ಆ್ಯಂಡ್ರೆ ರಸೆಲ್ ಎಸೆತದಲ್ಲಿ ಮುರಿದು ಬಿದ್ದ ಟ್ರಾವಿಸ್ ಹೆಡ್ ಬ್ಯಾಟ್: ವಿಡಿಯೋ ನೋಡಿ
MLC 2024: ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ 11ನೇ ಪಂದ್ಯದಲ್ಲಿ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಮತ್ತು ವಾಷಿಂಗ್ಟನ್ ಫ್ರೀಡಮ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ 129 ರನ್ಗಳಿಗೆ ಆಲೌಟ್ ಆದರೆ, ಈ ಗುರಿಯನ್ನು ಕೇವಲ 16 ಓವರ್ಗಳಲ್ಲಿ ವಾಷಿಂಗ್ಟನ್ ಫ್ರೀಡಮ್ ತಂಡವು ಚೇಸ್ ಮಾಡಿತು.
ವೆಸ್ಟ್ ಇಂಡೀಸ್ ಆಲ್ರೌಂಡರ್ ಆ್ಯಂಡ್ರೆ ರಸೆಲ್ ಎಸೆದ ಎಸೆತದಲ್ಲಿ ಆಸ್ಟ್ರೇಲಿಯಾ ಆಟಗಾರ ಟ್ರಾವಿಸ್ ಹೆಡ್ ಅವರ ಬ್ಯಾಟ್ ಮುರಿದು ಹೋಗಿದೆ. ಯುಎಸ್ಎನಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಟೂರ್ನಿಯಲ್ಲಿ ಉಭಯರು ಕಣಕ್ಕಿಳಿಯುತ್ತಿದ್ದು, ಇಲ್ಲಿ ರಸೆಲ್ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಪರ ಆಡುತ್ತಿದ್ದರೆ, ಟ್ರಾವಿಸ್ ಹೆಡ್ ವಾಷಿಂಗ್ಟನ್ ಫ್ರೀಡಮ್ ಪರ ಕಣಕ್ಕಿಳಿಯುತ್ತಿದ್ದಾರೆ. ಅದರಂತೆ 11ನೇ ಪಂದ್ಯದಲ್ಲಿ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಮತ್ತು ವಾಷಿಂಗ್ಟನ್ ಫ್ರೀಡಮ್ ತಂಡಗಳು ಮುಖಾಮುಖಿಯಾಗಿದ್ದವು. ಆ್ಯಂಡ್ರೆ ರಸೆಲ್ ಎಸೆದ 2ನೇ ಓವರ್ನ 5ನೇ ಎಸೆತದಲ್ಲಿ ಟ್ರಾವಿಸ್ ಹೆಡ್ ಭರ್ಜರಿ ಹೊಡೆತಕ್ಕೆ ಮುಂದಾಗಿದ್ದರು. ಆದರೆ ಚೆಂಡು ನುಗ್ಗಿ ಬಂದ ರಭಸಕ್ಕೆ ಬ್ಯಾಟ್ ತುಂಡಾಗಿ ಲೆಗ್ ಸೈಡ್ನತ್ತ ಹಾರಿತು. ಇದೀಗ ಟ್ರಾವಿಡ್ ಹೆಡ್ ಅವರ ಬ್ಯಾಟ್ ಮುರಿದು ಬೀಳುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡವು 18.4 ಓವರ್ಗಳಲ್ಲಿ 129 ರನ್ಗಳಿಸಿ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನತ್ತಿದ ವಾಷಿಂಗ್ಟನ್ ಫ್ರೀಡಮ್ ಪರ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ 32 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 54 ರನ್ ಚಚ್ಚಿದರು. ಈ ಮೂಲಕ ವಾಷಿಂಗ್ಟನ್ ಫ್ರೀಡಮ್ ತಂಡವು 16 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 130 ರನ್ ಕಲೆಹಾಕಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.