Ashes 2023: ಆ್ಯಶಸ್ ಸರಣಿ: 4ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ

England vs Australia: ಆ್ಯಶಸ್ ಸರಣಿಯ 4ನೇ ಪಂದ್ಯವು ಇಂಗ್ಲೆಂಡ್ ಪಾಲಿಗೆ ನಿರ್ಣಾಯಕ. ಮೂರು ಪಂದ್ಯಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ 2 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಇಂಗ್ಲೆಂಡ್ ಒಂದರಲ್ಲಿ ಗೆಲುವು ಕಂಡಿದೆ.

Ashes 2023: ಆ್ಯಶಸ್ ಸರಣಿ: 4ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ
England Team
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 11, 2023 | 10:34 PM

Ashes 2023: ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಣ ಪ್ರತಿಷ್ಠಿತ ಆ್ಯಶಸ್ ಸರಣಿಯ 4ನೇ ಪಂದ್ಯವು ಜುಲೈ 19 ರಿಂದ ಶುರುವಾಗಲಿದೆ. ಮ್ಯಾಂಚೆಸ್ಟರ್​ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ತಂಡವನ್ನು ಘೋಷಿಸಲಾಗಿದೆ. ಈ ಬಾರಿ ಕೂಡ ಅದೇ ತಂಡವನ್ನು ಉಳಿಸಿಕೊಳ್ಳಲಾಗಿದ್ದು, ವಿಕೆಟ್ ಕೀಪರ್​ ಆಗಿ ಜಾನಿ ಬೈರ್​ಸ್ಟೋವ್ ಮುಂದುವರೆಯಲಿದ್ದಾರೆ.

ಲೀಡ್ಸ್​ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಜಾನಿ ಬೈರ್​ಸ್ಟೋವ್ ವಿಫಲರಾಗಿದ್ದರು. ಅದರಲ್ಲೂ ವಿಕೆಟ್ ಕೀಪಿಂಗ್​ನಲ್ಲಿ ಕೆಲ ಕ್ಯಾಚ್​ಗಳನ್ನು ಕೈಚೆಲ್ಲಿದ್ದರು. ಹೀಗಾಗಿ 4ನೇ ಪಂದ್ಯದಿಂದ ಅವರನ್ನು ಕೈ ಬಿಡುವ ಸಾಧ್ಯತೆಗಳಿವೆ ಎಂದು ವರದಿಗಳಾಗಿದ್ದವು.

ಆದರೆ ಈ ಬಾರಿ ಕೂಡ ಜಾನಿ ಬೈರ್​ಸ್ಟೋವ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದ್ದು, ಇದರಿಂದ ಮತ್ತೋರ್ವ ವಿಕೆಟ್ ಕೀಪರ್ ಬ್ಯಾಟರ್ ಬೆನ್ ಫೋಕ್ಸ್ ಅವಕಾಶ ವಂಚಿತರಾಗಿದ್ದಾರೆ.

ಇನ್ನು ಮೂರನೇ ಟೆಸ್ಟ್ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ವೇಗಿ ಒಲ್ಲಿ ರಾಬಿನ್ಸನ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದಾಗ್ಯೂ ಅವರು ನಾಲ್ಕನೇ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ. ಅವರ ಬದಲಿಗೆ 3ನೇ ಟೆಸ್ಟ್​ನಿಂದ ಹೊರಗುಳಿದಿದ್ದ ಜೇಮ್ಸ್ ಅ್ಯಂಡರ್ಸ್ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ.

ನಿರ್ಣಾಯಕ ಪಂದ್ಯ:

ಆ್ಯಶಸ್ ಸರಣಿಯ 4ನೇ ಪಂದ್ಯವು ಇಂಗ್ಲೆಂಡ್ ಪಾಲಿಗೆ ನಿರ್ಣಾಯಕ. ಮೂರು ಪಂದ್ಯಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ 2 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಇಂಗ್ಲೆಂಡ್ ಒಂದರಲ್ಲಿ ಗೆಲುವು ಕಂಡಿದೆ. ಅಂದರೆ ಐದು ಪಂದ್ಯಗಳ ಈ ಸರಣಿಯ 4ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿದರೆ ಸರಣಿ ಪ್ಯಾಟ್ ಕಮಿನ್ಸ್ ಪಡೆಯ ಪಾಲಾಗಲಿದೆ.

ಹೀಗಾಗಿ ಸರಣಿ ಅಂತರವನ್ನು ಸಮಬಲಗೊಳಿಸಲು ಇಂಗ್ಲೆಂಡ್ ತಂಡವು 4ನೇ ಪಂದ್ಯದಲ್ಲಿ ಜಯ ಸಾಧಿಸಲೇಬೇಕು. ಹೀಗಾಗಿ ಮ್ಯಾಂಚೆಸ್ಟರ್​ನ ಓಲ್ಡ್​ ಟ್ರಾಫರ್ಡ್ ಮೈದಾನದಲ್ಲಿ ಉಭಯ ತಂಡಗಳಿಂದ ರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.

ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್​ನಲ್ಲಿನ ಟೀಮ್ ಇಂಡಿಯಾದ 9 ಎದುರಾಳಿಗಳು ಇವರೇ..!

4ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಹೀಗಿದೆ:

ಬೆನ್ ಸ್ಟೋಕ್ಸ್ (ನಾಯಕ), ಮೊಯೀನ್ ಅಲಿ, ಜೇಮ್ಸ್ ಅ್ಯಂಡರ್ಸನ್, ಜಾನಿ ಬೈರ್‌ಸ್ಟೋ, ಸ್ಟುವರ್ಟ್ ಬ್ರಾಡ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಡಾನ್ ಲಾರೆನ್ಸ್, ಒಲ್ಲಿ ರಾಬಿನ್ಸನ್, ಜೋ ರೂಟ್, ಜೋಶ್ ಟಂಗ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.