IND vs ENG: ಸ್ಪಿನ್ನರ್​ಗಿಂತಲೂ ಕಡಿಮೆ ಅನ್ಶುಲ್ ಕಾಂಬೋಜ್ ವೇಗ; ಯುವ ವೇಗಿಗೆ ಟ್ರೋಲಿಗರ ಕಾಟ

Anshul Kamboj Speed: ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಅನ್ಶುಲ್ ಕಾಂಬೋಜ್ ಅವರ ನಿಧಾನ ವೇಗವು ಅಭಿಮಾನಿಗಳಲ್ಲಿ ನಿರಾಶೆಯನ್ನುಂಟುಮಾಡಿದೆ. ಅವರ ಗರಿಷ್ಠ ವೇಗ 135 ಕಿ.ಮೀ. ಆಗಿದ್ದರೂ, ಸರಾಸರಿ ವೇಗ ಕಡಿಮೆ ಇರುವುದು ಟೀಕೆಗೆ ಗುರಿಯಾಗಿದೆ. ಲೆಗ್ ಸ್ಪಿನ್ನರ್‌ಗಳಿಗಿಂತ ಕಡಿಮೆ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ ಎಂಬ ಆರೋಪಗಳನ್ನು ಅವರು ಎದುರಿಸುತ್ತಿದ್ದಾರೆ.

IND vs ENG: ಸ್ಪಿನ್ನರ್​ಗಿಂತಲೂ ಕಡಿಮೆ ಅನ್ಶುಲ್ ಕಾಂಬೋಜ್ ವೇಗ; ಯುವ ವೇಗಿಗೆ  ಟ್ರೋಲಿಗರ ಕಾಟ
Anshul Kamboj

Updated on: Jul 25, 2025 | 10:39 PM

ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ (Manchester Test) ಭಾರತ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ ಯುವ ವೇಗಿ ಅನ್ಶುಲ್ ಕಾಂಬೋಜ್ (Anshul Kamboj) ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟಿದ್ದರು. ವಿಶೇಷವಾಗಿ ಇಂಗ್ಲೆಂಡ್‌ನ ಹವಾಮಾನ ಮತ್ತು ಮ್ಯಾಂಚೆಸ್ಟರ್‌ನ ಪಿಚ್ ಅವರ ಬೌಲಿಂಗ್‌ಗೆ ಸೂಕ್ತವಾಗಿದ್ದರಿಂದ ಅನ್ಶುಲ್​ಗೆ 4ನೇ ಟೆಸ್ಟ್ ಆಡುವ ಅವಕಾಶ ನೀಡಲಾಗಿದೆ. ಆದರೆ ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಅನ್ಶುಲ್ ಕಾಂಬೋಜ್​ಗೆ ವಿಶೇಷವಾದದ್ದನ್ನು ಮಾಡಲು ಇದುವರೆಗೆ ಸಾಧ್ಯವಾಗಿಲ್ಲ. ಅನ್ಶುಲ್ ಕಾಂಬೋಜ್ ಮೊದಲ ಇನ್ನಿಂಗ್ಸ್‌ನಲ್ಲಿ ಬೆನ್ ಡಕೆಟ್ ಅವರ ವಿಕೆಟ್ ಪಡೆದರಾದರೂ ಅವರ ವೇಗದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಅನ್ಶುಲ್ ಕಾಂಬೋಜ್​ಗಿಂತ ಸ್ಪಿನ್ನರ್​ಗಳೇ ಇನ್ನು ವೇಗವಾಗಿ ಬೌಲ್ ಮಾಡುತ್ತಾರೆ ಎಂದು ನೆಟ್ಟಿಗರು ಯುವ ವೇಗಿಯನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ನೆಟ್ಟಿಗರು ಹೀಗೆ ಮಾಡಲು ಕಾರಣವೂ ಇದೆ.

