Ashes 2021: ಸಿಡ್ನಿ ಟೆಸ್ಟ್ ಡ್ರಾದಲ್ಲಿ ಅಂತ್ಯ; ಕಾಂಗರೂಗಳ ವೈಟ್​ ವಾಶ್ ಕನಸಿಗೆ ನೀರೆರಚಿದ ಆಂಗ್ಲರು

| Updated By: ಪೃಥ್ವಿಶಂಕರ

Updated on: Jan 09, 2022 | 2:46 PM

Ashes 2021: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ (Australia vs England) ನಡುವಿನ ನಾಲ್ಕನೇ ಸಿಡ್ನಿ (Sydney Test) ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.

Ashes 2021: ಸಿಡ್ನಿ ಟೆಸ್ಟ್ ಡ್ರಾದಲ್ಲಿ ಅಂತ್ಯ; ಕಾಂಗರೂಗಳ ವೈಟ್​ ವಾಶ್ ಕನಸಿಗೆ ನೀರೆರಚಿದ ಆಂಗ್ಲರು
ಆಸ್ಟ್ರೇಲಿಯಾ Vs ಇಂಗ್ಲೆಂಡ್
Follow us on

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ (Australia vs England) ನಡುವಿನ ನಾಲ್ಕನೇ ಸಿಡ್ನಿ (Sydney Test) ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಆಸ್ಟ್ರೇಲಿಯಾ 388 ರನ್‌ಗಳ ಬೃಹತ್ ಗುರಿ ನೀಡಿತ್ತು. ಈ ಟೆಸ್ಟ್‌ನಲ್ಲಿ ಗೆಲ್ಲಲು ಆಸ್ಟ್ರೇಲಿಯಾ ಕೊನೆಯ ದಿನ ಇಂಗ್ಲೆಂಡ್‌ನ 10 ವಿಕೆಟ್‌ಗಳನ್ನು ಕಬಳಿಸಬೇಕಿತ್ತು. ಆದರೆ, ಆತಿಥೇಯರು 10 ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗಲಿಲ್ಲ, ಅಥವಾ ಅತಿಥಿಗಳಿಂದ 388 ರನ್‌ಗಳ ಸ್ಕೋರ್ ಬೆನ್ನಟ್ಟಲಾಗಲಿಲ್ಲ. ಹೀಗಾಗಿ ಫಲಿತಾಂಶವು ಡ್ರಾದಲ್ಲಿ ಕೊನೆಗೊಂಡಿತು. ಪಂದ್ಯ ಡ್ರಾ ಆದ ನಂತರ ಇದೀಗ ಇಂಗ್ಲೆಂಡ್ ತಂಡವನ್ನು (Ashes Series) ಆಸ್ಟ್ರೇಲಿಯಾ ವೈಟ್ ವಾಶ್ ಮಾಡುವ ಆಸೆಯೂ ಅಳಿಸಿ ಹೋಗಿದೆ.

ಬ್ರಿಸ್ಬೇನ್, ಅಡಿಲೇಡ್ ಮತ್ತು ಮೆಲ್ಬೋರ್ನ್‌ನಲ್ಲಿ ನಡೆದ ಇಂಗ್ಲೆಂಡ್‌ನಿಂದ ಸರಣಿಯ ಎಲ್ಲಾ ಮೂರು ಆರಂಭಿಕ ಟೆಸ್ಟ್‌ಗಳನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತು. ಅದೇ ರೀತಿ ಸಿಡ್ನಿಯಲ್ಲಿಯೂ ಇಂಗ್ಲೆಂಡ್ ತಂಡವನ್ನು ಸೋಲಿಸುವುದು ಅವರ ಪ್ರಯತ್ನವಾಗಿತ್ತು. ಆದರೆ, ಇಂಗ್ಲೆಂಡ್‌ನ ಪ್ರತಿಭೆಗಳ ಅದಮ್ಯ ಉದ್ದೇಶಗಳು ಅವರ ಗೆಲುವಿನ ಭರವಸೆಯನ್ನು ಕೊಚ್ಚಿಕೊಂಡು ಹೋಯಿತು. ಈ ಟೆಸ್ಟ್‌ನಲ್ಲಿ ಆಸ್ಟ್ರೇಲಿಯವು ಇಂಗ್ಲೆಂಡ್‌ನ ಮುಂದೆ 388 ರನ್‌ಗಳ ಗುರಿಯನ್ನು ನೀಡಿತ್ತು, ಅದನ್ನು ಬೆನ್ನಟ್ಟಿದ ಪ್ರವಾಸಿ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 9 ವಿಕೆಟ್‌ಗೆ 270 ರನ್ ಗಳಿಸಿತು.

