‘ಅಹಂಕಾರಿ ಮತ್ತು ಗರ್ವಿಷ್ಠ’; ಕೊಹ್ಲಿಯ ಬಗ್ಗೆ ಡಿವಿಲಿಯರ್ಸ್ ಅಚ್ಚರಿಯ ಹೇಳಿಕೆ..!
ಎಬಿ ಡಿವಿಲಿಯರ್ಸ್ ಇತ್ತೀಚೆಗೆ ವಿರಾಟ್ ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಕೊಹ್ಲಿ ಆರಂಭಿಕ ದಿನಗಳಲ್ಲಿ 'ದುರಹಂಕಾರಿ' ಮತ್ತು 'ಗರ್ವಿಷ್ಠ'ರಂತೆ ಕಾಣುತ್ತಿದ್ದರು ಎಂದು ಎಬಿಡಿ ತಿಳಿಸಿದ್ದಾರೆ. ಆದರೆ, ಅದು ಅವರ ಅಪಾರ ಆತ್ಮವಿಶ್ವಾಸವೇ ಹೊರತು ದುರಹಂಕಾರವಲ್ಲ ಎಂದಿದ್ದಾರೆ. ಕಾಲಾನಂತರದಲ್ಲಿ ಕೊಹ್ಲಿ ಯಶಸ್ಸು ಗಳಿಸುತ್ತಿದ್ದಂತೆ ಅವರ ಈ ಭಾವವೂ ಬದಲಾಯಿತು ಎಂದು ಡಿವಿಲಿಯರ್ಸ್ ವಿವರಿಸಿದ್ದಾರೆ.

ಕ್ರಿಕೆಟ್ ಲೋಕದ ಇಬ್ಬರು ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಎಂತಹ ಸ್ನೇಹಿತರು ಎಂಬುದು ಎಲ್ಲರಿಗೂ ತಿಳಿದಿರುವಂತ್ತದ್ದೆ. ಐಪಿಎಲ್ನಲ್ಲಿ ವರ್ಷಗಳ ಕಾಲ ಜೊತೆಯಲ್ಲಿ ಆಡಿದ್ದ ಇವರಿಬ್ಬರು ಕ್ರಿಕೆಟ್ ಅಂಗಳದಲ್ಲಿ ಮಾತ್ರವಲ್ಲದೆ ಕ್ರಿಕೆಟ್ ಹೊರತಾಗಿಯೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಂದರ್ಶನಗಳಲ್ಲಿ ಹಾಗೂ ಪಾಡ್ಕ್ಯಾಸ್ಟ್ಗಳಲ್ಲಿ ಒಬ್ಬರಿಗೊಬ್ಬರು ಮೆಚ್ಚುಗೆಯ ಮಾತುಗಳನ್ನೇ ಆಡುತ್ತಿರುತ್ತಾರೆ. ಹೀಗಿರುವಾಗ ಡಿವಿಲಿಯರ್ಸ್, ಕೊಹ್ಲಿಯ ಬಗ್ಗೆ ನೀಡಿರುವ ಅದೊಂದು ಹೇಳಿಕೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಪ್ರಖರ್ ಗುಪ್ತಾ ಅವರೊಂದಿಗಿನ ಪಾಡ್ಕ್ಯಾಸ್ಟ್ನಲ್ಲಿ ಮಾತನಾಡಿರುವ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಆರಂಭದ ದಿನಗಳಲ್ಲಿ ಅಹಂಕಾರಿ ಮತ್ತು ಗರ್ವಿಷ್ಠರಂತೆ ಕಾಣುತ್ತಿದ್ದರು ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಕೊಹ್ಲಿ ಬಗ್ಗೆ ಡಿವಿಲಿಯರ್ಸ್ ಅಭಿಪ್ರಾಯ
ಪ್ರಖರ್ ಗುಪ್ತಾ ಅವರೊಂದಿಗಿನ ಪಾಡ್ಕ್ಯಾಸ್ಟ್ನಲ್ಲಿ ಭಾಗವಹಿಸಿದ್ದ ಡಿವಿಲಿಯರ್ಸ್ ಬಳಿ, ‘ವಿರಾಟ್ ಕೊಹ್ಲಿ ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ ಅವರ ಬಗ್ಗೆ ತಮಗಿದ್ದ ಅಭಿಪ್ರಾಯವೇನು?. ಕೊಹ್ಲಿ ನಿಜವಾಗಿಯೂ ‘ಅಹಂಕಾರಿ ಮತ್ತು ಅತಿಯಾದ ಆತ್ಮವಿಶ್ವಾಸವುಳ್ಳವರು’ (arrogant and cocky) ಎಂದು ನಿಮಗೆ ಅನ್ನಿಸಿತ್ತೇ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಡಿವಿಲಿಯರ್ಸ್, ‘ ಹೌದು, ಮತ್ತು ಅವರು ಕೂಡ ಇದಕ್ಕೆ ಸಂಪೂರ್ಣವಾಗಿ ಒಪ್ಪುತ್ತಾರೆ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದರು.
