ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜೇಂಟ್ಸ್ (RCB vs LSG) ನಡುವಣ ಪಂದ್ಯ ಕೊನೆಯ ಓವರ್ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಅಂತಿಮವಾಗಿ ಕೊನೆಯ ಎಸೆತದಲ್ಲಿ ಒಂದು ರನ್ ಕಲೆಹಾಕುವ ಮೂಲಕ ಎಲ್ಎಸ್ಜಿ 1 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಈ ಮೂಲಕ ಕೆಎಲ್ ರಾಹುಲ್ ಪಡೆ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿದೆ. ಆರ್ಸಿಬಿ ಏಳನೇ ಸ್ಥಾನದಲ್ಲಿದೆ. ಆರ್ಸಿಬಿ- ಎಲ್ಎಸ್ಜಿ ನಡುವಣ ಪಂದ್ಯ ಕೆಲ ಕುತೂಹಲಕಾರಿ ಘಟನೆಗೂ ಸಾಕ್ಷಿಯಾಯಿತು. ಕೊಹ್ಲಿ (Virat Kohli), ಡುಪ್ಲೆಸಿಸ್, ಮ್ಯಾಕ್ಸ್ವೆಲ್, ಸ್ಟಾಯಿನಿಸ್, ಪೂರನ್ ಫೋರ್-ಸಿಕ್ಸರ್ಗಳ ಮಳೆ ಸುರಿಸಿದರು. ಇದರ ನಡುವೆ ಈ ಪಂದ್ಯದಲ್ಲಿ ಅಮಿತ್ ಮಿಶ್ರಾ (Amit Mishra) ಮಾಡಿದ ಎಡವಟ್ಟು ವಿವಾದಕ್ಕೆ ಕಾರಣವಾಗಿದೆ.
ಲಖನೌ ಸೂಪರ್ ಜೇಂಟ್ಸ್ ತಂಡದ ಹಿರಿಯ ಸ್ಪಿನ್ನರ್ ಅಮಿತ್ ಮಿಶ್ರಾ ಅನಗತ್ಯವಾಗಿ ವಿವಾದವೊಂದನ್ನು ತಮ್ಮ ಮೈಮೇಲೆ ಹಾಕಿಕೊಂಡಿದ್ದಾರೆ. ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಮಿಶ್ರಾ ಚೆಂಡಿನ ಹೊಳಪು ನಿರ್ವಹಿಸಲು ಎಂಜಲು ಬಳಸಿದ್ದಾರೆ. ಇದು ಐಸಿಸಿ ನಿಯಮದ ವಿರುದ್ಧವಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕಳೆದ ವರ್ಷ ಅಕ್ಟೋಬರ್ನಲ್ಲಿ ಕ್ರಿಕೆಟ್ ಪಂದ್ಯಗಳಲ್ಲಿ ಚೆಂಡಿನ ಹೊಳಪು ನಿರ್ವಹಿಸಲು ಎಂಜಲು ಬಳಸುವುದನ್ನು ಶಾಶ್ವತವಾಗಿ ನಿಷೇಧಿಸಿದೆ. ಹೀಗಿದ್ದರೂ 40 ವರ್ಷದ ಅನುಭವಿ ಸ್ಪಿನ್ನರ್ ಮಿಶ್ರಾ ಚೆಂಡಿಗೆ ಎಂಜಲು ಬಳಸಿ ನಿಯಮದ ವಿರುದ್ಧ ಹೋಗಿದ್ದಾರೆ.
Nicholas Pooran: ದಾಖಲೆಯ ಬ್ಯಾಟಿಂಗ್ ಮೂಲಕ RCB ಯ ಗೆಲುವು ಕಸಿದ ನಿಕೋಲಸ್ ಪೂರನ್
ಆರ್ಸಿಬಿ ಬ್ಯಾಟಿಂಗ್ ಇನ್ನಿಂಗ್ಸ್ನ 12ನೇ ಓವರ್ನಲ್ಲಿ ಈ ಘಟನೆ ನಡೆದಿದೆ. ನಾಯಕ ಕೆಎಲ್ ರಾಹುಲ್ ಮೊದಲ ಬಾರಿ ಬೌಲಿಂಗ್ ಮಾಡಲು ಅವಕಾಶ ನೀಡಿದಾಗ ಮಿಶ್ರಾ ಅವರು ಮೊದಲ ಎಸೆತ ಹಾಕುವ ಮುನ್ನ ಚೆಂಡಿಗೆ ಎಂಜಲು ಬಳಸಿದ್ದಾರೆ. ಇದು ಕ್ಯಾಮೆರಾ ಕಣ್ಣಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ತನ್ನ ಮೊದಲ ಎರಡು ಎಸೆತಗಳಲ್ಲಿ ತಲಾ ಒಂದೊಂದು ರನ್ ನೀಡಿದ ಇವರು ಮೂರನೇ ಎಸೆತದಲ್ಲಿ 61 ರನ್ ಗಳಿಸಿದ್ದ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದರು.
