
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ (Sanjay Bangar) ಪ್ರಸ್ತುತ ಐಪಿಎಲ್‌ನಲ್ಲಿ (IPL) ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಏತನ್ಮಧ್ಯೆ ಅವರ ಮಗಳು ಅನನ್ಯಾ ಬಂಗಾರ್ (Ananya Bangar) ಖಾಸಗಿ ಮಾಧ್ಯಮಕ್ಕೆ ನೀಡಿರುವ ಸಂದರ್ಶನವೊಂದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಇದರಲ್ಲಿ ಅವರು ಕೆಲವು ಕ್ರಿಕೆಟಿಗರ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ವಾಸ್ತವವಾಗಿ ಸಂಜಯ್ ಬಂಗಾರ್ ಅವರ ಮಗಳು ಅನನ್ಯಾ ಬಂಗಾರ್ ಈ ಮೊದಲು ಹುಡುಗನಾಗಿದ್ದರು. ಆದರೀಗ ಅವರು ಹುಡುಗನಿಂದ ಹುಡುಗಿಯಾಗಿ ಬದಲಾಗಿದ್ದಾರೆ.
ದೀರ್ಘಕಾಲ ಲಂಡನ್‌ನಲ್ಲಿ ವಾಸ್ತವ್ಯ ಹೂಡಿದ್ದ ಅನನ್ಯಾ ಬಂಗಾರ್ ಈಗ ಭಾರತಕ್ಕೆ ಮರಳಿದ್ದಾರೆ. ಅವರು ಇಲ್ಲಿಗೆ ಬಂದ ತಕ್ಷಣ, ಸಂದರ್ಶನವೊಂದರಲ್ಲಿ ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಅನನ್ಯಾ ಬಂಗಾರ್ ಹೇಳುವಂತೆ, ಭಾರತದ ಒಬ್ಬ ಸ್ಟಾರ್ ಕ್ರಿಕೆಟಿಗ ಅವರೊಂದಿಗೆ ರಿಲೇಷನ್ಶಿಪ್ನಲ್ಲಿ ಇರಲು ಆಸಕ್ತಿ ಹೊಂದಿದ್ದರಂತೆ. ಅದು ಮಾತ್ರವಲ್ಲದೆ ಕೆಲವು ಆಟಗಾರರು ಅನನ್ಯಾ ಅವರಿಗೆ ಅಶ್ಲೀಲ ಚಿತ್ರಗಳನ್ನು ಕಳುಹಿಸುತ್ತಿದ್ದರಂತೆ.
ಸಂದರ್ಶನದಲ್ಲಿ ತನಗಾದ ಮಾನಸಿಕ ವೇದನೆಯ ಬಗ್ಗೆ ಮಾತನಾಡಿರುವ ಅನನ್ಯಾ ಬಂಗಾರ್, ‘ ಕೆಲ ಕ್ರಿಕೆಟಿಗರು ತಮ್ಮ ಖಾಸಗಿ ಅಂಗಾಂಗಳ ಚಿತ್ರಗಳನ್ನು ನನಗೆ ಕಳುಹಿಸುತ್ತಿದ್ದರು. ಇನ್ನು ಕೆಲವರು, ‘ಬಾ ಕಾರಿನಲ್ಲಿ ಹೋಗೋಣ, ಸೆ** ಮಾಡೋಣ ಎಂದು ಹೇಳುತ್ತಿದ್ದರು. ಕೆಲವು ಕ್ರಿಕೆಟಿಗರು ಎಲ್ಲರ ಮುಂದೆ ನನ್ನನ್ನು ನಿಂದಿಸಿ, ಆ ನಂತರ ಫೋಟೋ ಕೇಳುತ್ತಿದ್ದರು ಎಂಬ ಆರೋಪಗಳನ್ನು ಹೊರಿಸಿದ್ದಾರೆ.
