ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಮುಕ್ತಾಯದ ಬೆನ್ನಲ್ಲೇ ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಅಲೆಕ್ಸ್ ಹೇಲ್ಸ್ ಪಾಕಿಸ್ತಾನ ಸೂಪರ್ ಲೀಗ್‌ನಿಂದ ಹಿಂದೆ ಸರಿದಿದ್ದಾರೆ . ಇಸ್ಲಾಮಾಬಾದ್ ಯುನೈಟೆಡ್ ತಂಡದ ಭಾಗವಾಗಿದ್ದ ಹೇಲ್ಸ್ ವೈಯಕ್ತಿಕ ಕಾರಣ ನೀಡಿ ಟೂರ್ನಿಯಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದಾರೆ. ವಿಶೇಷ ಎಂದರೆ ಅಲೆಕ್ಸ್ ಹೇಲ್ಸ್ ಎರಡು ದಿನಗಳ ಹಿಂದೆಯಷ್ಟೇ ಅಂದರೆ ಫೆಬ್ರವರಿ 13 ರಂದು ಐಪಿಎಲ್‌ನಲ್ಲಿ ಅವಕಾಶ ಪಡೆದಿದ್ದರು . ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ , ಕೋಲ್ಕತ್ತಾ ನೈಟ್ ರೈಡರ್ಸ್ ಅವರನ್ನು ಒಂದೂವರೆ ಕೋಟಿ ರೂ.ಗೆ ಖರೀದಿಸಿದೆ. ಇತ್ತ ಐಪಿಎಲ್ ಗುತ್ತಿಗೆ ಪಡೆಯುತ್ತಿದ್ದಂತೆ ಅಲೆಕ್ಸ್ ಹೇಲ್ಸ್ ಪಾಕಿಸ್ತಾನ್ ಸೂಪರ್ ಲೀಗ್‌ಗೆ ವಿದಾಯ ಹೇಳಿದ್ದಾರೆ.
‘ಆರಂಭಿಕ ಬ್ಯಾಟ್ಸ್‌ಮನ್ ಅಲೆಕ್ಸ್ ಹೇಲ್ಸ್ ವೈಯಕ್ತಿಕ ಕಾರಣಗಳಿಂದ ಪಾಕಿಸ್ತಾನ ಸೂಪರ್ ಲೀಗ್‌ನಿಂದ ಹಿಂದೆ ಸರಿದಿದ್ದಾರೆ. ಅವರ ಭವಿಷ್ಯಕ್ಕಾಗಿ ನಾವು ಶುಭ ಹಾರೈಸುತ್ತೇವೆ ಎಂದು ಇಸ್ಲಾಮಾಬಾದ್ ಯುನೈಟೆಡ್ ಫ್ರಾಂಚೈಸಿ ತಿಳಿಸಿದೆ. ಮತ್ತೊಂದೆಡೆ, ಬಬಲ್ ಫ್ಯಾಟಿಂಗ್‌ನಿಂದಾಗಿ ಹೇಲ್ಸ್ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂದು ಪಾಕಿಸ್ತಾನದ ಸುದ್ದಿ ಚಾನೆಲ್ ಜಿಯೋ ನ್ಯೂಸ್ ಉಲ್ಲೇಖಿಸಿದೆ. ಇದಕ್ಕೂ ಮುನ್ನ ಇಂಗ್ಲೆಂಡ್‌ನ ಬೆನ್ ಡಕೆಟ್ ಕೂಡ ಪಿಎಸ್‌ಎಲ್ ತೊರೆದಿದ್ದರು. ಬಯೋಬಬಲ್ ಆಯಾಸದಿಂದ ಅವರೂ ಟೂರ್ನಿಯಿಂದ ಹೊರನಡೆದಿದ್ದರು.
ಅಲೆಕ್ಸ್ ಹೇಲ್ಸ್ ನಿರ್ಗಮನವು ಇಸ್ಲಾಮಾಬಾದ್ ಯುನೈಟೆಡ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಏಕೆಂದರೆ ಈ ತಂಡವು ಹೇಲ್ಸ್ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಅಲೆಕ್ಸ್ ಹೇಲ್ಸ್ ಈ ಸೀಸನ್ನಲ್ಲಿ ಇಸ್ಲಾಮಾಬಾದ್ ಪರವಾಗಿ ಏಳು ಪಂದ್ಯಗಳಲ್ಲಿ 255 ರನ್ ಗಳಿಸಿದರು. ಈ ಅವಧಿಯಲ್ಲಿ ಅವರು ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ. 33ರ ಹರೆಯದ ಈ ಆಂಗ್ಲ ಆಟಗಾರ ಕಳೆದ ಕೆಲ ವರ್ಷಗಳಿಂದ ಟಿ20 ಕ್ರಿಕೆಟ್ ನಲ್ಲಿ ಸಾಕಷ್ಟು ಸದ್ದು ಮಾಡಿದ್ದಾರೆ. 2019 ರ ವಿಶ್ವಕಪ್‌ಗೆ ಮುನ್ನ ಅವರನ್ನು ಇಂಗ್ಲೆಂಡ್ ಕ್ರಿಕೆಟ್ ತಂಡದಿಂದ ಕೈಬಿಡಲಾಯಿತು. ಆ ಬಳಿಕ ರಾಷ್ಟ್ರೀಯ ತಂಡಕ್ಕೆ ಕಂಬ್ಯಾಕ್ ಮಾಡಲಾಗಲಿಲ್ಲ. ಇದಾಗ್ಯೂ ಅಲೆಕ್ಸ್ ಹೇಲ್ಸ್ ಬಿಗ್ ಬ್ಯಾಷ್ ಲೀಗ್, ಸಿಪಿಎಲ್ ಸೇರಿದಂತೆ ಹಲವು ವಿಭಿನ್ನ ಟಿ20 ತಂಡಗಳಲ್ಲಿ ಅದ್ಭುತ ಪ್ರದರ್ಶನ ಮುಂದುವೆರೆಸಿದ್ದರು.
ಈ ಬಾರಿಯ ಐಪಿಎಲ್‌ನಲ್ಲಿ ಅಲೆಕ್ಸ್ ಹೇಲ್ಸ್ 1.5 ಕೋಟಿ ರೂ ಮೂಲ ಬೆಲೆಯೊಂದಿಗೆ ಕೆಕೆಆರ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಹೇಲ್ಸ್ ಇಲ್ಲಿಯವರೆಗೆ 334 T20 ಪಂದ್ಯಗಳನ್ನು ಆಡಿದ್ದು, ಈ ವೇಳೆ ಐದು ಶತಕ ಮತ್ತು 57 ಅರ್ಧಶತಕಗಳು ಒಳಗೊಂಡಂತೆ 9371 ರನ್ ಗಳಿಸಿದ್ದಾರೆ.
ಇದನ್ನೂ ಓದಿ: IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?
ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..!
(Alex hales withdraws from Pakistan super league 2 day after getting contract in IPL 2022 Auction)