Ashes 2021: ಅಡಿಲೇಡ್ ಟೆಸ್ಟ್ ಗೆದ್ದ ಕಾಂಗರೂಗಳು; ಇಂಗ್ಲೆಂಡ್ ಮಣಿಸಿ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ ಆಸ್ಟ್ರೇಲಿಯಾ

Ashes 2021: ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 275 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 5 ಟೆಸ್ಟ್‌ಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

Ashes 2021: ಅಡಿಲೇಡ್ ಟೆಸ್ಟ್ ಗೆದ್ದ ಕಾಂಗರೂಗಳು; ಇಂಗ್ಲೆಂಡ್ ಮಣಿಸಿ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ತಂಡ
Edited By:

Updated on: Dec 20, 2021 | 4:19 PM

ಬ್ರಿಸ್ಬೇನ್ ನಂತರ ಆಸ್ಟ್ರೇಲಿಯ ಅಡಿಲೇಡ್ ಟೆಸ್ಟ್‌ನಲ್ಲೂ ಗೆಲುವು ಸಾಧಿಸಿದೆ. ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 275 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 5 ಟೆಸ್ಟ್‌ಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಅಂದರೆ, ಸರಣಿಯಲ್ಲಿ ಆಸೀಸ್ ತನ್ನ ಹಿಡಿತವನ್ನು ಬಹುತೇಕ ಬಿಗಿಗೊಳಿಸಿದೆ. ಆತಿಥೇಯರು ಈ ಹಿಂದೆ ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಅತಿಥಿಗಳ ವಿರುದ್ಧ 9 ವಿಕೆಟ್‌ಗಳಿಂದ ಗೆದ್ದಿದ್ದರು. ಅಡಿಲೇಡ್‌ನಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಡೇ-ನೈಟ್ ಟೆಸ್ಟ್‌ನಲ್ಲಿ ಶೇ.100 ಗೆಲುವಿನ ದಾಖಲೆಯನ್ನೂ ಕಾಯ್ದುಕೊಂಡಿದೆ.

ಅಡಿಲೇಡ್ ಟೆಸ್ಟ್ ಗೆಲ್ಲಲು ಆಸ್ಟ್ರೇಲಿಯಾ ಇಂಗ್ಲೆಂಡ್ ಎದುರು 468 ರನ್​ಗಳ ಗುರಿಯನ್ನು ನೀಡಿತ್ತು. ಆದರೆ, ಇಂಗ್ಲೆಂಡ್ ತಂಡಕ್ಕೆ ಆ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 192 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ವೇಗದ ಬೌಲರ್ ಝೈ ರಿಚರ್ಡ್‌ಸನ್ 42 ರನ್‌ಗಳಿಗೆ 5 ವಿಕೆಟ್ ಪಡೆದರು. ಮಿಚೆಲ್ ಸ್ಟಾರ್ಕ್ ಮತ್ತು ನಾಥನ್ ಲಿಯಾನ್ ತಲಾ 2 ವಿಕೆಟ್ ಪಡೆದರು. ಮೈಕಲ್ ನೇಸರ್ ಒಂದು ವಿಕೆಟ್ ಪಡೆದರು. ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಪರ ಯಾವುದೇ ಬ್ಯಾಟ್ಸ್‌ಮನ್ ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ. ಕ್ರಿಸ್ ವೋಕ್ಸ್ 44 ರನ್ ಗಳಿಸಿದರು. ವಿಕೆಟ್ ಕೀಪರ್ ಜೋಸ್ ಬಟ್ಲರ್ 207 ಎಸೆತಗಳಲ್ಲಿ 26 ರನ್ ಗಳಿಸಿದರು.

ಬಟ್ಲರ್-ವೋಕ್ಸ್ ಸೋಲನ್ನು ತಪ್ಪಿಸಲು ಪ್ರಯತ್ನಿಸಿದರು
5ನೇ ದಿನದ ಆಟದಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 6 ವಿಕೆಟ್‌ಗಳ ಅಗತ್ಯವಿತ್ತು. ಆಲಿ ಪೋಪ್ ಮತ್ತು ಬೆನ್ ಸ್ಟೋಕ್ಸ್ ಉತ್ತಮ ಇನ್ನಿಂಗ್ಸ್ ಕಟ್ಟುತ್ತಾರೆ ಎಂದು ಇಂಗ್ಲೆಂಡ್ ಆಶಿಸಿತು ಆದರೆ ಅದು ಸಂಭವಿಸಲಿಲ್ಲ. ಸ್ಟಾರ್ಕ್ ಪೋಪ್‌ಗೆ ಪೆವಿಲಿಯನ್ ಹಾದಿಯನ್ನು ತೋರಿಸಿದರು. ಅದರ ನಂತರ ನಾಥನ್ ಲಿಯಾನ್ ಬೆನ್ ಸ್ಟೋಕ್ಸ್ ಅವರನ್ನು ಔಟ್ ಮಾಡಿ ಇಂಗ್ಲೆಂಡ್ ಆಸೆಗೆ ತಣ್ಣೀರೆರಚಿದರು. ಆದಾಗ್ಯೂ, ಈ ನಂತರ ವಿಕೆಟ್ ಕೀಪರ್ ಜೋಸ್ ಬಟ್ಲರ್ ಮತ್ತು ಕ್ರಿಸ್ ವೋಕ್ಸ್ ಕ್ರೀಸ್‌ನಲ್ಲಿ ಕೊಂಚ ಸಮಯ ಜಾಂಡ ಊರಿದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಕೇವಲ 61 ರನ್‌ಗಳನ್ನು ಸೇರಿಸಲಷ್ಟೇ ಶಕ್ತರಾದರು.

ವೇಗದ ಬೌಲರ್ ಝೈ ರಿಚರ್ಡ್ಸನ್ ಈ ಜೋಡಿಯನ್ನು ಬೇರ್ಪಡಿಸಿದರು. ರಿಚರ್ಡ್ಸನ್ ಕ್ರಿಸ್ ವೋಕ್ಸ್ ಅವರನ್ನು ಬೌಲ್ಡ್ ಮಾಡಿದರು. ನಂತರ ನಾಥನ್ ಲಿಯಾನ್ ಒಲಿ ರಾಬಿನ್ಸನ್ ಅವರ ವಿಕೆಟ್ ಪಡೆದರು. 110ನೇ ಓವರ್‌ನಲ್ಲಿ ಜಾಯ್ ರಿಚರ್ಡ್ಸನ್ ಕೂಡ ಜೋಸ್ ಬಟ್ಲರ್ ಅವರನ್ನು ಔಟ್ ಮಾಡಿದರು. ಬಟ್ಲರ್ ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಹಿಟ್ ವಿಕೆಟ್ ಔಟ್ ಆದರು. ಕೊನೆಯಲ್ಲಿ, ರಿಚರ್ಡ್​ಸನ್ ಜೇಮ್ಸ್ ಆಂಡರ್ಸನ್ ಅವರನ್ನು ಔಟ್ ಮಾಡಿ ತಂಡಕ್ಕೆ ಮತ್ತೊಂದು ದೊಡ್ಡ ಜಯವನ್ನು ನೀಡಿದರು.

Published On - 4:01 pm, Mon, 20 December 21