
ಭಾರತದ ಮಾಜಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ 2025 ರಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದರು. ಆದಾಗ್ಯೂ ಅಮಿತ್ ಮಿಶ್ರಾ ಅವರ ವೃತ್ತಿಜೀವನದ ಅಂತ್ಯ ಅವರು ಅಂದುಕೊಂಡಂತೆ ಆಗಲಿಲ್ಲ. 2017ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಕೊನೆಯ ಬಾರಿಗೆ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದ ಮಿಶ್ರಾಗೆ ಆ ಬಳಿಕ ತಂಡದಲ್ಲಿ ಆಡುವ ಅವಕಾಶವೇ ಸಿಗಲಿಲ್ಲ. ಆದಾಗ್ಯೂ ತನ್ನ ಪ್ರಯತ್ನ ಬಿಡದ ಮಿಶ್ರಾ ತಂಡಕ್ಕೆ ಮರಳಲು ನಾನಾ ಪ್ರಯತ್ನ ಪಟ್ಟರೂ ಅವರ ಆಸೆ ಈಡೇರಲಿಲ್ಲ. ಇದೀಗ ತಮ್ಮ ವೃತ್ತಿಜೀವನದ ಬಗ್ಗೆ ಮಾತನಾಡಿರುವ ಮಿಶ್ರಾ, ತಾನು ಆ ಪಂದ್ಯದಲ್ಲಿ ಗಾಯಗೊಂಡಿರದಿದ್ದರೆ ತಾವು ಇನ್ನಷ್ಟು ದಿನ ಭಾರತ ತಂಡದ ಪರ ಆಡಬಹುದಿತ್ತು ಎಂಬ ಅಭಿಪ್ರಾಯವನ್ನು ಮಿಶ್ರಾ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲ, ಅಂದು ಭಾರತ ತಂಡದ ಮುಖ್ಯ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ಇಬ್ಬರೂ ತಾವು ಸಂಪೂರ್ಣ ಫಿಟ್ ಆದ ಬಳಿಕ ಮತ್ತೆ ತಂಡಕ್ಕೆ ಆಯ್ಕೆ ಮಾಡುವ ಭರವಸೆ ನೀಡಿದ್ದರು. ಆದರೆ, ಗಾಯದಿಂದ ಚೇತರಿಸಿಕೊಂಡು ಫಿಟ್ ಆದ ಬಳಿಕ ಕೊಹ್ಲಿ ತಮ್ಮ ಕರೆ ಮತ್ತು ಮೆಸೇಜ್ಗಳಿಗೆ ಪ್ರತಿಕ್ರಿಯೆಯನ್ನೇ ನೀಡಲಿಲ್ಲ ಎಂದು ಅಮಿತ್ ಮಿಶ್ರಾ ಆರೋಪಿಸಿದ್ದಾರೆ.
ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ನಡೆಸಿಕೊಡುವ ‘ಬೈಠ್ ಆ್ಯಂಡ್ ಬೋಲ್’ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಅಮಿತ್ ಮಿಶ್ರಾ ಈ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದೇ ತಮ್ಮ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು ಎಂದಿರುವ ಅವರು, ‘ಆ ಸಮಯದಲ್ಲಿ ಬೆಂಗಳೂರಿನಲ್ಲಿ ನನ್ನ ಕಾಲಿಗೆ ಗಾಯವಾಗಿತ್ತು. ಆಗ ಅನಿಲ್ ಕುಂಬ್ಳೆ ಭಾರತ ತಂಡದ ಕೋಚ್ ಆಗಿದ್ದರು. ಗಾಯಗೊಂಡು ಹೊರಡುವಾಗ ನಾನು ಅನಿಲ್ ಭಾಯ್ ಅವರ ಬಳಿ ಮಾತನಾಡಿದೆ. ಆಗ ಅವರು, ‘ಚಿಂತಿಸಬೇಡ. ನೀನು ಫಿಟ್ ಆದ ತಕ್ಷಣ ಮತ್ತೆ ತಂಡಕ್ಕೆ ಮರಳುತ್ತೀಯ’ ಎಂದು ಭರವಸೆ ನೀಡಿದ್ದರು.
ಇತ್ತ ಆ ಸಮಯದಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿದ್ದರು. ಹೀಗಾಗಿ ನಾನು ಅವರ ಬಳಿಯೂ ಹೋಗಿ, ‘ಅಣ್ಣಾ, ಈಗ ಏನು ಮಾಡಬೇಕು?’ ಎಂದು ಕೇಳಿದೆ. ಅದಕ್ಕೆ ಅವರು, ‘ನೀನು ಚಿಂತಿಸಬೇಡ. ಸಂಪೂರ್ಣ ಫಿಟ್ ಆಗಿ, ಆರಾಮವಾಗಿರು. ಆಮೇಲೆ ನೀನು ತಂಡದಲ್ಲಿರುತ್ತೀಯ’ ಎಂದು ಹೇಳಿದ್ದರು, ಎಂದು ಮಿಶ್ರಾ ನೆನಪಿಸಿಕೊಂಡಿದ್ದಾರೆ.