Is saliva allowed in ipl?? #iplinhindi #IPL2023 #ipl #rcb #JioCinema pic.twitter.com/Uh7hiR7D2G
— ROHIT RAJ (@RohitRajSinhaa) April 10, 2023
ಅಮಿತ್ ಮಿಶ್ರಾ ಈರೀತಿಯ ತಪ್ಪುಗಳನ್ನು ಎಸಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಐಪಿಎಲ್ 2021 ರಲ್ಲಿ ಕೂಡ ಕೋವಿಡ್ ನಿಯಮವಿದ್ದಾಗ ಚೆಂಡಿಗೆ ಎಂಜಲು ಬಳಸುವುದು ನಿಷೇಧವಾಗಿತ್ತು. ಆಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿದ್ದ ಮಿಶ್ರಾ ಅಲ್ಲೂ ಮೊದಲ ಎಸೆತ ಹಾಕುವ ಮುನ್ನ ಚೆಂಡಿಗೆ ಎಂಜಲು ಬಳಸಿದ್ದರು. ಈ ಸಂದರ್ಭ ಆನ್-ಫೀಲ್ಡ್ ಅಂಪೈರ್ ಮೊದಲ ಎಚ್ಚರಿಕೆ ನೀಡಿದ್ದರು. ಇದೀಗ ಆರ್ಸಿಬಿ-ಲಖನೌ ಪಂದ್ಯದಲ್ಲಿ ಕೂಡ ನಿಯಮದ ವಿರುದ್ಧ ನಡೆದುಕೊಂಡಿದ್ದಾರೆ. ಇದರಿಂದ ಪಂದ್ಯದ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ನಿಯಮವನ್ನು ಮೀರಿದ್ದಕ್ಕಾಗಿ ಮಿಶ್ರಾ ಅವರಿಗೆ ದಂಡ ವಿಧಿಸುವ ಸಾಧ್ಯತೆ ಇದೆ.
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ (61), ಫಾಫ್ ಡುಪ್ಲೆಸಿಸ್ (79*) ಮತ್ತು ಗ್ಲೆನ್ ಮ್ಯಾಕ್ಸ್ವೆಲ್ (59) ಭರ್ಜರಿ ಅರ್ಧಶತಕ ಸಿಡಿಸಿದರು. ಇವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಬೆಂಗಳೂರು 20 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಗುರಿ ಬೆನ್ನತ್ತಿದ ಲಖನೌ ತಂಡಕ್ಕೆ ಆರ್ಸಿಬಿ ಬೌಲರ್ಗಳು ಆರಂಭದಲ್ಲಿ ಕಾಡಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೊಯಿನಿಸ್ (30 ಎಸೆತಗಳಲ್ಲಿ 65 ರನ್) ಮತ್ತು ನಿಕೋಲಾಸ್ ಪೂರನ್ (19 ಎಸೆತಗಳಲ್ಲಿ 62 ರನ್) ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೊನೆಯ ಎಸೆತದಲ್ಲಿ ಎಲ್ಎಸ್ಜಿ ಗೆಲುವಿಗೆ 1 ರನ್ ಬೇಕಾಗುತ್ತು. ಆರ್ಸಿಬಿ ಮಾಡಿದ ಕೆಲ ಎಡವಟ್ಟಿನಿಂದ ಲಖನೌ ಬೈಸ್ ಮೂಲಕ ಒಂದು ರನ್ ಕಲೆಹಾಕಿ ಗೆಲುವು ಕಂಡಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:40 am, Tue, 11 April 23