ಸಿಡ್ನಿ ಟೆಸ್ಟ್ ಕಥೆ
ಟೆಸ್ಟ್ ಪಂದ್ಯದಲ್ಲಿ, ಆತಿಥೇಯ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿತು ಮತ್ತು ಉಸ್ಮಾನ್ ಖವಾಜಾ ಅವರ 137 ರನ್‌ಗಳ ನೆರವಿನಿಂದ 8 ವಿಕೆಟ್‌ಗೆ 416 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕೆ ಉತ್ತರವಾಗಿ, ಜಾನಿ ಬೈರ್‌ಸ್ಟೋವ್ ಅವರ ಶತಕ ಮತ್ತು ಬೆನ್ ಸ್ಟೋಕ್ಸ್ ಅವರ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 294 ರನ್ ಗಳಿಸಿತು. ಈ ಮೂಲಕ ಆಸ್ಟ್ರೇಲಿಯಾ 122 ರನ್‌ಗಳ ಮುನ್ನಡೆ ಸಾಧಿಸಿತು. ನಂತರ ಎರಡನೇ ಇನಿಂಗ್ಸ್​ನಲ್ಲಿ 6 ವಿಕೆಟ್​ಗೆ 265 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಆಸ್ಟ್ರೇಲಿಯಾ ಪರ ಉಸ್ಮಾನ್ ಖವಾಜಾ ಮತ್ತೊಮ್ಮೆ ಶತಕ ಬಾರಿಸಿದರು. ಈ ಮೂಲಕ ಆತಿಥೇಯರು ಒಟ್ಟು 387 ರನ್‌ಗಳ ಮುನ್ನಡೆ ಸಾಧಿಸಿದ್ದು, ಅದನ್ನು ಮೀರಿಸಲು ಇಂಗ್ಲೆಂಡ್ 388 ರನ್ ಗಳಿಸಬೇಕಿತ್ತು.

ಆಸ್ಟ್ರೇಲಿಯಕ್ಕೆ ಇಂಗ್ಲೆಂಡ್‌ನ ಕೊನೆಯ ವಿಕೆಟ್‌ ಬೀಳಿಸಲು ಸಾಧ್ಯವಾಗಲಿಲ್ಲ
ಟೆಸ್ಟ್ ಪಂದ್ಯದ ಕೊನೆಯ ದಿನ ಇಂಗ್ಲೆಂಡ್ ಗೆಲುವಿಗೆ ಆಸ್ಟ್ರೇಲಿಯಾ 10 ವಿಕೆಟ್ ಕಬಳಿಸಬೇಕಿತ್ತು. ಆದರೆ, ಸಿಡ್ನಿಯ ಹವಾಮಾನವು ಅವರ ಹಾದಿಗೆ ಅಡ್ಡಿಯಾಯಿತು. 5ನೇ ದಿನದಾಟದಲ್ಲಿ ಮಳೆಯಿಂದಾಗಿ ಆಟ ಸ್ಥಗಿತಗೊಳ್ಳುವ ಮುನ್ನವೇ ಆಸ್ಟ್ರೇಲಿಯಾ ಇಂಗ್ಲೆಂಡ್‌ನ 3 ವಿಕೆಟ್‌ಗಳನ್ನು ಉರುಳಿಸಿತ್ತು. ಮಳೆ ನಿಂತಾಗ ಆಟ ಆರಂಭವಾದಾಗ ಇನ್ನೂ 6 ವಿಕೆಟ್‌ಗಳು ಉರುಳಿದವು. ಆದರೆ ಆಸೀಸ್​ಗೆ ಇಂಗ್ಲೆಂಡ್​ನ ಕೊನೆಯ ವಿಕೆಟ್ ಉರುಳಿಸಲು ಸಾಧ್ಯವಾಗಲಿಲ್ಲ. ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ ಉಸ್ಮಾನ್ ಖವಾಜ ಡ್ರಾಗೊಂಡ ಸಿಡ್ನಿ ಟೆಸ್ಟ್‌ನ ಹೀರೋ ಆಗಿ ಆಯ್ಕೆಯಾದರು.