
ಏಷ್ಯಾಕಪ್ 2022 ಕ್ಕೆ (Asia Cup 2022) ಯುಎಇನಲ್ಲಿ ವೇದಿಕೆ ಸಜ್ಜಾಗಿದೆ. ಆಗಸ್ಟ್ 27 ರಿಂದ ಶುರುವಾಗಲಿರುವ ಏಷ್ಯಾ ರಾಷ್ಟ್ರಗಳ ಈ ಕ್ರಿಕೆಟ್ ಕದನದ ಫೈನಲ್ ಪಂದ್ಯವು ಸೆಪ್ಟೆಂಬರ್ 11 ರಂದು ನಡೆಯಲಿದೆ. ವಿಶೇಷ ಎಂದರೆ ಭಾರತ ತಂಡವು ಮೊದಲ ಪಂದ್ಯವನ್ನು ಆಗಸ್ಟ್ 28 ರಂದು ಆಡಲಿದೆ. ಅದು ಕೂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ (India vs Pakistan) ವಿರುದ್ದ ಎಂಬುದು ವಿಶೇಷ. ಪಾಕಿಸ್ತಾನ್ ಹೊರತಾಗಿ ಭಾರತ ತಂಡವಿರುವ ಗ್ರೂಪ್ನಲ್ಲಿ ಮತ್ತೊಂದು ಕೂಡ ಅರ್ಹತಾ ಸುತ್ತಿನಿಂದ ಸೇರ್ಪಡೆಯಾಗಲಿದೆ.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಟೀಮ್ ಇಂಡಿಯಾ ಯುಎಇಯಲ್ಲಿ ಪಾಕಿಸ್ತಾನ್ ವಿರುದ್ದ ಏಕೈಕ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದೆ. 2021 ರ ಟಿ20 ವಿಶ್ವಕಪ್ನಲ್ಲಿ ಆಡಲಾದ ಈ ಪಂದ್ಯದಲ್ಲಿ ಭಾರತ ತಂಡವು ಹೀನಾಯವಾಗಿ ಸೋಲನುಭವಿಸಿದೆ. ಆದರೆ ಯುಎಇ ಪಾಕಿಸ್ತಾನ್ ತಂಡದ ಎರಡನೇ ಹೋಮ್ ಗ್ರೌಂಡ್ ಎಂಬುದೇ ಇಲ್ಲಿ ವಿಶೇಷ.
ಏಕೆಂದರೆ ಪಾಕಿಸ್ತಾನ್ ತಂಡ ಯುಎಇನಲ್ಲಿ 42 ಪಂದ್ಯಗಳನ್ನು ಆಡಿದೆ. ಇದರಲ್ಲಿ 26 ಪಂದ್ಯಗಳನ್ನು ಪಾಕ್ ಗೆದ್ದುಕೊಂಡಿದೆ. ಅಂದರೆ ಶೇ. 65 ರಷ್ಟು ಗೆಲುವಿನ ಸರಾಸರಿ ಹೊಂದಿದೆ. ಇನ್ನು ಭಾರತ-ಪಾಕ್ ನಡುವಣ ಮೊದಲ ಪಂದ್ಯವು ದುಬೈನಲ್ಲಿ ನಡೆಯಲಿದೆ. ಈ ಮೈದಾನದಲ್ಲಿ ಪಾಕಿಸ್ತಾನ್ ಇದುವರೆಗೆ 28 ಟಿ20 ಪಂದ್ಯಗಳನ್ನು ಆಡಿದೆ. ಇದರಲ್ಲಿ 17 ಪಂದ್ಯಗಳಲ್ಲಿ ಗೆದ್ದರೆ, 11 ರಲ್ಲಿ ಸೋತಿದೆ. ಇನ್ನು ದುಬೈ ಪಿಚ್ನಲ್ಲಿ ಅತಿಹೆಚ್ಚು ಅಂತಾರಾಷ್ಟ್ರೀಯ ಟಿ20 ಗಳನ್ನು ಆಡಿದ ತಂಡವೆಂದರೆ ಅದು ಪಾಕಿಸ್ತಾನ್. ಇದೇ ಕಾರಣದಿಂದ ಈ ಹಿಂದೆ ಪಾಕ್ ತಂಡದ ನಾಯಕ ಬಾಬರ್ ಆಜಂ ಯುಎಇ ನಮಗೆ ಎರಡನೇ ತವರು ಇದ್ದಂತೆ ಎಂಬ ಹೇಳಿಕೆ ನೀಡಿದ್ದರು.
