IPL 2022: ಐಪಿಎಲ್ನ 35ನೇ ಪಂದ್ಯದಲ್ಲಿ KKR ತಂಡದ ಆಲ್ರೌಂಡರ್ ಆಂಡ್ರೆ ರಸೆಲ್ (Andre Russell) ಹೊಸ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಗುಜರಾತ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಶುಭ್ಮನ್ ಗಿಲ್ 7 ರನ್ಗಳಿಸಿ 2ನೇ ಓವರ್ನಲ್ಲೇ ಔಟಾಗಿದ್ದರು. ಇದಾದ ಬಳಿಕ ಜೊತೆಯಾದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ವೃದ್ದಿಮಾನ್ ಸಾಹ 75 ರನ್ಗಳ ಜೊತೆಯಾಟವಾಡಿದ್ದರು. ಈ ವೇಳೆ ಅರ್ಧಶತಕ ಪೂರೈಸುವ ಮೂಲಕ ಪಾಂಡ್ಯ ಗಮನ ಸೆಳೆದರು.
ಮೊದಲ 10 ಓವರ್ಗಳಲ್ಲಿ 80 ಕ್ಕೂ ಅಧಿಕ ರನ್ಗಳಿಸಿದ್ದ ಗುಜರಾತ್ ಟೈಟನ್ಸ್ ತಂಡವು 2ನೇ 10 ಓವರ್ನಲ್ಲಿ ಮಂಕಾಯಿತು. ಸತತ ವಿಕೆಟ್ ಕೈಚೆಲ್ಲುವ ಮೂಲಕ ದೊಡ್ಡ ಮೊತ್ತ ಪೇರಿಸುವಲ್ಲಿ ಎಡವಿತು. ಅದರಲ್ಲೂ ಕೊನೆಯ ಓವರ್ನಲ್ಲಿ ಗುಜರಾತ್ ಟೈಟನ್ಸ್ ತಂಡವು ನಾಲ್ಕು ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಕೇವಲ 5 ರನ್ ಮಾತ್ರ. ಅದರಂತೆ ಗುಜರಾತ್ ಟೈಟನ್ಸ್ ತಂಡವು 9 ವಿಕೆಟ್ ಕಳೆದುಕೊಂಡು 156 ರನ್ಗಳಿಸಲಷ್ಟೇ ಶಕ್ತರಾದರು.
ಅತ್ಯುತ್ತಮವಾಗಿ 20ನೇ ಓವರ್ ಎಸೆಯುವ ಮೂಲಕ 4 ವಿಕೆಟ್ ಉರುಳಿಸಿದ ಆಂಡ್ರೆ ರಸೆಲ್ ವಿಶೇಷ ದಾಖಲೆಯನ್ನೂ ಕೂಡ ತಮ್ಮದಾಗಿಸಿಕೊಂಡರು. ಐಪಿಎಲ್ನಲ್ಲಿ ಇದುವರೆಗೆ ಯಾವುದೇ ಬೌಲರ್ ಒಂದು ಓವರ್ ಮಾಡಿ 4 ವಿಕೆಟ್ ಉರುಳಿಸಿಲ್ಲ. ಈ ಹಿಂದೆ 2019 ರಲ್ಲಿ ಕೇವಲ ಒಂದು ಓವರ್ ಮಾಡಿ ಆರ್ಸಿಬಿ ವಿರುದ್ದ ರಾಜಸ್ಥಾನ್ ರಾಯಲ್ಸ್ ತಂಡದ ಶ್ರೇಯಸ್ ಗೋಪಾಲ್ 12 ರನ್ ನೀಡಿ 3 ವಿಕೆಟ್ ಉರುಳಿಸಿ ದಾಖಲೆ ಬರೆದಿದ್ದರು. ಇದೀಗ ಕೇವಲ 1 ಓವರ್ ಮಾಡಿ 4 ವಿಕೆಟ್ ಪಡೆಯುವ ಮೂಲಕ ಆಂಡ್ರೆ ರಸೆಲ್ ಐಪಿಎಲ್ ಇತಿಹಾಸದಲ್ಲೇ ಯಾರು ಮಾಡದ ಸಾಧನೆ ಮಾಡಿದ್ದಾರೆ.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್:
ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ XI): ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ರಿಂಕು ಸಿಂಗ್, ಆಂಡ್ರೆ ರಸೆಲ್, ಟಿಮ್ ಸೌಥಿ, ಶಿವಂ ಮಾವಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ
ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ(ನಾಯಕ), ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಯಶ್ ದಯಾಲ್, ಮೊಹಮ್ಮದ್ ಶಮಿ.
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