ಬಹುನಿರೀಕ್ಷಿತ ಏಷ್ಯಾಕಪ್ಗಾಗಿ ಕ್ಷಣಗಣನೆ ಶುರುವಾಗಿದೆ. ನಾಳೆಯಿಂದ ಆರಂಭವಾಗಲಿರುವ 16ನೇ ಆವೃತ್ತಿಯ ಏಷ್ಯಾಕಪ್ನ ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಲಿದೆ. ಭಾರತ ತಂಡವು ಸೆಪ್ಟೆಂಬರ್ 2 ರಂದು ಪಾಕ್ ವಿರುದ್ಧ ಕಣಕ್ಕಿಳಿಯುವ ಮೂಲಕ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಇನ್ನು ಈ ಬಾರಿಯ ಏಷ್ಯಾಕಪ್ನಲ್ಲಿ ಹಲವು ಬದಲಾವಣೆಗಳು ಕಂಡು ಬರಲಿದೆ. ಆ ಬದಲಾವಣೆಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
ಈ ಬಾರಿಯ ಏಷ್ಯಾಕಪ್ ಆಯೋಜನೆಯ ಹಕ್ಕು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹೊಂದಿದೆ. ಆದರೆ ಪಾಕ್ನಲ್ಲಿ ಟೂರ್ನಿ ಆಯೋಜಿಸಿದರೆ ಭಾರತ ತಂಡ ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ತಿಳಿಸಿತ್ತು. ಹೀಗಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹೈಬ್ರಿಡ್ ಮಾದರಿಯಲ್ಲಿ, ಅಂದರೆ ಎರಡು ದೇಶಗಳಲ್ಲಿ ಟೂರ್ನಿ ಆಯೋಜಿಸುತ್ತಿದೆ. ಅದರಂತೆ ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ಏಷ್ಯಾಕಪ್ ಆತಿಥ್ಯವಹಿಸಲಿದೆ.
ಈ ಬಾರಿಯ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯಲಿದೆ. ಅಂದರೆ ಕಳೆದ ವರ್ಷ ಟಿ20 ಮಾದರಿಯಲ್ಲಿ ಏಷ್ಯಾಕಪ್ ಆಯೋಜಿಸಲಾಗಿತ್ತು. ಆದರೆ ಈ ಬಾರಿ 50 ಓವರ್ಗಳ ಟೂರ್ನಿ ನಡೆಯಲಿದೆ.
ಈ ಸಲ ಏಷ್ಯಾಕಪ್ ಅನ್ನು ಏಕದಿನ ಮಾದರಿಯಲ್ಲಿ ಆಯೋಜಿಸಲು ಮುಖ್ಯ ಕಾರಣ ಏಕದಿನ ವಿಶ್ವಕಪ್. ಅಂದರೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಐಸಿಸಿ ಟೂರ್ನಿಯನ್ನು ಪರಿಗಣಿಸಿ ಅದೇ ಮಾದರಿಯಲ್ಲಿ ಏಷ್ಯಾಕಪ್ ಫಾರ್ಮ್ಯಾಟ್ ಅನ್ನು ಬದಲಿಸುತ್ತದೆ. ಕಳೆದ ವರ್ಷ ಟಿ20 ವಿಶ್ವಕಪ್ ಹಿನ್ನಲೆಯಲ್ಲಿ ಏಷ್ಯಾಕಪ್ ಅನ್ನು ಟಿ20 ಮಾದರಿಯಲ್ಲಿ ಆಯೋಜಿಸಲಾಗಿತ್ತು.
ಈ ಬಾರಿಯ ಏಷ್ಯಾಕಪ್ ಅನ್ನು ಏಕದಿನ ಮಾದರಿಯಲ್ಲಿ ಆಯೋಜಿಸಲು ಮುಖ್ಯ ಕಾರಣ ಮುಂಬರುವ ಏಕದಿನ ವಿಶ್ವಕಪ್. ಅಂದರೆ ಐಸಿಸಿ ಟೂರ್ನಿಗೂ ಮುನ್ನ ಏಷ್ಯಾಕಪ್ ಆಯೋಜಿಸುವಾಗ ಆ ಟೂರ್ನಿಯ ಫಾರ್ಮ್ಯಾಟ್ನಲ್ಲೇ ಏಷ್ಯಾಕಪ್ ಅನ್ನು ಆಯೋಜಿಸಲಾಗುತ್ತದೆ. ಅದರಂತೆ ಈ ಬಾರಿ 50 ಓವರ್ಗಳ ಪಂದ್ಯಾವಳಿ ನಡೆಯಲಿದೆ.
ಈ ಬಾರಿ ನಡೆಯುತ್ತಿರುವುದು 16ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿ. 1984 ರಲ್ಲಿ ಶುರುವಾದ ಏಷ್ಯಾಕಪ್ ಟೂರ್ನಿಯಲ್ಲಿ 15 ಆವೃತ್ತಿಗಳನ್ನು ಆಡಲಾಗಿದ್ದು, ಇದೀಗ ಹದಿನಾರಣೆಯ ಟೂರ್ನಿಯ ಹೊಸ್ತಿಲಲ್ಲಿದ್ದೇವೆ.
2022 ರ ಏಷ್ಯಾಕಪ್ ಫೈನಲ್ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಶ್ರೀಲಂಕಾ ತಂಡ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕಿಳಿಯಲಿದೆ.
