Tilak Varma: ದಾಖಲೆಯೊಂದಿಗೆ ಹೊಸ ಇನಿಂಗ್ಸ್ ಆರಂಭಿಸಿದ ತಿಲಕ್ ವರ್ಮಾ
Tilak Varma Record: ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ತಿಲಕ್ ವರ್ಮಾ 22 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 39 ರನ್ ಬಾರಿಸಿದ್ದರು.
Updated on:Aug 05, 2023 | 3:50 PM

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದ ಮೂಲಕ ಯುವ ಎಡಗೈ ದಾಂಡಿಗ ತಿಲಕ್ ವರ್ಮಾ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದರು. ತಮ್ಮ ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ತಿಲಕ್ ವರ್ಮಾ ಇದೀಗ ಹೊಸ ದಾಖಲೆಯನ್ನೂ ಕೂಡ ತಮ್ಮದಾಗಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ತಿಲಕ್ ವರ್ಮಾ 22 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 39 ರನ್ ಬಾರಿಸಿದ್ದರು. ಅಂದರೆ ಯುವ ದಾಂಡಿಗ 177.27 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದರು.

ಈ ಸ್ಟ್ರೈಕ್ನೊಂದಿಗೆ ಚೊಚ್ಚಲ ಟಿ20 ಪಂದ್ಯದಲ್ಲೇ ಅತ್ಯುತ್ತಮ ಸ್ಟ್ರೈಕ್ ರೇಟ್ನೊಂದಿಗೆ ಬ್ಯಾಟ್ ಬೀಸಿದ ಟೀಮ್ ಇಂಡಿಯಾ ಬ್ಯಾಟರ್ ಎಂಬ ದಾಖಲೆ ತಿಲಕ್ ವರ್ಮಾ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಇಶಾನ್ ಕಿಶನ್ ಹೆಸರಿನಲ್ಲಿತ್ತು.

2021 ರಲ್ಲಿ ಇಂಗ್ಲೆಂಡ್ ವಿರುದ್ಧದ ಪಾದಾರ್ಪಣೆ ಪಂದ್ಯದಲ್ಲಿ ಇಶಾನ್ ಕಿಶನ್ 175.00 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ್ದರು. ಈ ಮೂಲಕ ಅಜಿಂಕ್ಯ ರಹಾನೆ ಹಾಗೂ ರಾಹುಲ್ ದ್ರಾವಿಡ್ ಅವರ ದಾಖಲೆಗಳನ್ನು ಹಿಂದಿಕ್ಕಿದ್ದರು.

ಅಜಿಂಕ್ಯ ರಹಾನೆ 2011 ರಲ್ಲಿ ತಮ್ಮ ಚೊಚ್ಚಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 156.41 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದರು.

ಹಾಗೆಯೇ 2011 ರಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟಿ20 ಪಂದ್ಯವಾಡಿದ್ದ ರಾಹುಲ್ ದ್ರಾವಿಡ್ 147.61ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದರು.

ಇದೀಗ ತಮ್ಮ ಮೊದಲ ಪಂದ್ಯದಲ್ಲೇ 177.27 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ ತಿಲಕ್ ವರ್ಮಾ ಹೊಸ ದಾಖಲೆ ನಿರ್ಮಿಸಿರುವುದು ವಿಶೇಷ.
Published On - 3:50 pm, Sat, 5 August 23
























