
ಏಷ್ಯಾಕಪ್ ಆರಂಭಕ್ಕೆ ದಿನಗಳು ಮಾತ್ರ ಉಳಿದಿವೆ. ಆದರೆ ಅದಕ್ಕೂ ಮುನ್ನ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಹೀಗಾಗಿ ಏಷ್ಯಾಕಪ್ಗೆ ದ್ರಾವಿಡ್ ಅಲಭ್ಯರಾಗುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ತರಬೇತುದಾರ ಯಾರಾಗಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗಳಿಗೆ ಸದ್ಯ 2 ಉತ್ತರಗಳು ಸಿಗುತ್ತಿರುವುದು ವಿಶೇಷ.
ಒಂದು ವೇಳೆ ರಾಹುಲ್ ದ್ರಾವಿಡ್ ಸಂಪೂರ್ಣವಾಗಿ ಏಷ್ಯಾಕಪ್ನಿಂದ ಹೊರಗುಳಿದರೆ, ಟೀಮ್ ಇಂಡಿಯಾ ಬದಲಿ ಕೋಚ್ ಅನ್ನು ಆಯ್ಕೆ ಮಾಡಲಿದೆ. ಇಲ್ಲಿ ಕೇಳಿ ಬರುತ್ತಿರುವ ಮೊದಲ ಹೆಸರೆಂದರೆ ವಿವಿಎಸ್ ಲಕ್ಷ್ಮಣ್. ಈ ಹಿಂದೆ ಕೂಡ ದ್ರಾವಿಡ್ ಅನುಪಸ್ಥಿತಿಯಲ್ಲಿ ಲಕ್ಷ್ಮಣ್ ಟೀಮ್ ಇಂಡಿಯಾ ಕೋಚ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ನಡೆಯುತ್ತಿರುವುದು ಪ್ರಮುಖ ಟೂರ್ನಿಯಾಗಿದೆ. ಹೀಗಾಗಿಯೇ ಬಿಸಿಸಿಐ ಲಕ್ಷ್ಮಣ್ ಅವರಿಗೆ ಸಂಪೂರ್ಣ ಜವಾಬ್ದಾರಿವಹಿಸುವುದು ಕೂಡ ಅನುಮಾನ ಎನ್ನಲಾಗುತ್ತಿದೆ.
ಹೀಗಾಗಿ ಟೀಮ್ ಇಂಡಿಯಾ ಜೊತೆ ಮಹೇಂದ್ರ ಸಿಂಗ್ ಧೋನಿ ಅವರನ್ನು ಯುಎಇಗೆ ಕಳುಹಿಸಿಕೊಡುವ ಸಾಧ್ಯತೆಯಿದೆ. ಈ ಹಿಂದೆ ಟಿ20 ವಿಶ್ವಕಪ್ನಲ್ಲಿ ಧೋನಿ ಭಾರತ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಮತ್ತೊಮ್ಮೆ ಮಾರ್ಗದರ್ಶಕರಾಗಿ ಭಾರತ ತಂಡದ ಜೊತೆ ಪ್ರಯಾಣಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಏಕೆಂದರೆ ಇದು ಬಹುರಾಷ್ಟ್ರೀಯ ಪಂದ್ಯಾವಳಿಯಾಗಿರುವುದರಿಂದ ವಿವಿಎಸ್ ಲಕ್ಷ್ಮಣ್ ಜೊತೆ ಧೋನಿಯನ್ನು ಕೂಡ ತಂಡದ ಜೊತೆ ಕಳುಹಿಸಿಕೊಡಬಹುದು. ಇದರಿಂದ ಲಕ್ಷ್ಮಣ್ ಅವರ ಕೆಲಸ ಸುಲಭವಾಗುತ್ತದೆ. ಹಾಗೆಯೇ ಧೋನಿಯ ನಾಯಕತ್ವದಲ್ಲಿ ಪದಾರ್ಪಣೆ ಮಾಡಿದ ಆಟಗಾರರು ಪ್ರಸ್ತುತ ತಂಡದಲ್ಲಿದ್ದಾರೆ.
ಹಾಗೆಯೇ ಧೋನಿ ಏಷ್ಯಾಕಪ್‌ನಲ್ಲಿ ಆಡಿದ ಅನುಭವವನ್ನು ಹೊಂದಿದ್ದಾರೆ. ಜೊತೆಗೆ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ತಂಡಗಳ ಸಾಮರ್ಥ್ಯ ಮತ್ತು ಚಾಣಾಕ್ಷ ನಡೆಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಹೊಂದಿದ್ದಾರೆ. ಇದು ಟೀಮ್ ಇಂಡಿಯಾಗೆ ಪ್ರಯೋಜನವಾಗಲಿದೆ. ಹೀಗಾಗಿಯೇ ರಾಹುಲ್ ದ್ರಾವಿಡ್ ಏಷ್ಯಾಕಪ್ನಿಂದ ಹೊರಗುಳಿದರೆ, ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.