Ashes 2023: ಆ್ಯಶಸ್ ಸರಣಿಯ 4ನೇ ಟೆಸ್ಟ್ ಪಂದ್ಯವು ಬುಧವಾರದಿಂದ ಶುರುವಾಗಲಿದೆ. ಮ್ಯಾಚೆಂಸ್ಟರ್ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ (Australia) ವಿರುದ್ಧದ ಈ ಪಂದ್ಯಕ್ಕಾಗಿ ಇಂಗ್ಲೆಂಡ್ (England) ತಂಡವು ಆಡುವ ಬಳಗವನ್ನು ಘೋಷಿಸಿದೆ. 3ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಬಹುತೇಕ ಆಟಗಾರರನ್ನೇ ನಾಲ್ಕನೇ ಪಂದ್ಯಕ್ಕೂ ಮುಂದುವರೆಸಲಾಗಿದ್ದು, ಇದಾಗ್ಯೂ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ.
ಹೆಡಿಂಗ್ಲಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ವೇಗಿ ಒಲ್ಲಿ ರಾಬಿನ್ಸನ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಇದೀಗ ಅವರು ಸಂಪೂರ್ಣ ಫಿಟ್ ಆಗಿರದ ಕಾರಣ ಅವರ ಬದಲಿಗೆ ಜೇಮ್ಸ್ ಅ್ಯಂಡರ್ಸನ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.
ಅದರಂತೆ ಮ್ಯಾಂಚೆಸ್ಟರ್ ಟೆಸ್ಟ್ನಲ್ಲಿ ಇಂಗ್ಲೆಂಡ್ ತಂಡದ ಬೌಲಿಂಗ್ ಅನ್ನು ಸ್ಟುವರ್ಟ್ ಬ್ರಾಡ್ ಹಾಗೂ ಜೇಮ್ಸ್ ಅ್ಯಂಡರ್ಸನ್ ಮುನ್ನಡೆಸಲಿದ್ದಾರೆ.
ಆಂಗ್ಲರ ಪಾಲಿಗೆ ನಿರ್ಣಾಯಕ ಪಂದ್ಯ:
ಆ್ಯಶಸ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ಇಂಗ್ಲೆಂಡ್ ಪಾಲಿಗೆ ನಿರ್ಣಾಯಕ. ಏಕೆಂದರೆ 5 ಪಂದ್ಯಗಳ ಈ ಸರಣಿಯ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿತ್ತು. ಇನ್ನು ಮೂರನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ಗೆಲುವು ದಾಖಲಿಸಿತ್ತು.
ಇದೀಗ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಸೋತರೆ ಸರಣಿ ಆಸ್ಟ್ರೇಲಿಯಾ ಪಾಲಾಗಲಿದೆ. ಹೀಗಾಗಿ 4ನೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ ಇಂಗ್ಲೆಂಡ್.
ಡ್ರಾ ಆದರೂ ಫೈನಲ್ ಫೈಟ್:
ಒಂದು ವೇಳೆ 4ನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ಜಯ ಸಾಧಿಸಿದರೆ, 5ನೇ ಪಂದ್ಯವು ಫೈನಲ್ ಫೈಟ್ ಆಗಿ ಮಾರ್ಪಡಲಿದೆ. ಇನ್ನು 4ನೇ ಪಂದ್ಯವು ಡ್ರಾ ಆದರೂ ಕೂಡ ಅಂತಿಮ ಪಂದ್ಯವು ಫೈನಲ್ ಪೈಪೋಟಿಗೆ ಸಾಕ್ಷಿಯಾಗಲಿದೆ.
ಏಕೆಂದರೆ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲು ಅಥವಾ ಡ್ರಾ ಸಾಧಿಸಲು ಇಂಗ್ಲೆಂಡ್ ಯಶಸ್ವಿಯಾದರೆ, ಅಂತಿಮ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯನ್ನು ಡ್ರಾ ಮಾಡಿಕೊಳ್ಳಬಹುದು. ಅತ್ತ ಆಸ್ಟ್ರೇಲಿಯಾ ತಂಡ 4ನೇ ಟೆಸ್ಟ್ ಪಂದ್ಯದಲ್ಲಿ ಸೋತರೆ ಅಥವಾ ಡ್ರಾ ಮಾಡಿಕೊಂಡರೆ, ಕೊನೆಯ ಪಂದ್ಯದಲ್ಲಿ ಜಯಗಳಿಸಿದರೆ ಮಾತ್ರ ಸರಣಿ ವಶಪಡಿಸಿಕೊಳ್ಳಬಹುದು. ಈ ಎಲ್ಲಾ ಕಾರಣಗಳಿಂದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳಿಂದ ರೋಚಕ ಹೋರಾಟ ನಿರೀಕ್ಷಿಸಬಹುದು.
4ನೇ ಟೆಸ್ಟ್ಗೆ ಇಂಗ್ಲೆಂಡ್ ಪ್ಲೇಯಿಂಗ್ 11:
ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್ನಲ್ಲಿನ ಟೀಮ್ ಇಂಡಿಯಾದ 9 ಎದುರಾಳಿಗಳು ಇವರೇ..!
ಇಂಗ್ಲೆಂಡ್ ಟೆಸ್ಟ್ ತಂಡ ಹೀಗಿದೆ: ಬೆನ್ ಸ್ಟೋಕ್ಸ್ (ನಾಯಕ), ಮೊಯೀನ್ ಅಲಿ, ಜೇಮ್ಸ್ ಅ್ಯಂಡರ್ಸನ್, ಜಾನಿ ಬೈರ್‌ಸ್ಟೋ, ಸ್ಟುವರ್ಟ್ ಬ್ರಾಡ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಡಾನ್ ಲಾರೆನ್ಸ್, ಒಲ್ಲಿ ರಾಬಿನ್ಸನ್, ಜೋ ರೂಟ್, ಜೋಶ್ ಟಂಗ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.