Ashes 2023: ಕ್ರಿಸ್ ವೋಕ್ಸ್ ಮಿಂಚಿನ ದಾಳಿ: ಆಸ್ಟ್ರೇಲಿಯಾ ಆಲೌಟ್

| Updated By: ಝಾಹಿರ್ ಯೂಸುಫ್

Updated on: Jul 20, 2023 | 4:33 PM

Ashes 2023: ಇಂಗ್ಲೆಂಡ್ ಪರ ಬಿಗಿ ದಾಳಿ ಸಂಘಟಿಸಿದ ಕ್ರಿಸ್ ವೋಕ್ಸ್ ಕೇವಲ 62 ರನ್ ನೀಡಿ 5 ವಿಕೆಟ್ ಪಡೆದರೆ, ಸ್ಟುವರ್ಟ್ ಬ್ರಾಡ್ 2 ವಿಕೆಟ್ ಕಬಳಿಸಿ ಮಿಂಚಿದರು.

Ashes 2023: ಕ್ರಿಸ್ ವೋಕ್ಸ್ ಮಿಂಚಿನ ದಾಳಿ: ಆಸ್ಟ್ರೇಲಿಯಾ ಆಲೌಟ್
ಸಾಂದರ್ಭಿಕ ಚಿತ್ರ
Follow us on

Ashes 2023: ಮ್ಯಾಚೆಂಸ್ಟರ್​ನ ಓಲ್ಡ್ ಟ್ರಾಫರ್ಡ್​ ಮೈದಾನದಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ 4ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 317 ರನ್​ಗಳಿಗೆ ಆಲೌಟ್ ಆಗಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ (3) ಸ್ಟುವರ್ಟ್ ಬ್ರಾಡ್​ಗೆ ವಿಕೆಟ್ ಒಪ್ಪಿಸಿದರೆ, ಡೇವಿಡ್ ವಾರ್ನರ್ (31) ಕ್ರಿಸ್ ವೋಕ್ಸ್ ಎಸೆತದಲ್ಲಿ ಔಟಾಗಿದ್ದರು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಾರ್ನಸ್ ಲಾಬುಶೇನ್ 51 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಆದರೆ ಅರ್ಧಶತಕದ ಬೆನ್ನಲ್ಲೇ ಮೊಯೀನ್ ಅಲಿ ಎಸೆತದಲ್ಲಿ ಎಲ್​​ಬಿಡಬ್ಲ್ಯೂ ಆಗಿ ಹೊರನಡೆದರು.

ಇನ್ನು ಸ್ಟೀವ್ ಸ್ಮಿತ್ (41) ಗೆ ಮಾರ್ಕ್​ ವುಡ್ ಪೆವಿಲಿಯನ್ ಹಾದಿ ತೋರಿಸಿದರೆ, ಟ್ರಾವಿಸ್ ಹೆಡ್ (48) ಬ್ರಾಡ್ ತಂತ್ರಕ್ಕೆ ಬಲಿಯಾದರು. ಈ ಹಂತದಲ್ಲಿ ಮಿಚೆಲ್ ಮಾರ್ಷ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ 60 ಎಸೆತಗಳಲ್ಲಿ 51 ರನ್ ಸಿಡಿಸಿದರು.

ಈ ವೇಳೆ ಮತ್ತೆ ದಾಳಿಗಿಳಿದ ಕ್ರಿಸ್ ವೋಕ್ಸ್ ಮಿಚೆಲ್ ಮಾರ್ಷ್ (51) ವಿಕೆಟ್ ಪಡೆದರು. ಇದರ ಬೆನ್ನಲ್ಲೇ ಕ್ಯಾಮರೋನ್ ಗ್ರೀನ್ (16) ಹಾಗೂ ಅಲೆಕ್ಸ್ ಕ್ಯಾರಿ (20) ಯನ್ನು ಸಹ ಪೆವಿಲಿಯನ್​ಗೆ ಕಳಹಿಸಿದರು. ಇನ್ನು ಪ್ಯಾಟ್ ಕಮಿನ್ಸ್​ (1) ರನ್ನು ಜೇಮ್ಸ್ ಅ್ಯಂಡರ್ಸನ್ ಔಟ್ ಮಾಡಿದರು.

ಹಾಗೆಯೇ ಜೋಶ್ ಹ್ಯಾಝಲ್​ವುಡ್ ವಿಕೆಟ್ ಕಬಳಿಸುವ ಮೂಲಕ ಕ್ರಿಸ್ ವೋಕ್ಸ್ 5 ವಿಕೆಟ್​ಗಳನ್ನು ಪೂರೈಸಿದರು. ಇದರೊಂದಿಗೆ ಆಸ್ಟ್ರೇಲಿಯಾ ತಂಡವು 317 ರನ್​ಗಳಿಗೆ ಆಲೌಟ್ ಆಯಿತು.

ಇಂಗ್ಲೆಂಡ್ ಪರ ಬಿಗಿ ದಾಳಿ ಸಂಘಟಿಸಿದ ಕ್ರಿಸ್ ವೋಕ್ಸ್ ಕೇವಲ 62 ರನ್ ನೀಡಿ 5 ವಿಕೆಟ್ ಪಡೆದರೆ, ಸ್ಟುವರ್ಟ್ ಬ್ರಾಡ್ 2 ವಿಕೆಟ್ ಕಬಳಿಸಿ ಮಿಂಚಿದರು.

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್ , ಉಸ್ಮಾನ್ ಖ್ವಾಜಾ , ಮಾರ್ನಸ್ ಲ್ಯಾಬುಶೇನ್ , ಸ್ಟೀವ್ ಸ್ಮಿತ್ , ಟ್ರಾವಿಸ್ ಹೆಡ್ , ಮಿಚೆಲ್ ಮಾರ್ಷ್ , ಕ್ಯಾಮೆರೋನ್ ಗ್ರೀನ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಪ್ಯಾಟ್ ಕಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ , ಜೋಶ್ ಹ್ಯಾಝಲ್​ವುಡ್.

ಇದನ್ನೂ ಓದಿ: Test Records: ಟೆಸ್ಟ್​ ಕ್ರಿಕೆಟ್​ನಲ್ಲಿ 600 ಕ್ಕೂ ಹೆಚ್ಚು ವಿಕೆಟ್ ಪಡೆದ 5 ಬೌಲರ್​ಗಳಿವರು

ಇಂಗ್ಲೆಂಡ್ ಪ್ಲೇಯಿಂಗ್ 11: ಬೆನ್ ಡಕೆಟ್ , ಝಾಕ್ ಕ್ರಾಲಿ , ಮೊಯೀನ್ ಅಲಿ , ಜೋ ರೂಟ್ , ಹ್ಯಾರಿ ಬ್ರೂಕ್ , ಬೆನ್ ಸ್ಟೋಕ್ಸ್ (ನಾಯಕ) , ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್) , ಕ್ರಿಸ್ ವೋಕ್ಸ್ , ಮಾರ್ಕ್ ವುಡ್ , ಸ್ಟುವರ್ಟ್ ಬ್ರಾಡ್ , ಜೇಮ್ಸ್ ಅ್ಯಂಡರ್ಸನ್.