ಗಾಯದಿಂದ ಸಂಪೂರ್ಣ ಚೇತರಿಸಿಕೊಂಡ ಬಳಿಕ ಅಮಿತ್ ಮಿಶ್ರಾ ಅವರು ವಿರಾಟ್ ಕೊಹ್ಲಿಯನ್ನು ಸಂಪರ್ಕಿಸಿ, ಮತ್ತೆ ಭಾರತ ತಂಡಕ್ಕೆ ಮರಳುವ ಅವಕಾಶದ ಬಗ್ಗೆ ವಿಚಾರಿಸಿದ್ದರು. ಆಗ ಒಂದು ವಾರದಿಂದ ಹತ್ತು ದಿನಗಳ ಒಳಗೆ ಮಾಹಿತಿ ನೀಡುವುದಾಗಿ ಕೊಹ್ಲಿ ಹೇಳಿದ್ದರಂತೆ. ಆದರೆ, ವಾರಗಳು ಕಳೆದರೂ ಯಾವುದೇ ಉತ್ತರ ಸಿಗಲಿಲ್ಲ ಎಂದು ಮಿಶ್ರಾ ಆರೋಪಿಸಿದ್ದಾರೆ.
‘ನಾನು ಮತ್ತೆ ಅವರ ಬಳಿ ಹೋಗಿ, ‘ಅಣ್ಣಾ, ಈಗ ಪರಿಸ್ಥಿತಿ ಏನು?’ ಎಂದು ಕೇಳಿದೆ. ಅದಕ್ಕೆ ಅವರು, ‘ಒಂದು ವಾರದಿಂದ ಹತ್ತು ದಿನಗಳ ಒಳಗೆ ತಿಳಿಸುತ್ತೇನೆ’ ಎಂದರು. ಆದರೆ, ಒಂದು ವಾರ ಕಳೆಯಿತು, ಎರಡು ವಾರ ಕಳೆಯಿತು, ಮೂರು ವಾರಗಳೂ ಕಳೆದವು. ಅವರಿಂದ ಯಾವುದೇ ಮಾಹಿತಿ ಬರಲಿಲ್ಲ. ನಾನು ಅವರಿಗೆ ಕರೆ ಮಾಡಿದೆ. ಆದರೆ, ಅವರು ಕರೆ ಸ್ವೀಕರಿಸಲಿಲ್ಲ. ಮೆಸೇಜ್ ಕಳುಹಿಸಿದೆ, ಅದಕ್ಕೂ ಉತ್ತರ ಬರಲಿಲ್ಲ, ಎಂದು ಮಿಶ್ರಾ ಬೇಸರ ವ್ಯಕ್ತಪಡಿಸಿದ್ದಾರೆ.
‘ಅಹಂಕಾರಿ ಮತ್ತು ಗರ್ವಿಷ್ಠ’; ಕೊಹ್ಲಿಯ ಬಗ್ಗೆ ಡಿವಿಲಿಯರ್ಸ್ ಅಚ್ಚರಿಯ ಹೇಳಿಕೆ..!
ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ, ಕೊನೆಗೆ ನಾನೇ ಸುಮ್ಮನಾದೆ ಎಂದು ಮಿಶ್ರಾ ಹೇಳಿದ್ದಾರೆ. ‘ತಮಗಿಂತಲೂ ಗಂಭೀರವಾಗಿ ಗಾಯಗೊಂಡು, ದೀರ್ಘಕಾಲ ತಂಡದಿಂದ ಹೊರಗುಳಿದಿದ್ದ ಆಟಗಾರರು ಫಿಟ್ ಆದ ಬಳಿಕ ಮತ್ತೆ ತಂಡಕ್ಕೆ ಮರಳಿದ್ದರು. ಆದರೆ, ನನ್ನ ವಿಚಾರದಲ್ಲಿ ಮಾತ್ರ ಹಾಗಾಗಲಿಲ್ಲ. ನಾನು ಮತ್ತೆ ಕರೆ ಮಾಡಿದೆ. ಆಗಲೂ ಅವರು ಉತ್ತರಿಸಲಿಲ್ಲ. ಇನ್ನೂ ಎರಡು ಬಾರಿ ಕರೆ ಮಾಡಿದೆ. ಆದರೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಕೊನೆಗೆ ನಾನೇ ಸುಮ್ಮನಾದೆ. ‘ನಮ್ಮನ್ನು ತಂಡದಲ್ಲಿ ಉಳಿಸಿಕೊಳ್ಳಲು ಯಾರಿಗಾದರೂ ಇಷ್ಟವಿಲ್ಲದಿದ್ದರೆ ನಾವೇನು ಮಾಡಲು ಸಾಧ್ಯ?’ ಎಂದುಕೊಂಡೆ, ಎಂದು ಮಿಶ್ರಾ ಹೇಳಿದ್ದಾರೆ.
‘ನನಗಿಂತ ಹೆಚ್ಚು ಗಂಭೀರವಾಗಿ ಗಾಯಗೊಂಡಿದ್ದ ಮತ್ತು ಹೆಚ್ಚು ಸಮಯ ತಂಡದಿಂದ ಹೊರಗಿದ್ದ ಆಟಗಾರರು ಚೇತರಿಸಿಕೊಂಡ ಬಳಿಕ ಮತ್ತೆ ತಂಡಕ್ಕೆ ಮರಳಿದರು. ಆದರೆ, ನನಗೆ ಮಾತ್ರ ಇಂದಿಗೂ ಯಾವುದೇ ಉತ್ತರ ಸಿಕ್ಕಿಲ್ಲ’ ಎಂದು ಅಮಿತ್ ಮಿಶ್ರಾ ಪಾಡ್ಕಾಸ್ಟ್ನಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
Published On - 3:35 pm, Fri, 23 October 26