ಏಷ್ಯಾಕಪ್ 2023 ಅಂತಿಮ ಹಂತಕ್ಕೆ ಬಂದು ನಿಂತಿದೆ. ಸೂಪರ್-4 ಹಂತದಲ್ಲಿ ಆಡಿದ 2 ಪಂದ್ಯಗಳಲ್ಲೂ ಭರ್ಜರಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ಫೈನಲ್ಗೆ ಲಗ್ಗೆಯಿಟ್ಟಿದೆ. ಇನ್ನು ಉಳಿದಿರುವ ಪ್ರಶ್ನೆ ಭಾರತ ತಂಡದ ಎದುರಾಳಿ ಯಾರು ಎಂಬುದು. ಇಲ್ಲಿ ಮುಂದಿನ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿದೆ. ಇದರಲ್ಲಿ ಗೆದ್ದ ತಂಡವು ಫೈನಲ್ಗೆ ಪ್ರವೇಶಿಸಿಸುವುದು ಖಚಿತ.
ಇಲ್ಲಿ ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಬಾಂಗ್ಲಾದೇಶ್ ವಿರುದ್ಧ ಆಡಲಿದ್ದು, ಇದರಲ್ಲಿ ಗೆದ್ದರೂ ಶಕೀಬ್ ಅಲ್ ಹಸನ್ ಪಡೆಗೆ ಫೈನಲ್ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.
ಇತ್ತ ಶ್ರೀಲಂಕಾ ಹಾಗೂ ಪಾಕಿಸ್ತಾನ್ ನಡುವಣ ಪಂದ್ಯದಲ್ಲಿ ಗೆದ್ದವರಿಗೆ ಫೈನಲ್ ಆಡುವ ಅವಕಾಶ ದೊರೆಯಲಿದೆ. ಹೀಗಾಗಿಯೇ ಶ್ರೀಲಂಕಾ ಹಾಗೂ ಪಾಕಿಸ್ತಾನ್ ಪಂದ್ಯವು ಸೆಮಿ ಫೈನಲ್ ಫೈಟ್ ಆಗಿ ಮಾರ್ಪಟ್ಟಿದೆ.
ಅಂದರೆ ಮುಂದಿನ ಪಂದ್ಯದಲ್ಲಿ ಪಾಕಿಸ್ತಾನ್ ಗೆದ್ದರೆ ಭಾರತ ಮತ್ತು ಪಾಕ್ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಒಂದು ವೇಳೆ ಶ್ರೀಲಂಕಾ ಜಯಿಸಿದರೆ ಟೀಮ್ ಇಂಡಿಯಾ ಎದುರಾಳಿ ಲಂಕಾ ಪಡೆ.
ಒಂದು ವೇಳೆ ಶ್ರೀಲಂಕಾ ಹಾಗೂ ಪಾಕಿಸ್ತಾನ್ ನಡುವಣ ಪಂದ್ಯವು ಮಳೆಯ ಕಾರಣ ರದ್ದಾದರೆ ಯಾರು ಫೈನಲ್ಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಇಲ್ಲಿ ಪಂದ್ಯ ರದ್ದಾದರೆ ಉಭಯ ತಂಡಗಳು ಒಂದೊಂದು ಅಂಕಗಳನ್ನು ಹಂಚಿಕೊಳ್ಳಲಿದೆ. ಇದರಿಂದ ಪಾಯಿಂಟ್ಸ್ ಟೇಬಲ್ನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಅಂದರೆ ಪ್ರಸ್ತುತ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಶ್ರೀಲಂಕಾ ತಂಡವೇ ಫೈನಲ್ಗೆ ಅರ್ಹತೆ ಪಡೆಯಲಿದೆ.
ಇದನ್ನೂ ಓದಿ: ಕಿಂಗ್ ಕೊಹ್ಲಿಯ 1 ಶತಕಕ್ಕೆ 10 ದಾಖಲೆಗಳು ಉಡೀಸ್..!
ಏಕೆಂದರೆ ಏಷ್ಯಾಕಪ್ ನಿಯಮದ ಪ್ರಕಾರ ಸೂಪರ್-4 ಹಂತದ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದ ತಂಡಗಳು ಫೈನಲ್ ಆಡಲಿವೆ. ಅದರಂತೆ ಪಾಕಿಸ್ತಾನ್ ಮತ್ತು ಶ್ರೀಲಂಕಾ ನಡುವಣ ಪಂದ್ಯ ಮಳೆಯಿಂದಾಗಿ ರದ್ದಾದರೆ ಲಂಕಾ ತಂಡವು ಫೈನಲ್ಗೆ ಎಂಟ್ರಿ ಕೊಡಲಿದೆ.
ಸೆಪ್ಟೆಂಬರ್ 17 ರಂದು ಏಷ್ಯಾಕಪ್ನ ಫೈನಲ್ ಪಂದ್ಯ ನಡೆಯಲಿದೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯ ಮಧ್ಯಾಹ್ನ 3 ಗಂಟೆಯಿಂದ ಶುರುವಾಗಲಿದೆ.