AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs MI: ಅಬ್ಬಾ ಎಂಥಾ ಬ್ಯಾಟಿಂಗ್, ಎಂಥಾ ಸಿಕ್ಸ್: ರೋಹಿತ್ ಪಡೆಯನ್ನು ಅಟ್ಟಾಡಿಸಿದ ರಾವತ್

Anuj Rawat, IPL 2022: ಮುಂಬೈ ಇಂಡಿಯನ್ಸ್ ಸತತ ನಾಲ್ಕನೇ ಪಂದ್ಯವನ್ನೂ ಸೋತಿತು. ಬೌಲರ್​​ಗಳ ಸಂಘಟಿತ ಪ್ರದರ್ಶನದ ಜೊತೆ ಅನುಜ್ ರಾವತ್ ಅವರ ಚೊಚ್ಚಲ ಅರ್ಧಶತಕ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟಿಂಗ್ ಆರ್​ಸಿಬಿ ಗೆಲುವಲ್ಲಿ ಮುಖ್ಯ ಪಾತ್ರವಹಿಸಿತು.

RCB vs MI: ಅಬ್ಬಾ ಎಂಥಾ ಬ್ಯಾಟಿಂಗ್, ಎಂಥಾ ಸಿಕ್ಸ್: ರೋಹಿತ್ ಪಡೆಯನ್ನು ಅಟ್ಟಾಡಿಸಿದ ರಾವತ್
Anuj Rawat and Virat Kohli RCB vs MI
TV9 Web
| Updated By: Vinay Bhat|

Updated on: Apr 10, 2022 | 7:35 AM

Share

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಶನಿವಾರ ನಡೆದ 18ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​​ ಬೆಂಗಳೂರು (Royal Challengers Bangalore) ತಂಡ ಭರ್ಜರಿ ಗೆಲುವು ಸಾಧಿಸಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಕಾದಾಟದಲ್ಲಿ ಬೊಂಬಾಟ್ ಪ್ರದರ್ಶನ ತೋರಿದ ಆರ್​​ಸಿಬಿ (RCB vs MI) 7 ವಿಕೆಟ್​ಗಳ ಅಮೋಘ ಗೆಲುವು ಕಂಡು ಹ್ಯಾಟ್ರಿಕ್ ಜಯ ತನ್ನದಾಗಿಸಿದೆ. ಇತ್ತ ಮುಂಬೈ ಸತತ ನಾಲ್ಕನೇ ಪಂದ್ಯವನ್ನೂ ಸೋತಿತು. ಬೌಲರ್​​ಗಳ ಸಂಘಟಿತ ಪ್ರದರ್ಶನದ ಜೊತೆ ಅನುಜ್ ರಾವತ್ (Anuj Rawat) ಅವರ ಚೊಚ್ಚಲ ಅರ್ಧಶತಕ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟಿಂಗ್ ಬೆಂಗಳೂರು ಗೆಲುವಲ್ಲಿ ಮುಖ್ಯ ಪಾತ್ರವಹಿಸಿತು. ಈ ಜಯದೊಂದಿಗೆ ಆರ್​​ಸಿಬಿ ತಂಡ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಸದ್ಯ ಆಡಿರುವ ಒಟ್ಟು ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದು ಆರು ಅಂಕ ಸಂಪಾದಿಸಿದ್ದು +0.294 ರನ್​​ರೇಟ್ ಆಧಾರದ ಮೇಲೆ ತೃತೀಯ ಸ್ಥಾನದಲ್ಲಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಮೊದಲ ವಿಕೆಟ್​​ಗೆ ಅರ್ಧಶತಕದ ಜೊತೆಯಾಟ ಆಡಿದರು. ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ತಲಾ 26 ರನ್ ಗಳಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡೆವಾಲ್ಡ್ ಬ್ರೆವಿಸ್ 8 ರನ್ ಗಳಿಸಿ ಔಟ್ ಆದರೆ, ನಂತರ ಬಂದ ತಿಲಕ್ ವರ್ಮಾ ಮತ್ತು ಕೀರನ್ ಪೊಲಾರ್ಡ್ ಶೂನ್ಯ ಸುತ್ತಿ ನೆಲಕಚ್ಚಿದರು ಹಾಗೂ ರಮಣ್ ದೀಪ್ ಸಿಂಗ್ ಆಟ 6 ರನ್​​ಗೆ ಅಂತ್ಯವಾಯಿತು. ಹೀಗೆ 80 ರನ್​​ಗು ಮೊದಲೇ ಮುಂಬೈ ತನ್ನ 6 ವಿಕೆಟ್ ಕೈಚೆಲ್ಲಿತು. ಒಂದೆಡೆ ತಂಡದ ಪ್ರಮುಖ ಆಟಗಾರರು ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರುತ್ತಿದ್ದರೆ, ಮತ್ತೊಂದೆಡೆ ಸೂರ್ಯಕುಮಾರ್ ಯಾದವ್ ಒತ್ತಡದ ನಡುವೆಯೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ಏಳನೇ ವಿಕೆಟ್‌ಗೆ ಸೂರ್ಯಕುಮಾರ್ ಯಾದವ್ ಜತೆ ಕೈಜೋಡಿಸಿದ ಜಯದೇವ್ ಉನಾದ್ಕಟ್ ಸಮಯೋಚಿತ ಆಟವಾಡಿ ಬೆಂಬಲವನ್ನು ನೀಡಿದರು. ಈ ಜೋಡಿ 72 ರನ್‌ಗಳ ಅಮೂಲ್ಯವಾದ ಜೊತೆಯಾಟವನ್ನು ಆಡಿತು. ಜಯದೇವ್ ಉನಾದ್ಕತ್ ಅಜೇಯ 13 ರನ್ ಕಲೆಹಾಕಿದರೆ, ಸೂರ್ಯಕುಮಾರ್ ಯಾದವ್ 37 ಎಸೆತಗಳಲ್ಲಿ ಅಜೇಯ 68 ರನ್ (5 ಫೋರ್, 6 ಸಿಕ್ಸರ್) ಗಳಿಸಿ ಆರಂಭದಲ್ಲಿ ಮಿಂಚಿದ ಆರ್​ಸಿಬಿಗೆ ಕಂಟಕವಾದರು. ಪರಿಣಾಮ ಮುಂಬೈ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 151 ರನ್ ಕಲೆಹಾಕಿತು. ಬೆಂಗಳೂರು ಪರ ವನಿಂದು ಹಸರಂಗ ಮತ್ತು ಹರ್ಷಲ್ ಪಟೇಲ್ ತಲಾ 2 ವಿಕೆಟ್‍ ಪಡೆದರೆ, ಆಕಾಶ್ ದೀಪ್ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಗೆಲ್ಲಲು ಸಾಧಾರಣ ಸವಾಲು ಪಡೆದ ಆರ್‌ಸಿಬಿ ತಂಡವು ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ನಾಯಕ ಫಾ ಡುಪ್ಲೆಸಿಸ್‌ ಮತ್ತು ಅನುಜ್‌ ರಾವತ್‌ ಮೊದಲ ವಿಕೆಟಿಗೆ 8.1 ಓವರ್‌ಗಳಲ್ಲಿ 50 ರನ್‌ ಪೇರಿಸಿದರು. ಈ ಹಂತದಲ್ಲಿ 16 ರನ್‌ ಗಳಿಸಿದ ಪ್ಲೆಸಿಸ್‌ ಅವರ ವಿಕೆಟನ್ನು ಉನಾದ್ಕತ್‌ ಹಾರಿಸಿದರು. ನಂತರ ಶುರುವಾಗಿದ್ದು ವಿರಾಟ್ ಕೊಹ್ಲಿ-ರಾವತ್ ಜೊತೆಯಾಟ. ರೋಹಿತ್ ಪಡೆಯ ಆಲೋಚನೆಯನ್ನು ತಲೆಕೆಳಗಾಗಿಸಿದ ಇವರಿಬ್ಬರಿ ಭರ್ಜರಿ ಆಟವಾಡಿದರು. ಅದರಲ್ಲೂ ರಾವತ್ ಮುಂದೆ ಬಂದು ಸಿಕ್ಸ್ ಸಿಡಿಸಿ ಅಮೋಘ ಹೊಡೆತಗಳ ಮೂಲಕ ಗಮನ ಸೆಳೆದರು.