ಇಲ್ಲಿ ಮತ್ತೊಂದು ವಿಶೇಷತೆ ಅಂದರೆ ಭಾರತ-ಪಾಕ್ ಈ ಬಾರಿ ಕೂಡ ಮುಖಾಮುಖಿಯಾಗುತ್ತಿರುವುದು ದುಬೈ ಇಂಟರ್ನ್ಯಾಷನಲ್ ಮೈದಾನದಲ್ಲಿ ಎಂಬುದು. ಅಂದರೆ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವನ್ನು ಪಾಕ್ 10 ವಿಕೆಟ್ಗಳಿಂದ ಹೀನಾಯವಾಗಿ ಸೋಲಿಸಿತ್ತು. ಇದೇ ಆತ್ಮ ವಿಶ್ವಾಸದಲ್ಲಿ ಪಾಕ್ ತಂಡ ಈ ಬಾರಿ ಕೂಡ ಟೀಮ್ ಇಂಡಿಯಾ ವಿರುದ್ದ ಕಣಕ್ಕಿಳಿಯಲಿದೆ.
ಮತ್ತೊಂದೆಡೆ ಭಾರತ ತಂಡವು ದುಬೈ ಪಿಚ್ನಲ್ಲಿ ಇದುವರೆಗೆ 4 ಪಂದ್ಯಗಳನ್ನು ಆಡಿದೆ. ಈ ವೇಳೆ ಎರಡು ಪಂದ್ಯದಲ್ಲಿ ಗೆದ್ದರೆ, 2 ಪಂದ್ಯದಲ್ಲಿ ಸೋತಿದೆ. ಆದರೆ ಇಲ್ಲಿ ಗೆದ್ದಿರುವುದು ನಮೀಬಿಯಾ ಹಾಗೂ ಸ್ಕಾಟ್ಲೆಂಡ್ ವಿರುದ್ಧ ಎಂಬುದು ಉಲ್ಲೇಖಾರ್ಹ. ಹಾಗೆಯೇ ಸೋತಿರುವುದು ಪಾಕಿಸ್ತಾನ್ ಹಾಗೂ ನ್ಯೂಜಿಲೆಂಡ್ ತಂಡಗಳ ವಿರುದ್ದ. ಅಂದರೆ ಬಲಿಷ್ಠ ಎರಡು ತಂಡಗಳ ವಿರುದ್ದ ಟೀಮ್ ಇಂಡಿಯಾ ದುಬೈ ಪಿಚ್ನಲ್ಲಿ ಸೋಲನುಭವಿಸಿದೆ.
ಇದಾಗ್ಯೂ ಟಿ20 ವಿಶ್ವಕಪ್ನ ಹೀನಾಯ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿರುವ ಟೀಮ್ ಇಂಡಿಯಾ ಕಡೆಯಿಂದ ಆಗಸ್ಟ್ 28 ರಂದು ರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು. ಈ ಮೂಲಕ ಪಾಕ್ ತಂಡವನ್ನು ಬಗ್ಗು ಬಡಿದು ಹಳೆಯ ಲೆಕ್ಕ ಚುಕ್ತಾ ಮಾಡಲಿದೆಯಾ ಕಾದು ನೋಡಬೇಕಿದೆ.
ಏಷ್ಯಾಕಪ್ಗಾಗಿ ಉಭಯ ತಂಡಗಳು ಹೀಗಿವೆ:
ಪಾಕಿಸ್ತಾನ್ ತಂಡ ಹೀಗಿದೆ: ಬಾಬರ್ ಆಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್, ವಾಸಿಮ್ ಜೂನಿಯರ್, ನಸೀಮ್ ಶಾ, ಶಾನವಾಜ್ ದಹಾನಿ, ಉಸ್ಮಾನ್ ಖಾದಿರ್, ಮೊಹಮ್ಮದ್ ಹಸ್ನೈನ್
ಟೀಮ್ ಇಂಡಿಯಾ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಹಾಗೂ ದೀಪಕ್ ಚಹರ್.