ಚೊಚ್ಚಲ ಪಂದ್ಯದಲ್ಲೇ ಗೆಲುವಿನ ಶತಕ ಸಿಡಿಸಿದ ಅರ್ಶಿನ್; ಪಂಜಾಬ್​ಗೆ ಸೋಲಿನ ಆಘಾತ

|

Updated on: Jan 11, 2025 | 6:45 PM

Vijay Hazare Trophy 2025: ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ಬರೋಡಾವನ್ನು 5 ರನ್‌ಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿತು. ಮತ್ತೊಂದೆಡೆ, 19 ವರ್ಷದ ಅರ್ಶಿನ್ ಕುಲಕರ್ಣಿಯ ಶತಕದ ನೆರವಿನಿಂದ ಮಹಾರಾಷ್ಟ್ರ ಪಂಜಾಬ್‌ನ್ನು 70 ರನ್‌ಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಿತು. ಕುಲಕರ್ಣಿ ಚೊಚ್ಚಲ ಪಂದ್ಯದಲ್ಲೇ 107 ರನ್ ಗಳಿಸಿದ್ದು ವಿಶೇಷ.

ಚೊಚ್ಚಲ ಪಂದ್ಯದಲ್ಲೇ ಗೆಲುವಿನ ಶತಕ ಸಿಡಿಸಿದ ಅರ್ಶಿನ್; ಪಂಜಾಬ್​ಗೆ ಸೋಲಿನ ಆಘಾತ
ಅರ್ಶಿನ್ ಕುಲಕರ್ಣಿ
Follow us on

ವಿಜಯ್ ಹಜಾರೆ ಟ್ರೋಫಿಯಲ್ಲಿ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯುತ್ತಿದ್ದು, ಇಂದು ನಡೆದ ಎರಡು ಪಂದ್ಯಗಳ ಫಲಿತಾಂಶ ಹೊರಬಿದ್ದಿದೆ. ಆ ಪ್ರಕಾರ, ಬರೋಡಾ ತಂಡವನ್ನು 5 ರನ್​ಗಳಿಂದ ಮಣಿಸಿದ ಕರ್ನಾಟಕ ತಂಡ ಸೆಮಿಫೈನಲ್ ಪ್ರವೇಶಿಸಿದರೆ ಇತ್ತ ಪಂಜಾಬ್ ತಂಡವನ್ನು 70 ರನ್​ಗಳಿಂದ ಮಣಿಸಿದ ಮಹಾರಾಷ್ಟ್ರ ಕೂಡ ಸೆಮಿಫೈನಲ್​ಗೆ ಟಿಕೆಟ್ ಪಡೆದುಕೊಂಡಿದೆ. ಮಹಾರಾಷ್ಟ್ರ ಸೆಮಿಫೈನಲ್ ಪ್ರವೇಶಿಸುವಲ್ಲಿ ಗೆಲುವಿನ ಶತಕ ಸಿಡಿಸಿದ 19 ವರ್ಷದ ಅರ್ಶಿನ್ ಕುಲಕರ್ಣಿ ತಮ್ಮ ಪದಾರ್ಪಣೆ ಪಂದ್ಯದಲ್ಲೇ ಎಲ್ಲರ ಗಮನ ಸೆಳೆದಿದ್ದಾರೆ. ಮಹಾರಾಷ್ಟ್ರದ ಈ ಯುವ ಬ್ಯಾಟ್ಸ್‌ಮನ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ತಂಡವನ್ನು ಉತ್ತಮ ಸ್ಕೋರ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಚೊಚ್ಚಲ ಪಂದ್ಯದಲ್ಲೇ 107 ರನ್

ಮಹಾರಾಷ್ಟ್ರ ಮತ್ತು ಪಂಜಾಬ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಅರ್ಶಿನ್ ನಿಧಾನವಾಗಿ ಇನ್ನಿಂಗ್ಸ್ ಆರಂಭಿಸಿದರೂ ಶತಕ ಬಾರಿಸುವಲ್ಲಿ ಯಶಸ್ವಿಯಾದರು. 129 ಎಸೆತಗಳಲ್ಲಿ ಶತಕ ಪೂರೈಸಿದ ಅವರು ಒಟ್ಟು 137 ಎಸೆತಗಳಲ್ಲಿ 107 ರನ್ ಕಲೆಹಾಕಿದರು. ಈ ಶತಕದ ಇನ್ನಿಂಗ್ಸ್‌ನಲ್ಲಿ ಅವರು 78 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ 14 ಬೌಂಡರಿಗಳನ್ನು ಬಾರಿಸಿದರು. ಅವರ ಈ ಇನಿಂಗ್ಸ್‌ನಿಂದಾಗಿ ಮಹಾರಾಷ್ಟ್ರ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 275 ರನ್ ಗಳಿಸಿತು.

