Asia Cup 2023: ಭಾರತ-ಪಾಕಿಸ್ತಾನ್ ಪಂದ್ಯ ಎಷ್ಟು ಗಂಟೆಗೆ ಶುರು? ಇಲ್ಲಿದೆ ಮಾಹಿತಿ

| Updated By: ಝಾಹಿರ್ ಯೂಸುಫ್

Updated on: Aug 06, 2023 | 3:31 PM

Asia Cup 2023: ಏಷ್ಯಾಕಪ್ 2023 ಆಗಸ್ಟ್ 30 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಸೆಪ್ಟೆಂಬರ್ 17 ರಂದು ನಡೆಯಲಿದೆ. ಇನ್ನು ಈ ಟೂರ್ನಿಯ ಲೀಗ್​ ಹಂತದಲ್ಲಿ ಭಾರತ ತಂಡವು ಪಾಕಿಸ್ತಾನ್ ಹಾಗೂ ನೇಪಾಳ ವಿರುದ್ಧ ಸೆಣಸಲಿದೆ.

Asia Cup 2023: ಭಾರತ-ಪಾಕಿಸ್ತಾನ್ ಪಂದ್ಯ ಎಷ್ಟು ಗಂಟೆಗೆ ಶುರು? ಇಲ್ಲಿದೆ ಮಾಹಿತಿ
IND vs PAK
Follow us on

ಬಹುನಿರೀಕ್ಷಿತ ಏಷ್ಯಾಕಪ್ (Asia Cup 2023) ಟೂರ್ನಿಯ ವೇಳಾಪಟ್ಟಿ ಈಗಾಗಲೇ ಬಿಡುಗಡೆಯಾಗಿದೆ. ಆಗಸ್ಟ್ 30 ರಿಂದ ಶುರುವಾಗಲಿರುವ ಏಷ್ಯನ್ ದೇಶಗಳ ನಡುವಿನ ಕ್ರಿಕೆಟ್ ಕದನಕ್ಕೆ ಸೆಪ್ಟೆಂಬರ್​ 17 ರಂದು ತೆರೆ ಬೀಳಲಿದೆ. ಇನ್ನು ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಲಿದೆ. ಹಾಗೆಯೇ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಆಡಲಿದ್ದು, ಈ ಮ್ಯಾಚ್ ಸೆಪ್ಟೆಂಬರ್ 2 ರಂದು ನಡೆಯಲಿದೆ.

ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ:

ಈ ಬಾರಿಯ ಏಷ್ಯಾಕಪ್ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿರುವುದು ವಿಶೇಷ. ಅಂದರೆ ಏಷ್ಯಾಕಪ್ 2023 ರ ಆಯೋಜನೆಯ ಹಕ್ಕನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹೊಂದಿದೆ. ಆದರೆ ಪಾಕ್​ನಲ್ಲಿ ಟೂರ್ನಿ ಆಯೋಜಿಸಿದರೆ ಭಾರತ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿತ್ತು. ಅಲ್ಲದೆ ತಟಸ್ಥ ಸ್ಥಳದಲ್ಲಿ ಟೂರ್ನಿ ಆಯೋಜಿಸುವಂತೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್​ಗೆ ತಿಳಿಸಲಾಗಿತ್ತು.
ಅದರಂತೆ ಇದೀಗ ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ಭಾರತದ ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯವಹಿಸಲಿದೆ. ಹಾಗೆಯೇ ಪಾಕಿಸ್ತಾನದಲ್ಲಿ 4 ಪಂದ್ಯಗಳು ನಡೆಯಲಿದೆ.

ಪ್ರಾರಂಭಿಕ ಸಮಯ ನಿಗದಿ:

ಈ ಹಿಂದೆ ಏಷ್ಯಾಕಪ್​ನ ವೇಳಾಪಟ್ಟಿ ಬಿಡುಗಡೆಯಾಗಿದ್ದರೂ ಪಂದ್ಯಕ್ಕೆ ಸಮಯ ನಿಗದಿ ಮಾಡಿರಲಿಲ್ಲ. ಇದೀಗ ಎಲ್ಲಾ ಪಂದ್ಯಗಳನ್ನು ಮಧ್ಯಾಹ್ನ 3 ಗಂಟೆಯಿಂದ ಶುರು ಮಾಡಲು ನಿರ್ಧರಿಸಲಾಗಿದೆ. ಅದರಂತೆ ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯ ಸೆಪ್ಟೆಂಬರ್ 2 ರಂದು ಮಧ್ಯಾಹ್ನ 3 ಗಂಟೆಯಿಂದ ಆರಂಭವಾಗಲಿದೆ.

ಎರಡು ಗ್ರೂಪ್:

ಈ ಬಾರಿಯ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯಲಿದೆ. ಅಲ್ಲದೆ ಈ ಸಲ ಒಟ್ಟು 6 ತಂಡಗಳು ಕಣಕ್ಕಿಳಿಯಲಿದೆ. ಇದಕ್ಕಾಗಿ ತಲಾ 3 ತಂಡಗಳ ಎರಡು ಗ್ರೂಪ್​ಗಳನ್ನು ಮಾಡಲಾಗಿದೆ.