ಕೊಹ್ಲಿಯನ್ನು ದುರಹಂಕಾರಿ ಎಂದು ಏಕೆ ಭಾವಿಸುತ್ತೀರಿ ಎಂದು ಡಿವಿಲಿಯರ್ಸ್ ಅವರನ್ನು ಕೇಳಿದಾಗ, ‘ಕೊಹ್ಲಿ ಅವರಲ್ಲಿದ್ದ ಅಪಾರ ಆತ್ಮವಿಶ್ವಾಸವೇ ಆ ‘ಅಹಂಕಾರ’ದಂತೆ ಕಾಣಲು ಕಾರಣವಾಯಿತು ಎಂದು ಡಿವಿಲಿಯರ್ಸ್ ಹೇಳಿದರು.
Prakhar : “When you first met Virat Kohli, you thought he was cocky and arrogant. Is that true?”
AB de Villiers: “Yes. I think he’ll agree with that.”
“He came across as overly confident. He had a lot to prove when he was younger.”
“You need that kind of confidence and self-belief to achieve great success.”
— The Prakhar Gupta Xperience (@pgxpodcast) October 16, 2026
ನನ್ನ ಮೊದಲ ಅನಿಸಿಕೆ ಅದೇ ಆಗಿತ್ತು
‘ಅವರಲ್ಲಿ ಅತಿಯಾದ ಆತ್ಮವಿಶ್ವಾಸವಿತ್ತು ಮತ್ತು ಅವರು ಯಾವಾಗಲೂ ಇದೇ ಶೈಲಿಯಲ್ಲಿ ಕ್ರಿಕೆಟ್ ಆಡುತ್ತಿದ್ದರು. ಅವರ ಈ ಮನೋಭಾವವನ್ನು ಹಲವು ಬಾರಿ ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ. ನನ್ನ ವಿಷಯದಲ್ಲೂ ಅದೇ ಸಂಭವಿಸಿದೆ. ಅವರು ಅತಿಯಾದ ಆತ್ಮವಿಶ್ವಾಸದಿಂದ ಕಾಣುತ್ತಿದ್ದರು. ಹೀಗಾಗಿ ಕೊಹ್ಲಿ ಬಗ್ಗೆ ನನ್ನ ಮೊದಲ ಅನಿಸಿಕೆ ಅದೇ ಆಗಿತ್ತು. ನಾನು ಇದನ್ನು ತಮಾಷೆಯಾಗಿ ಹೇಳಿದರೂ, ಅವರು ಇದನ್ನು ಒಪ್ಪುತ್ತಾರೆ ಎಂದು ನಾನು ಭಾವಿಸುತ್ತೇನೆ. 19, 20 ಮತ್ತು 21 ನೇ ವಯಸ್ಸಿನಲ್ಲಿ, ಅವರು ತುಂಬಾ ಆತ್ಮವಿಶ್ವಾಸದ ಯುವ ಆಟಗಾರರಾಗಿದ್ದರು. ಅದು ಅವರ ಆರಂಭಿಕ ದಿನಗಳು. ಉತ್ತಮ ಯಶಸ್ಸನ್ನು ಸಾಧಿಸಲು ಈ ರೀತಿಯ ಆತ್ಮವಿಶ್ವಾಸ ಅತ್ಯಗತ್ಯ. ನಿಮ್ಮ ಸಾಮರ್ಥ್ಯಗಳಲ್ಲಿ ನೀವು ಸಂಪೂರ್ಣ ನಂಬಿಕೆಯನ್ನು ಹೊಂದಿರಬೇಕು. ಕಾಲಾನಂತರದಲ್ಲಿ, ನೀವು ಅದನ್ನು ನಿಭಾಯಿಸಲು ಕಲಿಯುತ್ತೀರಿ.
‘ಆಶ್ರಮಕ್ಕೆ ಭೇಟಿ ನೀಡಲು 5 ಕೋಟಿ ಪಡೆದಿದ್ದಾರೆ’; ಕೊಹ್ಲಿ ಮೇಲೆ ಗಂಭೀರ ಆರೋಪ
ಕೊಹ್ಲಿ ಯಶಸ್ಸಿನ ಮೆಟ್ಟಿಲು ಹತ್ತುತ್ತಿದ್ದಂತೆ ಅವರ ಸ್ವಭಾವ ಬದಲಾಯಿತು ಮತ್ತು ಅವರ ದುರಹಂಕಾರ ಮಾಯವಾಯಿತು. ಅವರ ಯೌವನದ ದಿನಗಳಲ್ಲಿ ಅವರು ತಮ್ಮನ್ನು ತಾವು ಸಾಬೀತುಪಡಿಸುವ ಬಯಕೆಯನ್ನು ಹೊಂದಿದ್ದರು ಎಂದು ನಾನು ಭಾವಿಸುತ್ತೇನೆ, ಆದರೆ ಕಾಲಾನಂತರದಲ್ಲಿ ಈ ಭಾವನೆ ಕಡಿಮೆಯಾಯಿತು. ಅವರ ಅತಿಯಾದ ಆತ್ಮವಿಶ್ವಾಸವೂ ಬದಲಾಯಿತು’ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:55 pm, Sat, 17 October 26




