
ಬೆಂಗಳೂರು (ಜೂ. 03): ಐಪಿಎಲ್ 2025 ರ (IPL 2025 Final) ಅಂತಿಮ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ವೇಗಿ ಅರ್ಶ್‌ದೀಪ್ ಸಿಂಗ್ ತಮ್ಮ ಮಾರಕ ಬೌಲಿಂಗ್ ಮೂಲಕ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಮುಖ್ಯವಾಗಿ ಇನ್ನಿಂಗ್ಸ್ನ ಕೊನೆಯ ಓವರ್ನಲ್ಲಿ, ಅರ್ಶ್ದೀಪ್ ಕೇವಲ 3 ರನ್ ಗಳಿಗೆ 3 ವಿಕೆಟ್ ಕಬಳಿಸಿ ಮಿಂಚಿನ ಬೌಲಿಂಗ್ ಮಾಡಿದರು. ಐಪಿಎಲ್ ಫೈನಲ್ ನಲ್ಲಿ ಅರ್ಶ್‌ದೀಪ್ ಕೊನೆಯ ಓವರ್ ಎಸೆದ ರೀತಿ ಅದ್ಭುತವಾಗಿತ್ತು. ಇವರ ಬೌಲಿಂಗ್ ದಾಳಿಯಿಂದಾಗಿ ಆರ್ಸಿಬಿ ತಂಡ 200 ರನ್ ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಆರ್ಸಿಬಿ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು.
ಪಂಜಾಬ್ ಕಿಂಗ್ಸ್ ಪರ ಕೊನೆಯ ಓವರ್ ಬೌಲ್ ಮಾಡಲು ಬಂದ ಅರ್ಶ್‌ದೀಪ್ ಸಿಂಗ್ ಮೊದಲು ರೊಮಾರಿಯೊ ಶೆಫರ್ಡ್ ಅವರನ್ನು ಔಟ್ ಮಾಡಿದರು. ರೊಮಾರಿಯೊ ಹಿಂದಿನ ಓವರ್ನಲ್ಲಿ ಅಪಾಯಕಾರಿಯಾಗಿ ಕಂಡುಬಂದಿದ್ದರು. ಆದರೆ ಅರ್ಶ್‌ದೀಪ್ ತಮ್ಮ ನಿಖರವಾದ ಬೌಲಿಂಗ್ ಮೂಲಕ ಅವರನ್ನು ಎಲ್ ಬಿಡಬ್ಲ್ಯೂ ಮಾಡುವ ಮೂಲಕ ತಂಡಕ್ಕೆ ನೆರವಾದರು. ಇದಾದ ನಂತರ, ಭುವನೇಶ್ವರ್ ಕುಮಾರ್ 1 ರನ್ ಗಳಿಸುವ ಮೂಲಕ ಕ್ರೀಸ್ ಬದಲಾಯಿಸಿದರು ಮತ್ತು ಕೃನಾಲ್ ಪಾಂಡ್ಯಗೆ ಸ್ಟ್ರೈಕ್ ನೀಡಿದರು, ಆದರೆ ಮುಂದಿನ ಎಸೆತದಲ್ಲಿ ಅರ್ಶ್‌ದೀಪ್ ಕೃನಾಲ್ ವಿಕೆಟ್ ಪಡೆದರು.
ನಂತರ ಹೊಸ ಬ್ಯಾಟ್ಸ್‌ಮನ್ ಯಶ್ ದಯಾಳ್ ಕೂಡ ಒಂದು ರನ್ ತೆಗೆದುಕೊಂಡು ಭುವನೇಶ್ವರ್‌ಗೆ ಸ್ಟ್ರೈಕ್ ನೀಡಿದರು. ಈ ಸಂದರ್ಭ ಮತ್ತೊಮ್ಮೆ ಅರ್ಶ್‌ದೀಪ್ ಕೊನೆಯ ಎಸೆತದಲ್ಲಿ ವಿಕೆಟ್ ಪಡೆದು ತಮ್ಮ ಓವರ್ ಅನ್ನು ಅದ್ಭುತವಾಗಿ ಕೊನೆಗೊಳಿಸಿದರು. ಈ ಓವರ್‌ಗೆ ಮೊದಲು, ಅರ್ಶ್ದೀಪ್ ಒಂದೇ ಒಂದು ವಿಕೆಟ್ ಪಡೆದಿರಲಿಲ್ಲ.
RCB vs PBKS, IPL 2025: ಐಪಿಎಲ್ ಫೈನಲ್ನಲ್ಲಿ ಸಿಎಸ್ಕೆ ದಾಖಲೆ ಪುಡಿಗಟ್ಟಿ ಇತಿಹಾಸ ನಿರ್ಮಿಸಿದ ಆರ್ಸಿಬಿ
ಪಂಜಾಬ್ ಕಿಂಗ್ಸ್ ಪರ ಕೈಲ್ ಜೇಮಿಸನ್ ಕೂಡ ಬೌಲಿಂಗ್ ನಲ್ಲಿ ಅದ್ಭುತ ಆಟ ಪ್ರದರ್ಶಿಸಿದರು. ತಂಡದ ಪರ ಕೈಲ್ ಜೇಮಿಸನ್ 4 ಓವರ್ ಗಳಲ್ಲಿ 48 ರನ್ ನೀಡಿದರೂ 3 ಪ್ರಮುಖ ವಿಕೆಟ್ ಪಡೆದರು. ಅರ್ಶ್‌ದೀಪ್ ಸಿಂಗ್ ಮತ್ತು ಕೈಲ್ ಜೇಮಿಸನ್ ಹೊರತುಪಡಿಸಿ, ಪಂಜಾಬ್ ಕಿಂಗ್ಸ್ ಪರ ಯುಜ್ವೇಂದ್ರ ಚಾಹಲ್, ವಿಜಯ್ ಕುಮಾರ್ ಮತ್ತು ಅಜ್ಮತುಲ್ಲಾ ತಲಾ ಒಂದು ವಿಕೆಟ್ ಪಡೆದರು.
ಪಂಜಾಬ್ ಕಿಂಗ್ಸ್ ವಿರುದ್ಧದ ಅಂತಿಮ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆರ್ ಸಿಬಿ ಪರ ಗರಿಷ್ಠ ಸ್ಕೋರರ್ ಆಗಿದ್ದರು. ಓಪನರ್ ಆಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 35 ಎಸೆತಗಳಲ್ಲಿ 43 ರನ್ ಗಳಿಸಿದರು. ಅವರ ಇನ್ನಿಂಗ್ಸ್ ನಲ್ಲಿ ಮೂರು ಬೌಂಡರಿಗಳು ಮೂಡಿಬಂತು. ಇದರ ಹೊರತಾಗಿ, ನಾಯಕ ರಜತ್ ಪಾಟಿದಾರ್ 26 ರನ್ ಗಳ ಇನ್ನಿಂಗ್ಸ್ ಆಡಿದರೆ, ಲಿಯಾಮ್ ಲಿವಿಂಗ್ ಸ್ಟೋನ್ 25 ರನ್ ಗಳಿಸಿದರು. ಜಿತೇಶ್ ಶರ್ಮಾ 24 ರನ್ ಗಳ ಕೊಡುಗೆ ನೀಡಿದರು. ಅಂತಿಮವಾಗಿ ಬೆಂಗಳೂರು ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