14 ಬೌಂಡರಿ, ಒಂದೇ ಒಂದು ಸಿಕ್ಸರ್ ಇಲ್ಲ

ಕುಲಕರ್ಣಿ ಐಪಿಎಲ್‌ನಲ್ಲಿ ಎರಡು ಪಂದ್ಯಗಳನ್ನು ಆಡಿದ್ದಾರೆ. ಆದರೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ (ಒಡಿಐ) ಆಡುವ ಅವಕಾಶ ಸಿಕ್ಕಿರುವುದು ಇದೇ ಮೊದಲು. ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡ ಅವರು ಕ್ವಾರ್ಟರ್ ಫೈನಲ್‌ನಂತಹ ಮಹತ್ವದ ಪಂದ್ಯದಲ್ಲಿ ಶತಕ ಬಾರಿಸಿದರು. ಈ ಅವಧಿಯಲ್ಲಿ ಅವರ ಬ್ಯಾಟ್‌ನಿಂದ 14 ಬೌಂಡರಿಗಳು ಬಂದವು ಆದರೆ ಅದರಲ್ಲಿ ಒಂದೇ ಒಂದು ಸಿಕ್ಸರ್ ಕೂಡ ಇರಲಿಲ್ಲ.

ಗಾಯಕ್ವಾಡ್-ಅಭಿಷೇಕ್ ವಿಫಲ

ಕುಲಕರ್ಣಿ ಚೊಚ್ಚಲ ಪಂದ್ಯದಲ್ಲೇ ಅಮೋಘ ಶತಕ ಬಾರಿಸಿದರೆ, ಟೀಂ ಇಂಡಿಯಾ ಪರ ಆಡಿರುವ ರುತುರಾಜ್ ಗಾಯಕ್ವಾಡ್ ಮತ್ತು ಅಭಿಷೇಕ್ ಶರ್ಮಾ ಅವರ ಬ್ಯಾಟ್‌ಗಳು ಮೌನವಾಗಿದ್ದವು. ತಂಡದ ನಾಯಕ ರುತುರಾಜ್ ಕೇವಲ ಐದು ಎಸೆತಗಳನ್ನು ಎದುರಿಸಿ ಕೇವಲ ಐದು ರನ್ ಗಳಿಸಿ ಔಟಾದರೆ, ಇತ್ತ ಪಂಜಾಬ್ ತಂಡದ ನಾಯಕ ಅಭಿಷೇಕ್ ಶರ್ಮಾ ಕೂಡ 16 ಎಸೆತಗಳಲ್ಲಿ 19 ರನ್ ಗಳಿಸಿ ಪೆವಿಲಿಯನ್‌ ಸೇರಿಕೊಂಡರು.

ಪಂಜಾಬ್​ಗೆ ಬೃಹತ್ ಸೋಲು

ಮಹಾರಾಷ್ಟ್ರ ನೀಡಿದ 275 ರನ್​ಗಳ ಗುರಿ ಬೆನ್ನಟ್ಟಿದ ಪಂಜಾಬ್ ತಂಡ ಪೂರ್ಣ 50 ಓವರ್​ಗಳನ್ನು ಆಡಲು ಸಾಧ್ಯವಾಗದೆ 44.4 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 205 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ತಂಡದ ಪರ ಅನ್ಮೋಲ್‌ಪ್ರೀತ್ ಸಿಂಗ್ 48 ರನ್ ಹಾಗೂ ವೇಗಿ ಅರ್ಷದೀಪ್ ಸಿಂಗ್ 49 ರನ್​ಗಳ ಹೋರಾಟದ ಇನ್ನಿಂಗ್ಸ್ ಆಡಿದ್ದನ್ನು ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬರಲಿಲ್ಲ. ಹೀಗಾಗಿ ತಂಡಕ್ಕೆ ಗೆಲುವಿನ ಸವಾಲಿದ್ದರೂ ಅದನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