ವಿಕಲ ಚೇತನರನ್ನು ಅವಮಾನಿಸಿದ್ರಾ ಯುವಿ, ರೈನಾ, ಭಜ್ಜಿ? ವಿವಾದ ಹುಟ್ಟಿಸಿದ ವೈರಲ್ ವಿಡಿಯೋ
Tauba Tauba Controversy: ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ಡ್ರೆಸ್ಸಿಂಗ್ ರೂಮ್‌ನಲ್ಲಿ, 'ತೌಬಾ ತೌಬಾ' ಹಾಡಿಗೆ ಹೆಜ್ಜೆಹಾಕಿದ್ದರು. ಆದರೆ ಈ ಮೂವರ ಮಾಡಿದ ವಿಭಿನ್ನ ನೃತ್ಯ ಇದೀಗ ಪ್ಯಾರಾ ಅಥ್ಲೀಟ್‌ಗಳ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಅಸಮಾಧಾನಗೊಂಡಿದ್ದು, ಇದು ನಾಚಿಕೆಗೇಡಿನ ಸಂಗತಿ, ಈ ಮೂವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಟೀಂ ಇಂಡಿಯಾದ ಮಾಜಿ ಆಟಗಾರರಾದ ಸುರೇಶ್ ರೈನಾ, ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ಅವರ ಹೊಸ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಹೊಸ ವಿವಾದವನ್ನೂ ಹುಟ್ಟುಹಾಕಿದೆ. ವಾಸ್ತವವಾಗಿ ಚೊಚ್ಚಲ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಲೀಗ್ನಲ್ಲಿ ಚಾಂಪಿಯನ್ ಆದ ಬಳಿಕ ಇಂಡಿಯಾ ಚಾಂಪಿಯನ್ಸ್ ತಂಡದ ಭಾಗವಾಗಿದ್ದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ಡ್ರೆಸ್ಸಿಂಗ್ ರೂಮ್‌ನಲ್ಲಿ ‘ತೌಬಾ ತೌಬಾ’ ಹಾಡಿಗೆ ಹೆಜ್ಜೆಹಾಕಿದ್ದರು. ಆದರೆ ಈ ಮೂವರು ಮಾಡಿದ ವಿಭಿನ್ನ ನೃತ್ಯ ಇದೀಗ ಪ್ಯಾರಾ ಅಥ್ಲೀಟ್‌ಗಳ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಅಸಮಾಧಾನಗೊಂಡಿದ್ದು, ಇದು ನಾಚಿಕೆಗೇಡಿನ ಸಂಗತಿ, ಈ ಮೂವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ತೌಬಾ ತೌಬಾ ಹಾಡಿಗೆ ಹುಕ್ ಸ್ಟೆಪ್
ವಾಸ್ತವವಾಗಿ, ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನ ಫೈನಲ್‌ನಲ್ಲಿ ಇಂಡಿಯಾ ಚಾಂಪಿಯನ್ಸ್ ತಂಡ, ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು ಮಣಿಸಿ ಚೊಚ್ಚಲ ಆವೃತ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಪ್ರಶಸ್ತಿ ಗೆದ್ದ ನಂತರ, ಭಾರತ ಚಾಂಪಿಯನ್ಸ್ ಆಟಗಾರರು ನಟ ವಿಕ್ಕಿ ಕೌಶಲ್ ಅಭಿನಯದ ‘ತೌಬಾ ತೌಬಾ’ ಹಾಡಿಗೆ ಹುಕ್ ಸ್ಟೆಪ್ ಮಾಡಲು ಪ್ರಯತ್ನಿಸಿದರು. ಹಾಡಿನ ಟ್ಯೂನ್‌ಗೆ ಕುಂಟುತ್ತಾ, ಮಾಜಿ ಕ್ರಿಕೆಟಿಗರು ಕಳೆದ ಒಂದು ತಿಂಗಳಿನಿಂದ ಪಂದ್ಯಾವಳಿಯಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ತಮ್ಮ ದೇಹಕ್ಕೆ ಹಾನಿಯಾಗಿದೆ ಎಂಬುದನ್ನು ತೊರಿಸಲು ಪ್ರಯತ್ನಿಸಿದರು.
