ಧೋನಿ, ಕೊಹ್ಲಿ, ರೋಹಿತ್ಗೆ ನೀಡಿದ ಗೌರವ ಮನೀಶ್ ಪಾಂಡೆಗೆ ಯಾಕಿಲ್ಲ? ಬಿಸಿಸಿಐ ತಾರತಮ್ಯ ಧೋರಣೆ
18 Years of IPL: 2008ರಿಂದ ಐಪಿಎಲ್‌ನಲ್ಲಿ ಆಡುತ್ತಿರುವ ಕೆಲವೇ ಕೆಲವು ಆಟಗಾರರಿಗೆ ಬಿಸಿಸಿಐ ವಿಶೇಷ ಸ್ಮರಣಿಕೆ ನೀಡಿ ಗೌರವಿಸುತ್ತಿದೆ. ಆ ಪ್ರಕಾರ ಧೋನಿ, ಕೊಹ್ಲಿ, ರೋಹಿತ್ ಅವರಿಗೆ ಬಿಸಿಸಿಐ ವಿಶೇಷ ಗೌರವ ಸಲ್ಲಿಸಿದೆ. ಆದರೆ ಈ ಮೂವರಂತೆ 18 ಸೀಸನ್ ಆಡಿರುವ ಕನ್ನಡಿಗ ಮನೀಶ್ ಪಾಂಡೆ ಅವರಿಗೆ ಬಿಸಿಸಿಐನಿಂದ ಈ ವಿಶೇಷ ಗೌರವ ಸಿಕ್ಕಿಲ್ಲ. ಮನೀಶ್ ಅವರನ್ನು ಕಡೆಗಣಿಸಿರುವುದು ಅಭಿಮಾನಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
Updated on:Apr 18, 2025 | 6:23 PM

2008 ರಲ್ಲಿ ಆರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ 18ನೇ ಆವೃತ್ತಿಯನ್ನು ಕಂಡಿದೆ. ಈ ಲೀಗ್‌ನಲ್ಲಿ ಆಡಿದ ಅನೇಕ ಆಟಗಾರರು ನಿವೃತ್ತರಾದರೂ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ ಮೊದಲ ಸೀಸನ್‌ನಿಂದ ಈ ಲೀಗ್‌ನಲ್ಲಿ ಆಡುತ್ತಿದ್ದಾರೆ. ಆದ್ದರಿಂದ, ಐಪಿಎಲ್‌ನ 18 ನೇ ವಾರ್ಷಿಕೋತ್ಸವದಂದು, ಬಿಸಿಸಿಐ ಮೊದಲ ಸೀಸನ್‌ನಿಂದ ಆಡುತ್ತಿರುವ ಈ ಅನುಭವಿಗಳನ್ನು ಗೌರವಿಸಿತು.

ಏಪ್ರಿಲ್ 17 ರಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ರೋಹಿತ್ ಅವರನ್ನು ಸನ್ಮಾನಿಸಿದರು. ರೋಹಿತ್ಗೂ ಮೊದಲು ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಅವರನ್ನು ಸಹ ಬಿಸಿಸಿಐ ವಿಶೇಷ ಸ್ಮರಣಿಕೆ ನೀಡಿ ಗೌರವಿಸಿತ್ತು. ಆದರೆ ಕನ್ನಡಿಗ ಮನೀಶ್ ಪಾಂಡೆಗೆ ಮಾತ್ರ ಬಿಸಿಸಿಐನಿಂದ ಈ ಗೌರವ ಸಿಕ್ಕಿಲ್ಲ. ಹೀಗಾಗಿ ಈ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಮೇಲೆ ಹೇಳಿದಂತೆ ರೋಹಿತ್, ವಿರಾಟ್ ಮತ್ತು ಧೋನಿ ಜೊತೆಗೆ, ಮನೀಶ್ ಪಾಂಡೆ ಕೂಡ 2008 ರಲ್ಲಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು. 2008 ರ ಅಂಡರ್ 19 ವಿಶ್ವಕಪ್‌ನಲ್ಲಿ ಸಂಚಲನ ಮೂಡಿಸಿದ್ದ ಮನೀಶ್ ಪಾಂಡೆ ಅವರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆ ಮಾಡಲಾಯಿತು. ನಂತರ 2009 ರಲ್ಲಿ, ಮನೀಶ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡರು.

ಆರ್ಸಿಬಿ ಸೇರಿದ ಕೂಡಲೇ ಐಪಿಎಲ್‌ನಲ್ಲಿ ದೊಡ್ಡ ದಾಖಲೆಯನ್ನು ಸೃಷ್ಟಿಸಿದ್ದ ಮನೀಶ್, ಡೆಕ್ಕನ್ ಚಾರ್ಜರ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್‌ನ ಚೊಚ್ಚಲ ಶತಕ ಸಿಡಿಸಿದ್ದರು. ತಮ್ಮ ಇನ್ನಿಂಗ್ಸ್ನಲ್ಲಿ 73 ಎಸೆತಗಳನ್ನು ಎದುರಿಸಿದ್ದ ಮನೀಶ್ 10 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 114 ರನ್ ಗಳಿಸಿ ಅಜೇಯರಾಗುಳಿದಿದ್ದರು.

ಈ ಮೂಲಕ, ಮನೀಷ್ ಐಪಿಎಲ್‌ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಹಾಗೂ ಈ ಲೀಗ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆ ಸಮಯದಲ್ಲಿ ಮನೀಶ್ಗೆ ಕೇವಲ 19 ವರ್ಷ 253 ದಿನ ವಯಸ್ಸಾಗಿತ್ತು. ಹೀಗಾಗಿ ಐಪಿಎಲ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರನೆಂಬ ದಾಖಲೆ ಇನ್ನೂ ಮನೀಶ್ ಹೆಸರಿನಲ್ಲಿದೆ.

ಮನೀಶ್ ಪಾಂಡೆ ಈ ಸೀಸನ್‌ನಲ್ಲಿ ಕೆಕೆಆರ್ ಪರ ಆಡುತ್ತಿದ್ದಾರೆ. ಈ ಸೀಸನ್‌ನಲ್ಲಿ ಇಲ್ಲಿಯವರೆಗೆ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿರುವ ಮನೀಶ್ 19 ರನ್ ಗಳಿಸಿದ್ದಾರೆ. ಮನೀಶ್ 18 ವರ್ಷಗಳ ಕಾಲ ಐಪಿಎಲ್ ಆಡಿದ್ದರೂ ಬಿಸಿಸಿಐನಿಂದ ವಿಶೇಷ ಗೌರವ ಸಿಕ್ಕಿಲ್ಲ. ಆದಾಗ್ಯೂ, ಈ ಸೀಸನ್ ಇನ್ನೂ ಬಾಕಿ ಇರುವುದರಿಂದ ಮುಂಬರುವ ಪಂದ್ಯಗಳಲ್ಲಿ ಮನೀಶ್ ಅವರನ್ನು ಸನ್ಮಾನಿಸಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದಾಗಿದೆ.
Published On - 6:23 pm, Fri, 18 April 25



















