ಬ್ಯಾಟಿಂಗ್‌ ಪಿಚ್​ನಲ್ಲೂ ಶೂನ್ಯಕ್ಕೆ ಔಟಾದ ಅರ್ಜುನ್ ತೆಂಡೂಲ್ಕರ್! ಒಂದಂಕಿಗೆ ಸುಸ್ತಾದ ಶತಕ ವೀರ ಅಗ್ನಿ

|

Updated on: Nov 07, 2024 | 5:50 PM

Ranji Trophy 2024: ಗೋವಾ ತಂಡದ ಪರ ರಣಜಿ ಟ್ರೋಫಿಯಲ್ಲಿ ಆಡುತ್ತಿರುವ ಅರ್ಜುನ್ ತೆಂಡೂಲ್ಕರ್ ಮಿಜೋರಾಂ ವಿರುದ್ಧದ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಔಟ್ ಆಗಿ ನಿರಾಶೆ ಮೂಡಿಸಿದ್ದಾರೆ. ಗೋವಾ ತಂಡವು 555 ರನ್ ಗಳಿಸಿದರೂ, ಅರ್ಜುನ್‌ರ ವೈಫಲ್ಯ ಗಮನ ಸೆಳೆದಿದೆ. ಮಿಜೋರಾಂನ ಅಗ್ನಿ ಚೋಪ್ರಾ ಕೂಡ ಕೇವಲ 1 ರನ್ ಗಳಿಸಿ ಔಟ್ ಆದರು.

ಬ್ಯಾಟಿಂಗ್‌ ಪಿಚ್​ನಲ್ಲೂ ಶೂನ್ಯಕ್ಕೆ ಔಟಾದ ಅರ್ಜುನ್ ತೆಂಡೂಲ್ಕರ್! ಒಂದಂಕಿಗೆ ಸುಸ್ತಾದ ಶತಕ ವೀರ ಅಗ್ನಿ
ಅಗ್ನಿ ಚೋಪ್ರಾ, ಅರ್ಜುನ್ ತೆಂಡೂಲ್ಕರ್
Follow us on

ತನ್ನ ಆಲ್‌ರೌಂಡರ್ ಪ್ರದರ್ಶನದ ಮೂಲಕ ಟೀಂ ಇಂಡಿಯಾದ ಕದ ತಟ್ಟಲು ಇನ್ನಿಲ್ಲದ ಕಸರತ್ತು ಮಾಡುತ್ತಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್​ಗೆ ಇದುವರೆಗೆ ಯಾವುದೇ ಯಶಸ್ಸು ಲಭಿಸಿಲ್ಲ. ಆದಾಗ್ಯೂ ತನ್ನ ಹೋರಾಟವನ್ನು ಮುಂದುವರಿಸಿರುವ ಅರ್ಜುನ್​ಗೆ ಯಾವುದು ಅಂದುಕೊಂಡಂತೆ ಸಾಗುತ್ತಿಲ್ಲ. ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಗೋವಾ ತಂಡದ ಪರ ಕಣಕ್ಕಿಳಿಯುತ್ತಿರುವ ಅರ್ಜುನ್ ಇದುವರೆಗೆ ಯಾವುದೇ ಗಮನಾರ್ಹ ಪ್ರದರ್ಶನ ನೀಡಿಲ್ಲ. ಇದೀಗ ಮಿಜೋರಾಂ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲೂ ದಯನೀಯ ವೈಫಲ್ಯ ಅನುಭವಿಸಿರುವ ಅರ್ಜುನ್ ತೆಂಡೂಲ್ಕರ್ ಮೊದಲ ಎಸೆತದಲ್ಲೇ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದ್ದಾರೆ. ಇತ್ತ ರಣಜಿ ಸೀಸನ್​ನಲ್ಲಿ ಶತಕಗಳ ಸರಮಾಲೆ ಕಟ್ಟಿದ ಮಿಜೋರಾಂ ಬ್ಯಾಟ್ಸ್‌ಮನ್ ಅಗ್ನಿ ಚೋಪ್ರಾ ಕೂಡ ಗೋವಾ ಬೌಲರ್​ಗಳ ವಿರುದ್ಧ 1 ರನ್​ಗಳಿಗೆ ಸುಸ್ತಾಗಿದ್ದಾರೆ.