View this post on Instagram
ಆದರೆ, ಈ ವಿಡಿಯೋ ವೈರಲ್ ಆದ ಬಳಿಕ ಈ ಬಗ್ಗೆ ಭಾರತೀಯ ಪ್ಯಾರಾ ಅಥ್ಲೀಟ್‌ಗಳು ಅಸಮಾಧಾನಗೊಂಡಿದ್ದಾರೆ. ಪ್ಯಾರಾ-ಈಜುಗಾರ ಶಮ್ಸ್ ಆಲಂ, ಬ್ಯಾಡ್ಮಿಂಟನ್ ತಾರೆ ಮತ್ತು ಅರ್ಜುನ್ ಪ್ರಶಸ್ತಿ ಪುರಸ್ಕೃತ ಮಾನ್ಸಿ ಜೋಶಿ ಅವರು, ಭಾರತದ ಮಾಜಿ ಕ್ರಿಕೆಟಿಗರು ಅಂಗವಿಕಲ ಸಮುದಾಯವನ್ನು ಮುಜುಗರಕ್ಕೀಡು ಮಾಡಿದ್ದಾರೆ ಎಂದು ತೀವ್ರವಾಗಿ ಟೀಕಿಸಿದ್ದಾರೆ.
ಗೇಲಿ ಮಾಡಿದಂತಿದೆ
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಅವರು, ಹರ್ಭಜನ್, ಯುವರಾಜ್ ಮತ್ತು ಇತರ ಗೌರವಾನ್ವಿತ ತಂಡದ ಸದಸ್ಯರೆ. ಆಟದ ನಂತರ ದೇಹವು ದಣಿದಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ ನೀವು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸುತ್ತಿರುವ ರೀತಿ ಅಂಗವಿಕಲ ಸಮುದಾಯವನ್ನು ಗೇಲಿ ಮಾಡಿದಂತಿದೆ. ಹೀಗಾಗಿ ಇದು ಸ್ವೀಕಾರಾರ್ಹವಲ್ಲ. ನನ್ನ ಕಾಮೆಂಟ್‌ಗಳು ನಿಮ್ಮ ಅಥವಾ ನಿಮ್ಮ ತಂಡದ ಸದಸ್ಯರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನನಗೆ ತಿಳಿದಿದೆ. ಆದರೆ ನಿಮ್ಮ ಹತ್ತಿರವಿರುವ ಯಾರಿಗಾದರೂ ಈ ರೀತಿಯ ಏನಾದರೂ ಸಂಭವಿಸಿದರೆ ಊಹಿಸಿ. ಆಗಲು ನೀವು ನಿಮ್ಮ ನೋವನ್ನು ಈ ರೀತಿ ವ್ಯಕ್ತಪಡಿಸುತ್ತೀರಾ? ನಾವೆಲ್ಲರೂ ನಿಮ್ಮನ್ನು ಗೌರವಿಸುತ್ತೇವೆ. ನೀವು ಜನರನ್ನು ಅರ್ಥಮಾಡಿಕೊಂಡು ಅದರಂತೆ ವರ್ತಿಸುತ್ತೀರಿ ಎಂದು ಭಾವಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಅವಹೇಳನಕಾರಿ ಸನ್ನೆ
ಪ್ಯಾರಾಲಿಂಪಿಕ್ಸ್ ಇಂಡಿಯಾ ಕೂಡ ಈ ಪೋಸ್ಟ್‌ಗೆ ಅಸಮಾಧಾನಗೊಂಡಿದ್ದು, ಆಟಗಾರರ ನಡವಳಿಕೆಯನ್ನು ‘ನಾಚಿಕೆಗೇಡಿನ ಮತ್ತು ಸಂವೇದನಾರಹಿತ’ ಎಂದು ಬಣ್ಣಿಸಿದೆ. ಕ್ರಿಕೆಟ್ ಆಟಗಾರರಾಗಿ ಸ್ಟಾರ್ ಸೆಲೆಬ್ರಿಟಿಗಳು ಸಕಾರಾತ್ಮಕ ಭಾವನೆಗಳನ್ನು ಮೂಡಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಆದರೆ ವಿಕಲಾಂಗರನ್ನು ಅನುಕರಿಸುವುದು, ಅವಹೇಳನಕಾರಿ ಸನ್ನೆಗಳನ್ನು ಬಳಸುವುದು ಮತ್ತು ಅವರ ದೈಹಿಕ ನ್ಯೂನತೆಗಳನ್ನು ಗೇಲಿ ಮಾಡುವುದು ಅಂಗವೈಕಲ್ಯವನ್ನು ಗೇಲಿ ಮಾಡುವುದು ಮಾತ್ರವಲ್ಲ, ಅದು ತಾರತಮ್ಯ. ಈಗ ಅವರು ತಮ್ಮ ಕೃತ್ಯಗಳಿಗೆ ಕ್ಷಮೆ ಕೇಳುವ ಸಮಯ ಬಂದಿದೆ ಎಂದು ಬರೆದುಕೊಂಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:12 pm, Mon, 15 July 24