ಇದರ ಜೊತೆಗೆ ತಾನು ಲಿಂಗ ಬದಲಿಸಿಕೊಳ್ಳಲು ಏನೆಲ್ಲ ತ್ಯಾಗ ಮಾಡಬೇಕಾಯಿತು ಎಂಬುದರ ಬಗ್ಗೆ ಮಾತನಾಡಿರುವ ಅನನ್ಯಾ, ‘ನೀನು ಲಿಂಗ ಬದಲಾಯಿಸಿಕೊಳ್ಳಲು ಇಚ್ಚಿಸಿದರೆ, ನೀನು ಕ್ರಿಕೆಟ್ ಬಿಡಬೇಕಾಗುತ್ತದೆ, ಕ್ರಿಕೆಟ್‌ನಲ್ಲಿ ನಿಗೆ ಸ್ಥಾನವಿಲ್ಲ ಎಂದು ನನ್ನ ತಂದೆ ಹೇಳಿದ್ದರು. ಹಾಗೆಯೇ ನನ್ನ ತಂದೆ ಸಂಜಯ್ ಬಂಗಾರ್ ಜನಪ್ರಿಯ ವ್ಯಕ್ತಿಯಾಗಿದ್ದರಿಂದ ನಾನು ಲಿಂಗ ಬದಲಿಸಿಕೊಂಡರೆ ಜನ ನಮ್ಮ ಬಗ್ಗೆ ಏನೆಲ್ಲ ಮಾತನಾಡಿಕೊಳ್ಳುತ್ತಾರೆ ಎಂಬುದು ಒತ್ತಡವನ್ನುಂಟು ಮಾಡಿತ್ತು. ನಾನು 8-9 ವರ್ಷದವಳಿದ್ದಾಗ, ತಮ್ಮ ವಾರ್ಡ್ರೋಬ್‌ನಿಂದ ತಾಯಿಯ ಬಟ್ಟೆಗಳನ್ನು ತೆಗೆದು ಧರಿಸುತ್ತಿದೆ. ನನಗೆ ಯಾವಾಗಲೂ ನಾನು ಹುಡುಗಿ ಅಂತ ಅನಿಸುತ್ತಿತ್ತು ಎಂದಿದ್ದಾರೆ.
IPL 2025: ಬದಲಿ ಆಟಗಾರನಾಗಿ ಸಿಎಸ್ಕೆ ತಂಡ ಸೇರಿದ ಬೇಬಿ ಎಬಿ ಖ್ಯಾತಿಯ ಡೆವಾಲ್ಡ್ ಬ್ರೆವಿಸ್
ಇಂದು ಐಪಿಎಲ್‌ನಲ್ಲಿ ಸದ್ದು ಮಾಡುತ್ತಿರುವ ಅನೇಕ ಆಟಗಾರರೊಂದಿಗೆ ಕ್ರಿಕೆಟ್ ಆಡಿದ್ದೇನೆ ಎಂದು ಹೇಳಿಕೊಂಡಿರುವ ಅನನ್ಯಾ ಬಂಗಾರ್, ಮುಶೀರ್ ಖಾನ್ ಅವರೊಂದಿಗೆ 14 ವರ್ಷದೊಳಗಿನವರ ಕ್ರಿಕೆಟ್ ಆಡಿದ್ದಾರೆ. ಅಲ್ಲದೆ, ಅನನ್ಯಾ ಅವರು ಸರ್ಫರಾಜ್ ಖಾನ್ ಮತ್ತು ಯಶಸ್ವಿ ಜೈಸ್ವಾಲ್ ಅವರೊಂದಿಗೂ ವಯೋಮಾನದ ಕ್ರಿಕೆಟ್ ಆಡಿದ್ದಾರೆ.
ಟೆಸ್ಟೋಸ್ಟೆರಾನ್ ಮಟ್ಟವು ಸಾಮಾನ್ಯ ಹುಡುಗಿಯಂತೆಯೇ ಇದ್ದರೂ, ಟ್ರಾನ್ಸ್‌ಜೆಂಡರ್‌ಗಳಿಗೆ ಮಹಿಳಾ ಕ್ರಿಕೆಟ್‌ನಲ್ಲಿ ಆಡಲು ಅವಕಾಶ ನೀಡದಿರುವುದು ಬೇಸರ ತಂದಿದೆ ಎಂದಿರುವ ಅನನ್ಯಾ ಬಂಗಾರ್, ಮಹಿಳಾ ಕ್ರಿಕೆಟ್‌ನಲ್ಲಿ ಆಡಲು ಅವಕಾಶ ನೀಡಬೇಕೆಂಬ ಬೇಡಿಕೆಯನ್ನಿಟ್ಟಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:03 pm, Fri, 18 April 25