Updated on:Jul 17, 2023 | 9:27 PM
ಈ ಸಲ ಕಪ್ ನಮ್ದೆ...ಈ ಘೋಷವಾಕ್ಯ ಶುರುವಾಗಿ 16 ವರ್ಷಗಳೇ ಕಳೆದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಕಪ್ ಗೆಲ್ಲುವ ಕನಸು ಕನಸಾಗಿಯೇ ಉಳಿದಿವೆ. ಆದರೆ ಈ ಹದಿನಾರು ವರ್ಷಗಳಲ್ಲಿ ಆರ್ಸಿಬಿ ತಂಡ ಮೂರು ಬಾರಿ ಫೈನಲ್ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು.
2009 ರಲ್ಲಿ ಮೊದಲ ಬಾರಿಗೆ ಫೈನಲ್ ಆಡಿದ್ದ ಆರ್ಸಿಬಿ ಡೆಕ್ಕನ್ ಚಾರ್ಜರ್ಸ್ (ಈಗಿನ SRH) ವಿರುದ್ಧ ಸೋಲನುಭವಿಸಿತ್ತು. ಆನಂತರ ಆರ್ಸಿಬಿ ಫೈನಲ್ ಪ್ರವೇಶಿಸಿದ್ದು 2011 ರಲ್ಲಿ. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತು ನಿರಾಸೆ ಅನುಭವಿಸಿತು.
ಇದಾದ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್ಸಿಬಿ 2016 ರಲ್ಲಿ ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಆದರೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 8 ರನ್ಗಳಿಂದ ಸೋತು ಕಿರೀಟ ಮುಡಿಗೇರಿಸಿಕೊಳ್ಳುವ ಅವಕಾಶವನ್ನು ಆರ್ಸಿಬಿ ಕೈಚೆಲ್ಲಿಕೊಂಡಿತು.
ಅಂದರೆ ಫೈನಲ್ ಆಡಿದ ಬಳಗದಲ್ಲಿ ಯುಜ್ವೇಂದ್ರ ಚಹಲ್ ಕೂಡ ಇದ್ದರು. ಇದೀಗ ಸಂದರ್ಶನವೊಂದರಲ್ಲಿ ಭಾಗವಹಿಸಿದ ಚಹಲ್ ಅವರಿಗೆ ಆರ್ಸಿಬಿ ಯಾಕೆ ಪ್ರಶಸ್ತಿ ಗೆಲ್ಲುತ್ತಿಲ್ಲ ಎಂಬ ಪ್ರಶ್ನೆಯನ್ನು ಮುಂದಿಡಲಾಗಿದೆ.
ಈ ಪ್ರಶ್ನೆಗೆ ಉತ್ತರಿಸಿದ ಚಹಲ್, ಕಳೆದ 8 ವರ್ಷಗಳಿಂದ ನಾನು ಕೂಡ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಆದರೆ ಇದುವರೆಗೆ ಉತ್ತರ ಸಿಕ್ಕಿಲ್ಲ. 2016 ರಲ್ಲಿ ನಮ್ಮದು ಅತ್ಯುತ್ತಮ ತಂಡವಾಗಿತ್ತು. ಕ್ರಿಸ್ ಗೇಲ್, ಕೆಎಲ್ ರಾಹುಲ್ನಂತಹ ಆಟಗಾರರು ತಂಡದಲ್ಲಿದ್ದರು.
ಇದಾಗ್ಯೂ ನಾವು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲನುಭವಿಸಿದೆವು. ಅದೊಂದು ನೋವಿನ ಸಂಗತಿ ಎಂದು ಯುಜ್ವೇಂದ್ರ ಚಹಲ್ ಹೇಳಿದರು.
ಇದೇ ವೇಳೆ ಆರ್ಸಿಬಿ ಫ್ರಾಂಚೈಸಿ ನನ್ನನ್ನು ತಂಡದಿಂದ ಕೈ ಬಿಟ್ಟಿರುವುದು ತುಂಬಾ ನೋವುಂಟು ಮಾಡಿದೆ ಎಂದ ಚಹಲ್, 8 ವರ್ಷಗಳ ಕಾಲ ಆಡಿದ ತಂಡದಿಂದ ನಾನು ಹೊರಬೀಳುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ ಎಂದರು.