ಸೊನ್ನೆ ಸುತ್ತಿದ ಅರ್ಜುನ್

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗೋಪಾ ಪರ ಅರ್ಜುನ್ ತೆಂಡೂಲ್ಕರ್ 9ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದರು. ಈ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್‌ಗೆ ಉತ್ತಮವಾಗಿದ್ದರಿಂದ ಅರ್ಜುನ್ ಬಿಗ್ ಇನ್ನಿಂಗ್ಸ್ ಆಡುವ ನಿರೀಕ್ಷೆ ಇತ್ತು. ಇದಕ್ಕೆ ಪೂರಕವಾಗಿ ಗೋವಾ ತಂಡದ ಸ್ನೇಹಲ್ ಕೌಠಂಕರ್ ದ್ವಿಶತಕದ ಇನ್ನಿಂಗ್ಸ್ ಕೂಡ ಆಡಿದ್ದರು. ಆದರೆ ಕ್ರೀಸ್​ಗೆ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ಅರ್ಜುನ್, ಮೋಹಿತ್ ಜಾಂಗ್ರಾ ಅವರ ಮೊದಲ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.

555 ರನ್ ಕಲೆಹಾಕಿದ ಗೋವಾ

ಅರ್ಜುನ್ ತಂಡೂಲ್ಕರ್ ವೈಫಲ್ಯದ ನಡುವೆಯೂ ಗೋವಾ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 555 ರನ್‌ಗಳ ಬೃಹತ್ ಸ್ಕೋರ್ ಮಾಡಿತು. ತಂಡದ ಪರ ಮಂಥನ್ ಖುತ್ಕರ್ ಅವರು 95 ರನ್‌ಗಳ ಇನ್ನಿಂಗ್ಸ್‌ ಆಡಿದರೆ, ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಸ್ನೇಹಲ್ ಖುತಾಂಕರ್ 342 ಎಸೆತಗಳಲ್ಲಿ 250 ರನ್​ಗಳ ಇನ್ನಿಂಗ್ಸ್ ಆಡಿದರು. ಮಿಜೋರಾಂ ಪರ ಕಾರಿಯಪ್ಪ ಮತ್ತು ಜಾಂಗ್ರಾ ತಲಾ 3 ವಿಕೆಟ್ ಪಡೆದರು.

1 ರನ್​ಗಳಿಗೆ ಸುಸ್ತಾದ ಶತಕ ವೀರ

ಗೋವಾ ತಂಡವನ್ನು 555 ರನ್​ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಮಿಜೋರಾಂ ಪರ ಇಡೀ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶಿಸುತ್ತಿರುವ ಅಗ್ನಿ ಚೋಪ್ರಾ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಇದಕ್ಕೆ ಕಾರಣವೂ ಇದ್ದು, ಅಗ್ನಿ ಚೋಪ್ರಾ ಕಳೆದ 8 ಪಂದ್ಯಗಳಲ್ಲಿ 7 ಶತಕಗಳನ್ನು ಬಾರಿಸಿದ್ದು, ಅವರ ಸರಾಸರಿ 99 ಕ್ಕಿಂತ ಹೆಚ್ಚಿದೆ. ಹೀಗಾಗಿ ಈ ಪಂದ್ಯದಲ್ಲೂ ಶತಕದ ಇನ್ನಿಂಗ್ಸ್ ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಅಗ್ನಿ ಚೋಪ್ರಾ ಅವರ ಕಡೆಯಿಂದ ಸಿಕ್ಕಿದ್ದು ಕೇವಲ 1 ರನ್​ಗಳ ಇನ್ನಿಂಗ್ಸ್. ತಮ್ಮ ಇನ್ನಿಂಗ್ಸ್‌ನಲ್ಲಿ 6 ಎಸೆತಗಳನ್ನು ಆಡಿದ ಅಗ್ನಿ, ಮೋಹಿತ್ ರೆಡ್ಕರ್ ಅವರ ಬೌಲಿಂಗ್‌ನಲ್ಲಿ ಔಟಾದರು. ಅಗ್ನಿ ಚೋಪ್ರಾ ವಿಕೆಟ್ ಪತನದ ಬಳಿಕ ಮಿಜೋರಾಂ ತಂಡದ ಪೆವಿಲಿಯನ್ ಪರೇಡ್ ಆರಂಭವಾಗಿದ್ದು, ದಿನದಾಟದಂತ್ಯಕ್ಕೆ ಮಿಜೋರಾಂ ತಂಡ 6 ವಿಕೆಟ್ ಕಳೆದುಕೊಂಡು 122 ರನ್ ಬಾರಿಸಿದೆ. ಬ್ಯಾಟಿಂಗ್​ನಲ್ಲಿ ಶೂನ್ಯ ಸುತ್ತಿದ್ದ ಅರ್ಜುನ್ ತೆಂಡೂಲ್ಕರ್ ಬೌಲಿಂಗ್‌ನಲ್ಲಿ ಮಿಂಚಿದ್ದು, ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