮಿತ್ ಕುಮಾರ್ , ಅನ್ಶುಲ್ ಕಾಂಬೋಜ್ , ಅನುಜ್ ಥಕ್ರಾಲ್ , ಅಜಿತ್ ಚಹಲ್.
ಇದನ್ನೂ ಓದಿ: ಭಾರತದಲ್ಲಿ ಇತಿಹಾಸ ನಿರ್ಮಿಸಿದ ಜೇಕಬ್ ಬೆಥೆಲ್
ಮುಂಬೈ ಪ್ಲೇಯಿಂಗ್ 11: ಆಯುಷ್ ಮ್ಹಾತ್ರೆ , ಆಕಾಶ್ ಆನಂದ್ ( ವಿಕೆಟ್ ಕೀಪರ್ ) , ಸಿದ್ಧೇಶ್ ಲಾಡ್ , ಅಜಿಂಕ್ಯ ರಹಾನೆ ( ನಾಯಕ ) , ಸೂರ್ಯಕುಮಾರ್ ಯಾದವ್ , ಶಿವಂ ದುಬೆ , ಶಮ್ಸ್ ಮುಲಾನಿ , ಶಾರ್ದೂಲ್ ಠಾಕೂರ್ , ತನುಷ್ ಕೋಟ್ಯಾನ್ , ಮೋಹಿತ್ ಅವಸ್ತಿ , ರಾಯ್ಸ್ಟನ್ ಡಯಾಸ್.