ಆರ್ಸಿಬಿ ಪರ ನಾನು 8 ವರ್ಷಗಳ ಕಾಲ ಆಡಿದ್ದೆ. ಆ ತಂಡದಿಂದಲೇ ನಾನು ಟೀಮ್ ಇಂಡಿಯಾದಲ್ಲೂ ಅವಕಾಶ ಪಡೆದಿದ್ದೆ. ಏಕೆಂದರೆ ಆರ್ಸಿಬಿ ನನಗೆ ಆಡುವ ಅವಕಾಶ ನೀಡಿತ್ತು. ವಿರಾಟ್ ಕೊಹ್ಲಿ ನನಗೆ ಸಂಪೂರ್ಣ ಬೆಂಬಲ ನೀಡಿದ್ದರು. ನನ್ನ ಪಾಲಿಗೆ ಆರ್ಸಿಬಿ ಎಂಬುದು ಒಂದು ಫ್ಯಾಮಿಲಿಯಾಗಿತ್ತು.
ಆದರೆ 2021 ರ ಬಳಿಕ ಆರ್ಸಿಬಿ ಫ್ರಾಂಚೈಸಿ ನನ್ನನ್ನು ತಂಡದಿಂದ ಕೈ ಬಿಟ್ಟಿತ್ತು. ಅದೊಂದು ನೋವಿನ ಸಂಗತಿ. ಈ ಬಗ್ಗೆ ನನಗೆ ಫೋನ್ ಕರೆ ಮಾಡಿ ಯಾರೂ ಕೂಡ ತಿಳಿಸಿರಲಿಲ್ಲ. ನನ್ನೊಂದಿಗೆ ಆರ್ಸಿಬಿ ಫ್ರಾಂಚೈಸಿ ಮಾತುಕತೆಯನ್ನು ಸಹ ನಡೆಸಿರಲಿಲ್ಲ. ಇದಾಗ್ಯೂ ಹರಾಜಿನಲ್ಲಿ ಮತ್ತೆ ಖರೀದಿಸುತ್ತೇನೆ ಎಂದಿದ್ದರು.
ಆದರೆ ಐಪಿಎಲ್ 2022 ರ ಹರಾಜಿನಲ್ಲಿ ಆರ್ಸಿಬಿ ನನ್ನನ್ನು ಖರೀದಿಸಿರಲಿಲ್ಲ. ಈಗಲೂ ನನಗೆ ಚಿನ್ನಸ್ವಾಮಿ ಸ್ಟೇಡಿಯಂ ನೆಚ್ಚಿನ ಮೈದಾನ. ಆದರೆ ಈಗ ನಾನು ಆಡುತ್ತಿರುವುದು ರಾಜಸ್ಥಾನ್ ರಾಯಲ್ಸ್ ಪರ. ಅಂದು ಆರ್ಸಿಬಿ ನನ್ನನ್ನು ಏಕಾಏಕಿ ಕೈಬಿಟ್ಟಿದ್ದು ನನಗೆ ತುಂಬಾ ನೋವುಂಟು ಮಾಡಿತು ಎಂದು ಯುಜ್ವೇಂದ್ರ ಚಹಲ್ ತಿಳಿಸಿದರು.
ಅಂದಹಾಗೆ ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ಫ್ರಾಂಚೈಸಿ ಮಾಡಿದ ಅತೀ ದೊಡ್ಡ ತಪ್ಪುಗಳಲ್ಲಿ ಇದು ಕೂಡ ಒಂದು ಎಂದರೆ ತಪ್ಪಾಗಲಾರದು. ಏಕೆಂದರೆ ಐಪಿಎಲ್ನ ಅತ್ಯಂತ ಯಶಸ್ವಿ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದ ಬೌಲರ್ನನ್ನು ಆರ್ಸಿಬಿ ಏಕಾಏಕಿ ಬಿಡುಗಡೆ ಮಾಡಿತು. ಇದೀಗ ಒಟ್ಟು 187 ವಿಕೆಟ್ ಕಬಳಿಸಿ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ಯುಜ್ವೇಂದ್ರ ಚಹಲ್ ನಿರ್ಮಿಸಿ RCB ಗೆ ತಿರುಗೇಟು ನೀಡಿದ್ದಾರೆ.
Published On - 9:24 pm, Mon, 17 July 23