Mitchell Marsh: ಸ್ಪೋಟಕ ಶತಕ ಸಿಡಿಸಿ ಅಬ್ಬರಿಸಿದ ಮಿಚೆಲ್ ಮಾರ್ಷ್

| Updated By: ಝಾಹಿರ್ ಯೂಸುಫ್

Updated on: Jul 06, 2023 | 9:27 PM

Ashes 2023: 5ನೇ ವಿಕೆಟ್​ಗೆ ಜೊತೆಯಾದ ಈ ಜೋಡಿಯು 155 ರನ್​ಗಳ ಜೊತೆಯಾಟವಾಡಿದರು. ವಿಶೇಷ ಎಂದರೆ ಈ ಶತಕದ ಜೊತೆಯಾಟದಲ್ಲಿ ಮಿಚೆಲ್ ಮಾರ್ಷ್​ ಬ್ಯಾಟ್​ನಿಂದಲೇ ಸೆಂಚುರಿ ಮೂಡಿಬಂದಿತ್ತು.

Mitchell Marsh: ಸ್ಪೋಟಕ ಶತಕ ಸಿಡಿಸಿ ಅಬ್ಬರಿಸಿದ ಮಿಚೆಲ್ ಮಾರ್ಷ್
mitchell marsh
Follow us on

Ashes 2023: ಲೀಡ್ಸ್​ ಮೈದಾನದಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ 3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ (England) ವಿರುದ್ಧ ಆಸ್ಟ್ರೇಲಿಯಾ (Australia) ಆಟಗಾರ ಮಿಚೆಲ್ ಮಾರ್ಷ್ (Mitchell Marsh) ಸ್ಪೋಟಕ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕರಾದ ಡೇವಿಡ್ ವಾರ್ನರ್ (4) ಹಾಗೂ ಉಸ್ಮಾನ್ ಖ್ವಾಜಾ (13) ಬೇಗನೆ ನಿರ್ಗಮಿಸಿದರೆ, ಆ ಬಳಿಕ ಬಂದ ಮಾರ್ನಸ್ ಲಾಬುಶೇನ್ (21) ಹಾಗೂ ಸ್ಟೀವ್ ಸ್ಮಿತ್ (22) ಕೂಡ ಕ್ರೀಸ್​ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅದರಂತೆ 85 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಸ್ಟ್ರೇಲಿಯಾಗೆ ಟ್ರಾವಿಸ್ ಹೆಡ್ ಹಾಗೂ ಮಿಚೆಲ್ ಮಾರ್ಷ್ ಆಸರೆಯಾದರು.

5ನೇ ವಿಕೆಟ್​ಗೆ ಜೊತೆಯಾದ ಈ ಜೋಡಿಯು 155 ರನ್​ಗಳ ಜೊತೆಯಾಟವಾಡಿದರು. ವಿಶೇಷ ಎಂದರೆ ಈ ಶತಕದ ಜೊತೆಯಾಟದಲ್ಲಿ ಮಿಚೆಲ್ ಮಾರ್ಷ್​ ಬ್ಯಾಟ್​ನಿಂದಲೇ ಸೆಂಚುರಿ ಮೂಡಿಬಂದಿತ್ತು. ಬಿರುಸಿನ ಬ್ಯಾಟಿಂಗ್​ ಪ್ರದರ್ಶಿಸಿದ ಮಾರ್ಷ್ ಇಂಗ್ಲೆಂಡ್ ಬೌಲರ್​ಗಳ ತಂತ್ರಕ್ಕೆ ಬ್ಯಾಟ್​ ಮೂಲಕವೇ ಉತ್ತರ ನೀಡಿದರು. ಪರಿಣಾಮ ಕೇವಲ 102 ಎಸೆತಗಳಲ್ಲಿ ಶತಕ ಪೂರೈಸಿದರು.

ಸೆಂಚುರಿ ಬಳಿಕ ಕೂಡ ಸ್ಪೋಟಕ ಇನಿಂಗ್ಸ್​ಗೆ ಒತ್ತು ನೀಡಿದ ಮಿಚೆಲ್ ಮಾರ್ಷ್ 118 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 17 ಫೋರ್​ಗಳೊಂದಿಗೆ 118 ರನ್ ಬಾರಿಸಿ ಕ್ರಿಸ್ ವೋಕ್ಸ್​ಗೆ ವಿಕೆಟ್ ಒಪ್ಪಿಸಿದರು. ಅಂದರೆ ಟ್ರಾವಿಸ್ ಹೆಡ್​ ಜೊತೆಗಿನ 155 ರನ್​ಗಳ ಜೊತೆಯಾಟದಲ್ಲಿ ಮಿಚೆಲ್ ಮಾರ್ಷ್ ಬ್ಯಾಟ್​ನಿಂದಲೇ 118 ರನ್​ಗಳು ಮೂಡಿಬಂದಿತ್ತು.

ಇನ್ನು ಮಾರ್ಷ್ ಔಟಾದ ಬೆನ್ನಲ್ಲೇ ಟ್ರಾವಿಸ್ ಹೆಡ್ (39) ಕೂಡ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಅಲೆಕ್ಸ್ ಕ್ಯಾರಿ (8), ಮಿಚೆಲ್ ಸ್ಟಾರ್ಕ್ (2) ಹಾಗೂ ಪ್ಯಾಟ್ ಕಮಿನ್ಸ್ (0) ಬಂದ ವೇಗದಲ್ಲೇ ಹಿಂತಿರುಗಿದ್ದರು. ಅಂತಿಮವಾಗಿ ಟಾಡ್ ಮರ್ಫಿ (13) ಔಟಾಗುವುದರೊಂದಿಗೆ ಆಸ್ಟ್ರೇಲಿಯಾ ತಂಡವು 263 ರನ್​ಗಳಿಗೆ ಸರ್ವಪತನ ಕಂಡಿತು.

ಇಂಗ್ಲೆಂಡ್ ಪರ ಮಾರ್ಕ್​ ವುಡ್ 5 ವಿಕೆಟ್ ಕಬಳಿಸಿ ಮಿಂಚಿದರೆ, ಕ್ರಿಸ್ ವೋಕ್ಸ್ 3 ವಿಕೆಟ್ ಪಡೆದರು. ಇನ್ನು ಸ್ಟುವರ್ಟ್ ಬ್ರಾಡ್ 2 ವಿಕೆಟ್ ಉರುಳಿಸಿದರು.

ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ, ಬೆನ್ ಡಕೆಟ್, ಹ್ಯಾರಿ ಬ್ರೂಕ್, ಜೋ ರೂಟ್, ಜಾನಿ ಬೈರ್‌ಸ್ಟೋ (ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್ (ನಾಯಕ), ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಒಲ್ಲಿ ರಾಬಿನ್ಸನ್, ಸ್ಟುವರ್ಟ್ ಬ್ರಾಡ್.

ಇದನ್ನೂ ಓದಿ: ODI World Cup 2023: ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನಕ್ಕೆ ಗೆಲುವು ಖಚಿತ..!

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲ್ಯಾಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಟಾಡ್ ಮರ್ಫಿ, ಸ್ಕಾಟ್ ಬೋಲ್ಯಾಂಡ್.