Ashes 2023: ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಆ್ಯಶಸ್ ಸರಣಿಯ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes) ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದ ಕೊನೆಯ ದಿನದಾಟದಲ್ಲಿ 257 ರನ್ಗಳ ಟಾರ್ಗೆಟ್ ಪಡೆದ ಇಂಗ್ಲೆಂಡ್ ಪರ ಸ್ಟೋಕ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ಆಸ್ಟ್ರೇಲಿಯಾ ವೇಗಿ ಕ್ಯಾಮರೋನ್ ಗ್ರೀನ್ ಎಸೆದ 56ನೇ ಓವರ್ನಲ್ಲಿ ಅಕ್ಷರಶಃ ಅಬ್ಬರಿಸಿ ಬೊಬ್ಬಿರಿದರು.
ಈ ಓವರ್ನ ಮೊದಲ ಎಸೆತದಲ್ಲೇ ಬೆನ್ ಸ್ಟೋಕ್ಸ್ ಫೋರ್ ಬಾರಿಸಿ ಶುಭಾರಂಭ ಮಾಡಿದ್ದರು. ಆದರೆ ದ್ವಿತೀಯ ಎಸೆತ ವೈಡ್. ಮರು ಎಸೆತದಲ್ಲಿ ಭರ್ಜರಿ ಸಿಕ್ಸ್. 3ನೇ ಹಾಗೂ 4ನೇ ಎಸೆತಗಳಲ್ಲೂ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದರು. ಇನ್ನು 5ನೇ ಎಸೆತದಲ್ಲಿ 1 ರನ್ ಕಲೆಹಾಕಿದರು. 6ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. ಅಂದರೆ ಒಂದೇ ಓವರ್ನಲ್ಲಿ 24 ರನ್ ಚಚ್ಚುವ ಮೂಲಕ ಸ್ಟೋಕ್ಸ್ ಅಬ್ಬರಿಸಿದರು.
ಈ ಅಬ್ಬರದ ಬ್ಯಾಟಿಂಗ್ನೊಂದಿಗೆ ಕೇವಲ 142 ಎಸೆತಗಳಲ್ಲಿ ಬೆನ್ ಸ್ಟೋಕ್ಸ್ ಶತಕ ಪೂರೈಸಿದ್ದರು. ವಿಶೇಷ ಎಂದರೆ ಈ 24 ರನ್ಗಳೊಂದಿಗೆ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ಪರ ಒಂದೇ ಓವರ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶೇಷ ದಾಖಲೆ ಬೆನ್ ಸ್ಟೋಕ್ಸ್ ಪಾಲಾಗಿದೆ.
6,6,6 to bring up an Ashes century at Lord’s.
Ben Stokes the captain! pic.twitter.com/C7i0uQfqoX
— Mufaddal Vohra (@mufaddal_vohra) July 2, 2023
ಹಾಗೆಯೇ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಒಂದೇ ಓವರ್ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಹ್ಯಾರಿ ಬ್ರೂಕ್. 2022 ರಲ್ಲಿ ಹ್ಯಾರಿ ಬ್ರೂಕ್ ಪಾಕಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಝಾಹಿದ್ ಮಹ್ಮೂದ್ ಓವರ್ನಲ್ಲಿ 27 ರನ್ ಬಾರಿಸಿ ಅಬ್ಬರಿಸಿದ್ದರು. ಇದು ಟೆಸ್ಟ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಬ್ಯಾಟರ್ರೊಬ್ಬರು ಕಲೆಹಾಕಿದ ಅತ್ಯಧಿಕ ರನ್ ದಾಖಲೆಯಾಗಿದೆ.
ಇದೀಗ ಕ್ಯಾಮರೋನ್ ಗ್ರೀನ್ ಓವರ್ನಲ್ಲಿ ಬರೋಬ್ಬರಿ 24 ರನ್ ಬಾರಿಸುವ ಮೂಲಕ ಬೆನ್ ಸ್ಟೋಕ್ಸ್ ಈ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದ್ದಾರೆ. ಹಾಗೆಯೇ ಆ್ಯಶಸ್ ಸರಣಿಯಲ್ಲಿ ಒಂದೇ ಓವರ್ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬುಮ್ರಾ ಹೆಸರಿನಲ್ಲಿದೆ ವಿಶ್ವ ದಾಖಲೆ:
ಟೆಸ್ಟ್ ಕ್ರಿಕೆಟ್ನ ಒಂದೇ ಓವರ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಹೆಸರಿನಲ್ಲಿದೆ. 2022 ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ನಲ್ಲಿ ಸ್ಟುವರ್ಟ್ ಬ್ರಾಡ್ ಓವರ್ನಲ್ಲಿ ಬುಮ್ರಾ ಒಟ್ಟು 35 ರನ್ ಕಲೆಹಾಕಿದ್ದರು.