ಅನ್ಶುಲ್ ಬೌಲಿಂಗ್​ನಲ್ಲಿ ಪವರ್​ ಇಲ್ಲ

ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಅನ್ಶುಲ್ ಕಾಂಬೋಜ್ ಅವರ ಸರಾಸರಿ ವೇಗ ಗಂಟೆಗೆ 130 ಕಿ.ಮೀ. ಆಗಿದ್ದರೆ, ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾದ ಅರೆಕಾಲಿಕ ಲೆಗ್ ಸ್ಪಿನ್ ಬೌಲರ್ ಮಾರ್ನಸ್ ಲಬುಶೇನ್ ಸರಾಸರಿ ಗಂಟೆಗೆ 132 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಇದೀಗ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಅನ್ಶುಲ್ ಕಾಂಬೋಜ್​ರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.

ಪರಿಣಾಮಕಾರಿಯಾಗದ ಕಾಂಬೋಜ್

ಈ ಪಂದ್ಯದಲ್ಲಿ ಅನ್ಶುಲ್ ಕಾಂಬೋಜ್ ಅಷ್ಟು ಕಡಿಮೆ ವೇಗದಲ್ಲಿ ಬೌಲಿಂಗ್ ಮಾಡುತ್ತಿಲ್ಲ. ವಾಸ್ತವವಾಗಿ, ಅನ್ಶುಲ್ ಕಾಂಬೋಜ್ ಗಂಟೆಗೆ ಗರಿಷ್ಠ 135 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಆದರೆ ಅನ್ಶುಲ್ ಅವರ ನಿಜವಾದ ಸಾಮರ್ಥ್ಯವೆಂದರೆ ಚೆಂಡನ್ನು ಸೀಮ್ ಮತ್ತು ಸ್ವಿಂಗ್ ಮಾಡುವುದು. ಆದರೆ ಮ್ಯಾಂಚೆಸ್ಟರ್ ಪಿಚ್‌ನಲ್ಲಿ ಅನ್ಶುಲ್​ಗೆ ಇದುವರೆಗೆ ಆ ರೀತಿಯ ಜಾದೂ ತೋರಿಸಲು ಸಾಧ್ಯವಾಗಿಲ್ಲ. ಪರಿಣಾಮವಾಗಿ, ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳು ಅನ್ಶುಲ್ ಕಾಂಬೋಜ್ ಬೌಲಿಂಗ್​ನಲ್ಲಿ ಸರಾಗವಾಗಿ ರನ್ ಕಲೆಹಾಕುತ್ತಿದ್ದಾರೆ. ಬುಮ್ರಾ ಜೊತೆ ಬೌಲಿಂಗ್ ಆರಂಭಿಸಿದ ಅನ್ಶುಲ್​ಗೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಹೀಗಾಗಿ ಅನ್ಶುಲ್ ಅವರನ್ನು ಈ ಟೆಸ್ಟ್​ಗೆ ಆಯ್ಕೆ ಮಾಡಿದ ಆಡಳಿತ ಮಂಡಳಿಯನ್ನು ತೀವ್ರವಾಗಿ ಟೀಕಿಸಲಾಗುತ್ತಿದೆ. ಅಂದಹಾಗೆ, ಕೇವಲ ಒಂದು ಟೆಸ್ಟ್ ಇನ್ನಿಂಗ್ಸ್‌ನಿಂದ ಆಟಗಾರನನ್ನು ನಿರ್ಣಯಿಸುವುದು ಸರಿಯಲ್ಲ. ಎಂಎಸ್ ಧೋನಿಯಂತಹ ಆಟಗಾರ ಕೂಡ ಅನ್ಶುಲ್ ಅವರ ಪ್ರತಿಭೆಗೆ ಸೆಲ್ಯೂಟ್ ಹೊಡೆದಿರುವುದರಿಂದ ಅವರಿಗೆ ಮತ್ತಷ್ಟು ಅವಕಾಶ ಸಿಕ್ಕರೆ, ಖಂಡಿತವಾಗಿಯೂ ಪರಿಣಾಮಕಾರಿಯಾಗಬಲ್ಲರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