ಇಲ್ಲಿ ಎ ಗ್ರೂಪ್​ನಲ್ಲಿ ಭಾರತ, ನೇಪಾಳ ಹಾಗೂ ಪಾಕಿಸ್ತಾನ್ ತಂಡಗಳಿವೆ. ಹಾಗೆಯೇ ಬಿ ಗ್ರೂಪ್​ನಲ್ಲಿ ಬಾಂಗ್ಲಾದೇಶ್, ಶ್ರೀಲಂಕಾ ಹಾಗೂ ಅಪ್ಘಾನಿಸ್ತಾನ್ ತಂಡಗಳಿವೆ.

2 ಹಂತದಲ್ಲಿ ನಡೆಯಲಿರುವ ಟೂರ್ನಿ:

6 ತಂಡಗಳ ಕದನವನ್ನು 2 ಹಂತಗಳಲ್ಲಿ ಆಯೋಜಿಸಲಾಗುತ್ತದೆ. ಅಂದರೆ ಮೊದಲ ಹಂತದಲ್ಲಿ ಲೀಗ್ ಪಂದ್ಯಗಳು ನಡೆಯಲಿದೆ. ಇದಾದ ಬಳಿಕ ಎರಡು ಗ್ರೂಪ್​ಗಳ ಪಾಯಿಂಟ್ಸ್​​ ಟೇಬಲ್​ನಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ 4 ತಂಡಗಳು ಸೂಪರ್-4 ಹಂತಕ್ಕೇರಲಿದೆ.

ಸೂಪರ್-4 ಹಂತದಲ್ಲಿ ಎಲ್ಲಾ ತಂಡಗಳು ಪರಸ್ಪರ ಒಂದೊಂದು ಪಂದ್ಯವಾಡಲಿದೆ. ಇಲ್ಲಿಯೂ ಅಂಕ ಪಟ್ಟಿ ಇರಲಿದ್ದು, ಇದರಲ್ಲಿ ಅಗ್ರ ಎರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಫೈನಲ್ ಆಡಲಿವೆ.

ಏಷ್ಯಾಕಪ್ ವೇಳಾಪಟ್ಟಿ:

  1. ಆಗಸ್ಟ್ 30- ಪಾಕಿಸ್ತಾನ್ vs ನೇಪಾಳ (ಮುಲ್ತಾನ್)
  2. ಆಗಸ್ಟ್ 31- ಬಾಂಗ್ಲಾದೇಶ್ vs ಶ್ರೀಲಂಕಾ (ಕ್ಯಾಂಡಿ)
  3. ಸೆಪ್ಟೆಂಬರ್ 2- ಭಾರತ vs ಪಾಕಿಸ್ತಾನ್ (ಕ್ಯಾಂಡಿ)
  4. ಸೆಪ್ಟೆಂಬರ್ 3- ಬಾಂಗ್ಲಾದೇಶ್ vs ಅಫ್ಘಾನಿಸ್ತಾನ್ (ಲಾಹೋರ್)
  5. ಸೆಪ್ಟೆಂಬರ್ 4- ಭಾರತ vs ನೇಪಾಳ (ಕ್ಯಾಂಡಿ)
  6. ಸೆಪ್ಟೆಂಬರ್ 5- ಶ್ರೀಲಂಕಾ vs ಅಫ್ಘಾನಿಸ್ತಾನ್ (ಲಾಹೋರ್)

ಸೂಪರ್-4 ಹಂತದ ವೇಳಾಪಟ್ಟಿ:

  1. ಸೆಪ್ಟೆಂಬರ್ 6- A1 Vs B2 (ಲಾಹೋರ್)
  2. ಸೆಪ್ಟೆಂಬರ್ 9- B1 Vs B2 (ಕೊಲಂಬೊ)
  3. ಸೆಪ್ಟೆಂಬರ್ 10- A1 Vs A2 (ಕೊಲಂಬೊ)
  4. ಸೆಪ್ಟೆಂಬರ್ 12- A2 Vs B1 (ಕೊಲಂಬೊ)
  5. ಸೆಪ್ಟೆಂಬರ್ 14- A1 Vs B1 (ಕೊಲಂಬೊ)
  6. ಸೆಪ್ಟೆಂಬರ್ 15- A2 Vs B2 (ಕೊಲಂಬೊ)
  7. ಸೆಪ್ಟೆಂಬರ್ 17- ಫೈನಲ್ ಪಂದ್ಯ (ಕೊಲಂಬೊ)

ಇದನ್ನೂ ಓದಿ: Tilak Varma: ದಾಖಲೆಯೊಂದಿಗೆ ಹೊಸ ಇನಿಂಗ್ಸ್ ಆರಂಭಿಸಿದ ತಿಲಕ್ ವರ್ಮಾ

ಈ ಎಲ್ಲಾ ಪಂದ್ಯಗಳು ಮಧ್ಯಾಹ್ನ 3 ಗಂಟೆಯಿಂದ ಶುರುವಾಗಲಿದೆ. ಹಾಗೆಯೇ ಈ ಪಂದ್ಯಗಳ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್​ವರ್ಕ್​ ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಡಿಸ್ನಿ ಹಾಟ್​ಸ್ಟಾರ್ ಆ್ಯಪ್ ಹಾಗೂ ವೆಬ್​ಸೈಟ್​ನಲ್ಲೂ ಲೈವ್ ಸ್ಟ್ರೀಮಿಂಗ್ ಇರಲಿದೆ.