IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ
IPL 2022: ಅಂತಿಮ ಓವರ್ಗಳಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಶಹಬಾಜ್ ಹಾಗೂ ದಿನೇಶ್ ಕಾರ್ತಿಕ್ ತಂಡದ ಮೊತ್ತವನ್ನು 20 ಓವರ್ಗಳಲ್ಲಿ 189 ಕ್ಕೆ ತಂದು ನಿಲ್ಲಿಸಿದರು.
IPL 2022: ಐಪಿಎಲ್ನ 27ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC vs RCB) ವಿರುದ್ದ ಅಬ್ಬರಿಸುವ ಮೂಲಕ ಶಹಬಾಜ್ ಅಹ್ಮದ್ (Shahbaz Ahmed) ಹಾಗೂ ದಿನೇಶ್ ಕಾರ್ತಿಕ್ (Dinesh Karthik) ವಿಶೇಷ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಅನೂಜ್ ರಾವತ್ ಶೂನ್ಯಕ್ಕೆ ಔಟಾದರೆ, ಫಾಫ್ ಡುಪ್ಲೆಸಿಸ್ 8 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ರನೌಟ್ ಆಗಿ ಹೊರನಡೆದಿದ್ದರು. ಈ ಹಂತದಲ್ಲಿ ಅಬ್ಬರಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ 34 ಎಸೆತಗಳಲ್ಲಿ 55 ರನ್ ಬಾರಿಸಿ ನಿರ್ಗಮಿಸಿದರು.
ತಂಡದ ಮೊತ್ತ 95 ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆರ್ಸಿಬಿಗೆ ಈ ಹಂತದಲ್ಲಿ ಆಸರೆಯಾಗಿದ್ದು ದಿನೇಶ್ ಕಾರ್ತಿಕ್ ಹಾಗೂ ಶಹಬಾಜ್ ಅಹ್ಮದ್. 6ನೇ ವಿಕೆಟ್ಗೆ ಅತ್ಯುತ್ತಮ ಜೊತೆಯಾಟವಾಡಿದ ಈ ಜೋಡಿ ತಂಡದ ರನ್ಗತಿಯನ್ನು ಹೆಚ್ಚಿಸಿದರು. ಅದರಲ್ಲೂ ದಿನೇಶ್ ಕಾರ್ತಿಕ್ ಅಕ್ಷರಶಃ ಅಬ್ಬರಿಸಿದರು. ಮುಸ್ತಫಿಜುರ್ ರೆಹಮಾನ್ ಎಸೆದ 18ನೇ ಓವರ್ನಲ್ಲಿ 28 ರನ್ ಬಾರಿಸುವ ಮೂಲಕ ಡಿಕೆ ಅರ್ಧಶತಕ ಪೂರೈಸಿದ್ದರು.
ಅಲ್ಲದೆ ಅಂತಿಮ ಓವರ್ಗಳಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಶಹಬಾಜ್ ಹಾಗೂ ದಿನೇಶ್ ಕಾರ್ತಿಕ್ ತಂಡದ ಮೊತ್ತವನ್ನು 20 ಓವರ್ಗಳಲ್ಲಿ 189 ಕ್ಕೆ ತಂದು ನಿಲ್ಲಿಸಿದರು. ಇದರೊಂದಿಗೆ ಐಪಿಎಲ್ನಲ್ಲಿ ಆರ್ಸಿಬಿ ಪರ 6ನೇ ವಿಕೆಟ್ಗೆ ಅತ್ಯಧಿಕ ರನ್ಗಳ ಜೊತೆಯಾಟವಾಡಿದ ಜೋಡಿ ಎಂಬ ದಾಖಲೆ ಡಿಕೆ-ಶಹಬಾಜ್ ಪಾಲಾಯಿತು. ದಿನೇಶ್ ಕಾರ್ತಿಕ್ ಹಾಗೂ ಶಹಬಾಜ್ ಅಹ್ಮದ್ 6ನೇ ವಿಕೆಟ್ಗೆ 97 ರನ್ಗಳ ಜೊತೆಯಾಟವಾಡಿದ್ದರು. ಈ ಮೂಲಕ ಆರ್ಸಿಬಿ ಪರ ವಿಶೇಷ ದಾಖಲೆ ಬರೆದರು.
ಅಲ್ಲದೆ ಐಪಿಎಲ್ ಇತಿಹಾಸದಲ್ಲೇ 6ನೇ ವಿಕೆಟ್ಗೆ ಅತ್ಯಧಿಕ ರನ್ಗಳ ಜೊತೆಯಾಟವಾಡಿದ ಮೂರನೇ ಜೋಡಿ ಎನಿಸಿಕೊಂಡಿದೆ. ಅಂದರೆ ಐಪಿಎಲ್ನಲ್ಲಿ ಎರಡು ಬಾರಿ ಮಾತ್ರ 6ನೇ ವಿಕೆಟ್ಗೆ 100 ರನ್ಗಳ ಜೊತೆಯಾಟ ಮೂಡಿಬಂದಿದೆ. 2008 ರಲ್ಲಿ ಕೆಕೆಆರ್ ತಂಡದ ಡೇವಿಡ್ ಹಸ್ಸಿ ಹಾಗೂ ವೃದ್ದಿಮಾನ್ ಸಾಹಾ 104 ರನ್ಗಳ ಜೊತೆಯಾಟವಾಡಿ ದಾಖಲೆ ಬರೆದಿದ್ದರು.
ಇದಾದ ಬಳಿಕ 2012 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಅಂಬಾಟಿ ರಾಯುಡು ಹಾಗೂ ಕೀರನ್ ಪೊಲಾರ್ಡ್ ಆರ್ಸಿಬಿ ವಿರುದ್ದ 6ನೇ ವಿಕೆಟ್ಗೆ 122 ರನ್ಗಳ ಜೊತೆಯಾಟವಾಡಿ ಹೊಸ ಇತಿಹಾಸ ನಿರ್ಮಿಸಿದ್ದರು. ಇದೀಗ ದಿನೇಶ್ ಕಾರ್ತಿಕ್ ಹಾಗೂ ಶಹಬಾಜ್ ಅಹ್ಮದ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 97 ರನ್ಗಳ ಜೊತೆಯಾಟವಾಡುವ ಮೂಲಕ 6ನೇ ವಿಕೆಟ್ಗೆ ಅತ್ಯಧಿಕ ರನ್ಗಳಿಸಿದ 3ನೇ ಜೋಡಿ ಎನಿಸಿಕೊಂಡಿದ್ದಾರೆ. ಇನ್ನು ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 34 ಎಸೆತಗಳಲ್ಲಿ 5 ಸಿಕ್ಸ್, 5 ಫೋರ್ನೊಂದಿಗೆ 66 ರನ್ಗಳಿಸಿದ್ದರು. ಹಾಗೆಯೇ ಉತ್ತಮ ಸಾಥ್ ನೀಡಿದ ಶಹಬಾಜ್ 21 ಎಸೆತಗಳಲ್ಲಿ 3 ಫೋರ್, ಒಂದು ಸಿಕ್ಸ್ನೊಂದಿಗೆ 32 ರನ್ ಕಲೆಹಾಕಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್‌ವುಡ್, ಮೊಹಮ್ಮದ್ ಸಿರಾಜ್
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್(ನಾಯಕ), ರೋವ್ಮನ್ ಪೊವೆಲ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಖಲೀಲ್ ಅಹ್ಮದ್
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
Published On - 11:06 pm, Sat, 16 April 22