
ಟೀಂ ಇಂಡಿಯಾದ ಮಾಜಿ ಆಟಗಾರ ಸಂಜಯ್ ಬಂಗಾರ್ ಅವರ ಮಗ ಲಿಂಗ ಬದಲಾವಣೆ ಮಾಡಿಕೊಂಡು ಹೆಣ್ಣಾಗಿ ಬದಲಾಗಿರುವುದು ಹಳೆಯ ವಿಚಾರ. ಹೆಣ್ಣಾಗಿ ಬದಲಾಗಿರುವ ಅನಯಾ ಬಂಗಾರ್ (Anaya Bangar) ಮಹಿಳಾ ಕ್ರಿಕೆಟ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಮತ್ತೆ ಶುರು ಮಾಡುವ ಇರಾದೆಯಲ್ಲಿದ್ದಾರೆ. ಇದಕ್ಕೆ ಪೂರಕವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಕೆಲವು ಷರತ್ತುಗಳೊಂದಿಗೆ ಅನಯಾ ಬಂಗಾರ್ಗೆ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ನೀಡುವ ಬಗ್ಗೆ ಉತ್ಸುಕವಾಗಿತ್ತು. ಕ್ರಿಕೆಟ್ ಆಸ್ಟ್ರೇಲಿಯಾದ ಈ ತೀರ್ಮಾನ ಮಹಿಳಾ ಆಟಗಾರ್ತಿಯರ ಅಸಮಾಧಾನಕ್ಕೆ ಕಾರಣವಾಗಿದೆ. ದಕ್ಷಿಣ ಆಫ್ರಿಕಾದ ಅನುಭವಿ ಆಲ್‌ರೌಂಡರ್ ಮರಿಜಾನ್ನೆ ಕಪ್ ಇದು ಅತ್ಯಂತ ಕೆಟ್ಟ ನಿರ್ಧಾರ ಎಂದು ಜರಿದಿದ್ದು, ಅನಯಾ ಬಂಗಾರ್ಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
ಮೇಲೆ ಹೇಳಿದಂತೆ ಅನಯಾ ಬಂಗಾರ್ ಒಬ್ಬ ಟ್ರಾನ್ಸ್ಜೆಂಡರ್ ಕ್ರಿಕೆಟರ್, ಅವರು ತಮ್ಮ ಲಿಂಗವನ್ನು ಹುಡುಗನಿಂದ ಹುಡುಗಿಯಾಗಿ ಬದಲಾಯಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ರೂಪಾಂತರದ ಮೊದಲು, ಬಂಗಾರ್ ಭಾರತದಲ್ಲಿ ಮುಂಬೈ ಪರ ವಯೋಮಾನದ ಕ್ರಿಕೆಟ್ ಆಡುತ್ತಿದ್ದರು. ಆದಾಗ್ಯೂ, ಲಿಂಗ ಬದಲಾವಣೆಯ ನಂತರ ಭಾರತದಲ್ಲಿ ಅವರಿಗೆ ಆಡುವ ಅವಕಾಶ ಸಿಕ್ಕಿಲ್ಲ. ಏಕೆಂದರೆ ಮಹಿಳಾ ಕ್ರಿಕೆಟ್‌ನಲ್ಲಿ ಟ್ರಾನ್ಸ್ಜೆಂಡರ್‌ಗಳು ಆಡುವ ಬಗ್ಗೆ ಬಿಸಿಸಿಐ ಯಾವುದೇ ನೀತಿಯನ್ನು ಹೊಂದಿಲ್ಲ. ಅಲ್ಲದೆ ಐಸಿಸಿ ಕೂಡ ಅದನ್ನು ನಿಷೇಧಿಸಿದೆ.
Marizanne Kapp’s Instagram story on Anaya Bangar. pic.twitter.com/ofbDpVXYPi
— Mufaddal Vohra (@mufaddal_vohra) August 28, 2026
ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ವಿಭಿನ್ನ ನೀತಿಯನ್ನು ಹೊಂದಿದ್ದು, ಅದರ ಅಡಿಯಲ್ಲಿ ಅನಯಾ ಬಂಗಾರ್ ಮಹಿಳಾ ಕ್ರಿಕೆಟ್‌ನಲ್ಲಿ ಭಾಗವಹಿಸಲು ಷರತ್ತುಬದ್ಧ ಅವಕಾಶ ನೀಡಿದೆ. ಅನೇಕ ಅಭಿಮಾನಿಗಳು ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರೂ, ಮೊದಲ ಬಾರಿಗೆ, ಕ್ರಿಕೆಟ್ ವಲಯದಲ್ಲಿ ಇದರ ವಿರುದ್ಧ ಧ್ವನಿ ಎತ್ತಲಾಗುತ್ತಿದೆ. ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ್ತಿ ಮರಿಜಾನ್ನೆ ಕಪ್ಪ್ ತಮ್ಮ ಇನ್‌ಸ್ಟಾಗ್ರಾಮ್ ಈ ಬಗ್ಗೆ ಪೋಸ್ಟ್ ಮಾಡಿದ್ದು, ‘ಇದು ಸಂಪೂರ್ಣವಾಗಿ ಅಸಂಬದ್ಧ, ಇದನ್ನು ಅನುಮತಿಸಬಾರದು’ ಎಂದು ಬರೆದುಕೊಂಡಿದ್ದಾರೆ. ಹಾಗೆಯೇ ಇದರ ಜೊತೆಗೆ ಬಂಗಾರ್ ಆಡುವ ನಿರೀಕ್ಷೆಯಿರುವ WBBL ಅನ್ನು ಸಹ ಟ್ಯಾಗ್ ಮಾಡಿದ್ದಾರೆ.
ಇನ್ನು ಕ್ರಿಕೆಟ್ ಆಸ್ಟ್ರೇಲಿಯಾ ಷರತ್ತುಬದ್ಧ ಅನುಮತಿ ನೀಡಿರುವ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಅನಯಾ ಬಂಗಾರ್, ‘ಅರ್ಹತೆ ಆಯ್ಕೆಯಲ್ಲ ಎಂದು ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಕ್ರಿಕೆಟ್ ಆಸ್ಟ್ರೇಲಿಯಾ ನನಗೆ ಒಂದು ಮಾರ್ಗವನ್ನು ತೋರಿಸಿದೆ, ಆದರೆ ಅದರರ್ಥ ನಾನು ತಂಡದಲ್ಲಿ ಸ್ಥಾನ ಪಡೆದಿದ್ದೇನೆ ಎಂದಲ್ಲ. ನಾನು ಇನ್ನೂ ಅಭ್ಯಾಸ ಮಾಡಬೇಕು, ಸ್ಪರ್ಧಿಸಬೇಕು, ಉತ್ತಮ ಪ್ರದರ್ಶನ ನೀಡಬೇಕು ಮತ್ತು ಆ ಅವಕಾಶವನ್ನು ಗಳಿಸಬೇಕು’ ಎಂದು ಬರೆದುಕೊಂಡಿದ್ದಾರೆ.