2ನೇ ವಿಕೆಟ್ ಜೊತೆಯಾಟದಲ್ಲಿ ಇವರು 80 ರನ್‌ ಸೇರಿಸಿದರು. 17ನೇ ಓವರ್‌ನಲ್ಲಿ ರನ್‌ಔಟ್ ಆಗುವ ಮುನ್ನ ಅನುಜ್ ಆರು ಸಿಕ್ಸರ್, ಎರಡು ಬೌಂಡರಿಗಳಿದ್ದ 66 ರನ್‌ಗಳನ್ನು ಗಳಿಸಿದರು. ತಮ್ಮನೈಜ್ಯ ಆಟವಾಡಿದ ವಿರಾಟ್ (48 ರನ್), ಅರ್ಧಶತಕದ ಅಂಚಿನಲ್ಲಿ ಎಡವಿದರು. ಕೊನೆಯಲ್ಲಿ ಕ್ರೀಸ್‌ನಲ್ಲಿದ್ದ ದಿನೇಶ್ ಕಾರ್ತಿಕ್ ಮತ್ತು ಈ ಟೂರ್ನಿಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್‌ವೆಲ್ ತಂಡವನ್ನು ಗೆಲುವಿನ ಗಡಿ ಮುಟ್ಟಿಸಿದರು. ಆರ್​ಸಿಬಿ 18.3 ಓವರ್​ನಲ್ಲೇ 152 ರನ್ ಚಚ್ಚಿ ಗೆಲುವಿನ ನಗೆ ಬೀರಿತು. ಅನುಜ್ ರಾವತ್ ಪಂದ್ಯಶ್ರೇಷ್ಠ ಬಾಜಿಕೊಂಡರು.

IPL 2022: ಹಳೆಯ ದಾಖಲೆ ಉಡೀಸ್ ಮಾಡಿದ ಯುವ ವೇಗಿ: ಹೊಸ ಇತಿಹಾಸ ಬರೆದ ಉಮ್ರಾನ್