Updated on: Jul 02, 2023 | 9:30 PM
ODI World Cup 2023: ಏಕದಿನ ವಿಶ್ವಕಪ್ಗಾಗಿ ಕೌಂಟ್ ಡೌನ್ ಶುರುವಾಗಿದೆ. ಅಕ್ಟೋಬರ್ 5 ರಿಂದ ಆರಂಭವಾಗಲಿರುವ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್-ನ್ಯೂಝಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿದೆ. ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಅಭಿಯಾನ ಆರಂಭಿಸಲಿದೆ.
ಇನ್ನು ಅಕ್ಟೋಬರ್ 15 ರಂದು ಭಾರತ ಹಾಗೂ ಪಾಕಿಸ್ತಾನ್ ಮುಖಾಮುಖಿಯಾಗಲಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಪಂದ್ಯದಲ್ಲಿ ಭಾರತ ತಂಡವನ್ನು ಬಗ್ಗು ಬಡಿದು ಪಾಕಿಸ್ತಾನ್ ಜಯಭೇರಿ ಬಾರಿಸಲಿದೆ ಎಂದು ಪಾಕ್ ತಂಡ ಮಾಜಿ ಆಟಗಾರ ಸಯೀದ್ ಅಜ್ಮಲ್ ಭವಿಷ್ಯ ನುಡಿದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಯೀದ್ ಅಜ್ಮಲ್, ಈ ಬಾರಿ ಭಾರತದ ವಿರುದ್ಧ ಪಾಕಿಸ್ತಾನ್ ಗೆಲ್ಲುವುದು ಖಚಿತ. ಏಕೆಂದರೆ ಪಾಕ್ ತಂಡದ ಬೌಲಿಂಗ್ ಲೈನಪ್ ಬಲಿಷ್ಠವಾಗಿದ್ದು, ಇದರ ಮುಂದೆ ಟೀಮ್ ಇಂಡಿಯಾ ಮಂಡಿಯೂರಲಿದೆ ಎಂದು ಅಜ್ಮಲ್ ಹೇಳಿದ್ದಾರೆ.
ಇಲ್ಲಿ ಭಾರತ ತಂಡಕ್ಕೆ ತವರಿನಲ್ಲಿ ಆಡುತ್ತಿರುವುದು ಅನುಕೂಲಕರ. ಅದರಲ್ಲೂ ಟೀಮ್ ಇಂಡಿಯಾ ಅಪಾಯಕಾರಿ ಬ್ಯಾಟರ್‌ಗಳನ್ನು ಹೊಂದಿದ್ದಾರೆ. ಆದರೆ, ಅವರ ಬೌಲಿಂಗ್ ದುರ್ಬಲವಾಗಿದೆ ಎಂಬುದೇ ಸತ್ಯ.
ಅದೇ ಪಾಕಿಸ್ತಾನವು ವಿಕೆಟ್ ಕಬಳಿಸುವ ಅತ್ಯುತ್ತಮ ಬೌಲರ್‌ಗಳನ್ನು ಹೊಂದಿದೆ. ಹೀಗಾಗಿ ಈ ಪಂದ್ಯದಲ್ಲಿ ಪಾಕಿಸ್ತಾನವು ಶೇ. 60 ರಷ್ಟು ಗೆಲುವು ಸಾಧಿಸಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು ಎಂದು ಸಯೀದ್ ಅಜ್ಮಲ್ ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ ಏಕದಿನ ವಿಶ್ವಕಪ್ ಆರಂಭಕ್ಕೂ ಮುನ್ನವೇ ಪಾಕಿಸ್ತಾನ್ ತಂಡದ ಮಾಜಿ ಸ್ಪಿನ್ನರ್ ನೀಡಿರುವ ಹೇಳಿಕೆಯು ಇದೀಗ ಎಲ್ಲರ ಗಮನ ಸೆಳೆದಿದೆ.
ಇಲ್ಲಿ ಟೀಮ್ ಇಂಡಿಯಾ ಅತ್ಯುತ್ತಮ ಬ್ಯಾಟರ್‌ಗಳನ್ನು ಹೊಂದಿದ್ದರೆ, ಪಾಕ್ ತಂಡವು ಉತ್ತಮ ಬೌಲರ್‌ಗಳನ್ನು ಹೊಂದಿದೆ. ಹೀಗಾಗಿ ಹೈವೋಲ್ಟೇಜ್ ಕದನದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.