ಏಷ್ಯಾಕಪ್ ಇತಿಹಾಸದಲ್ಲೇ ಅತ್ಯಧಿಕ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಭಾರತ. ಟೀಮ್ ಇಂಡಿಯಾ 7 ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡರೆ, ಶ್ರೀಲಂಕಾ 6 ಸಲ ಟ್ರೋಫಿ ಗೆದ್ದುಕೊಂಡಿದೆ. ಇನ್ನು ಪಾಕಿಸ್ತಾನ್ 2 ಬಾರಿ ಕಪ್ ಗೆದ್ದಿದೆ.
ನೇಪಾಳ ತಂಡವು ಇದೇ ಮೊದಲ ಬಾರಿಗೆ ಏಷ್ಯಾಕಪ್ಗೆ ಅರ್ಹತೆ ಪಡೆದುಕೊಂಡಿದೆ. ಅದರಲ್ಲೂ ಚೊಚ್ಚಲ ಟೂರ್ನಿಯಲ್ಲೇ ಪಾಕಿಸ್ತಾನ್ ಹಾಗೂ ಭಾರತದ ವಿರುದ್ಧ ಆಡುವ ಅವಕಾಶ ಐಸಿಸಿ ಶ್ರೇಯಾಂಕದಲ್ಲಿ 15ನೇ ಸ್ಥಾನದಲ್ಲಿರುವ ನೇಪಾಳ ತಂಡಕ್ಕೆ ಸಿಕ್ಕಿದೆ.
ಏಷ್ಯಾಕಪ್ನಲ್ಲಿ 6 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ, ನೇಪಾಳ ಮತ್ತು ಪಾಕಿಸ್ತಾನ್ ತಂಡಗಳಿವೆ. ಇನ್ನು ಬಿ ಗುಂಪಿನಲ್ಲಿ ಅಫ್ಘಾನಿಸ್ತಾನ್, ಬಾಂಗ್ಲಾದೇಶ್ ಮತ್ತು ಶ್ರೀಲಂಕಾ ತಂಡಗಳಿವೆ.
ಪ್ರತಿ ತಂಡವು ತಮ್ಮ ಗುಂಪಿನ ಇತರೆ ತಂಡಗಳ ವಿರುದ್ಧ ಒಂದೊಂದು ಪಂದ್ಯವನ್ನಾಡಲಿದೆ. ಅಲ್ಲದೆ ಈ ಪಂದ್ಯಗಳಲ್ಲಿ ಗೆದ್ದು ಅಂಕ ಪಟ್ಟಿಗಳಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ತಂಡಗಳು ಸೂಪರ್ ಫೋರ್ ಹಂತಕ್ಕೇರಲಿದೆ.
ಹೆಸರೇ ಸೂಚಿಸುವಂತೆ ನಾಲ್ಕು ತಂಡಗಳ ಹಣಾಹಣಿ. ಅಂದರೆ ಮೊದಲ ಸುತ್ತಿನಿಂದ ನಾಲ್ಕು ತಂಡಗಳು ಸೂಪರ್-4 ಗೆ ಅರ್ಹತೆ ಪಡೆಯಲಿದೆ. ಇಲ್ಲಿ ನಾಲ್ಕು ತಂಡಗಳು ಪರಸ್ಪರ ಒಂದೊಂದು ಪಂದ್ಯಗಳನ್ನಾಡಲಿದೆ. ಈ ಪಂದ್ಯಗಳ ಬಳಿಕ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಫೈನಲ್ ಆಡಲಿದೆ. ಅಂದರೆ ಇಲ್ಲಿ ಯಾವುದೇ ಸೆಮಿಫೈನಲ್ ಇರುವುದಿಲ್ಲ.
ಆಗಸ್ಟ್ 30 ರಿಂದ ಶುರುವಾಗಲಿರುವ ಟೂರ್ನಿಯು ಸೆಪ್ಟೆಂಬರ್ 17 ರಂದು ಮುಗಿಯಲಿದೆ. ಅಂದರೆ ಸೆಪ್ಟೆಂಬರ್ 17 ರಂದು ಶ್ರೀಲಂಕಾದಲ್ಲಿ ಫೈನಲ್ ಪಂದ್ಯ ಜರುಗಲಿದೆ.
ಈ ಬಾರಿಯ ಏಷ್ಯಾಕಪ್ನಲ್ಲಿ ಫೈನಲ್ ಸೇರಿದಂತೆ ಒಟ್ಟು 13 ಪಂದ್ಯಗಳು ನಡೆಯಲಿದೆ. ಇದರಲ್ಲಿ 4 ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ ಉಳಿದ 9 ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯವಹಿಸಲಿದೆ.
ಸೆಪ್ಟೆಂಬರ್ 2 ರಂದು ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಶ್ರೀಲಂಕಾದ ಪಲ್ಲೆಕೆಲೆ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ.
ಏಷ್ಯಾಕಪ್ನ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಯಿಂದ ಶುರುವಾಗಲಿದೆ.
ಭಾರತ, ಶ್ರೀಲಂಕಾ ಮತ್ತು ಉಪಖಂಡದ ಇತರ ಕೆಲವು ಭಾಗಗಳಲ್ಲಿದ್ದರೆ ನೀವು ಏಷ್ಯಾಕಪ್ ಅನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ವೀಕ್ಷಿಸಬಹುದು.
ಡಿಸ್ನಿ ಹಾಟ್ ಸ್ಟಾರ್ ಮೊಬೈಲ್ ಆ್ಯಪ್ನಲ್ಲಿ ಈ ಬಾರಿಯ ಏಷ್ಯಾಕಪ್ನ್ನು ಉಚಿತವಾಗಿ ವೀಕ್ಷಿಸಬಹುದು.
ಏಷ್ಯಾಕಪ್ನ ಸಂಪೂರ್ಣ ವೇಳಾಪಟ್ಟಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
Published On - 6:46 pm, Tue, 29 August 23